ಸಿನಿಮಾ ಎಂಬ ಬಣ್ಣದ ಲೋಕಕ್ಕೆ ದಿನೇ ದಿನೇ ಟ್ಯಾಲೆಂಟ್ ಇರುವ ನಿರ್ದೇಶಕರು ಹಾಗೂ ನಟ ನಟಿಯರು ಎಂಟ್ರಿ ಆಗ್ತಾನೆ ಇದೆ. ಇದೀಗ ರಿಚ್ಚಿ ಎಂಬ ಯುವ ನಟ ಸಿನಿಮಾಗೆ ರಿಚ್ಚಿ ಅಂತಾ ಟೈಟಲ್ ಇಟ್ಟುಕೊಂಡು ಗಾಂಧಿನಗರಕ್ಕೆ ಪಾದಾರ್ಪಣೆ ಮಾಡಿದ್ದಾರೆ. ನಟಿಸಿ, ನಿರ್ದೇಶಿಸಿ ಹಾಗೂ ನಿರ್ಮಾಣ ಮಾಡಿರುವ 'ರಿಚ್ಚಿ' ಚಿತ್ರಕ್ಕಾಗಿ ಖ್ಯಾತ ಗಾಯಕ ಕುನಾಲ್ ಗಾಂಜಾವಾಲ ಹಾಡಿರುವ "ಕಳೆದು ಹೋಗಿರುವೆ" ಎಂಬ ಹಾಡನ್ನ ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಗಾಯಕ ಕುನಾಲ್ ಗಾಂಜಾವಾಲ ಸ್ವತಃ ಹಾಡು ಬಿಡುಗಡೆ ಸಮಾರಂಭಕ್ಕೆ ಆಗಮಿಸಿ ಚಿತ್ರಕ್ಕೆ ಶುಭ ಕೋರಿದರು.
ಬಳಿಕ ಮಾತನಾಡಿದ ಅವರು, ಸಾಮಾನ್ಯವಾಗಿ ನಾನು ನನ್ನ ಹಾಡುಗಳ ಬಿಡುಗಡೆ ಸಮಯದಲ್ಲಿ ಹೆಚ್ಚು ಕಾಣಿಸಿಕೊಳ್ಳುವುದಿಲ್ಲ. ಆದರೆ, ಇಲ್ಲಿ ಸಂಗೀತ ನಿರ್ದೇಶಕ ಅಗಸ್ತ್ಯ ಸಂತೋಷ್ ಹಾಗೂ ರಿಚ್ಚಿ ಅವರಿಗಾಗಿ ಬಂದಿದ್ದೇನೆ. ಈ ಚಿತ್ರದಲ್ಲಿ ಎರಡು ಹಾಡುಗಳನ್ನು ಹಾಡಿದ್ದೇನೆ. ಒಂದು ಮೆಲೋಡಿ, ಮತ್ತೊಂದು ಪ್ಯಾಥೋ ಸಾಂಗ್. ಮೆಲೋಡಿ ಸಾಂಗ್ ಬಿಡುಗಡೆಯಾಗಿದೆ. ಅಗಸ್ತ್ಯ ಅವರ ಸಂಗೀತ ಸಂಯೋಜನೆ ಚೆನ್ನಾಗಿದೆ. ಚಿನ್ನಿ ಪ್ರಕಾಶ್ ಈ ಹಾಡಿಗೆ ನೃತ್ಯ ನಿರ್ದೇಶನ ಮಾಡಿದ್ದಾರೆ. ಗೌಸ್ ಫಿರ್ ಹಾಡು ಬರೆದಿದ್ದಾರೆ. 'ರಿಚ್ಚಿ' ಚಿತ್ರ ಭರ್ಜರಿ ಯಶಸ್ಸು ಕಾಣಲಿ ಎಂದು ಕುನಾಲ್ ಗಾಂಜಾವಾಲ ಶುಭ ಹಾರೈಸಿದರು.
2005ನೇ ಇಸವಿಯಲ್ಲಿ ದಿ. ಪುನೀತ್ ರಾಜಕುಮಾರ್ ನಟಿಸಿದ್ದ "ಆಕಾಶ್" ಚಿತ್ರದ ಹಾಡು ಹಾಡಲು ಬಂದಾಗ ಡಾ.ರಾಜಕುಮಾರ್ ಅವರನ್ನು ಭೇಟಿ ಮಾಡಿದ್ದೆ. ಅವರು ನನ್ನ ಕೈಗೊಂದು ಮುತ್ತು ಕೊಟ್ಟಿದ್ದರು. ಅದು ನನ್ನ ಜೀವನದಲ್ಲಿ ಮರೆಯಲಾಗದ ಘಟನೆ ಎಂದು ಸ್ಮರಿಸಿದ ಕುನಾಲ್ ಗಾಂಜಾವಾಲ, ಪುನೀತ್ ರಾಜಕುಮಾರ್ ಅವರೊಟ್ಟಿಗಿನ ಒಡನಾಟವನ್ನು ನೆನಪಿಸಿಕೊಂಡರು. ಆ ಚಿತ್ರದ ನೀನೇ ನೀನೇ ಹಾಡು ಸೂಪರ್ ಹಿಟ್ ಆಗಿ ನನಗೆ ದೊಡ್ಡ ಮಟ್ಟದ ಹೆಸರು ತಂದುಕೊಟ್ಟಿತ್ತು ಎಂದು ಹೇಳಿದರು.
ಇನ್ನು, ರಿಚ್ಚಿ ಚಿತ್ರವನ್ನ ನಟಿಸಿ, ನಿರ್ಮಾಣ ಮತ್ತು ನಿರ್ದೇಶನ ಮಾಡಿರೋ ರಿಚ್ಚಿ ಮಾತನಾಡಿ, ಇದೊಂದು ಪ್ರೇಮಕಥೆಯ ಚಿತ್ರ. ನಾನು ಚಿಕ್ಕಂದಿನಿಂದಲೇ ಕುನಾಲ್ ಗಾಂಜಾವಾಲ ಅವರ ಅಭಿಮಾನಿ. ನನ್ನ ಚಿತ್ರಕ್ಕೆ ಅವರು ಹಾಡಬೇಕೆಂಬುದು ನನ್ನ ಆಸೆ. ಅದು ಈಡೇರಿದೆ. ಎರಡು ಹಾಡುಗಳನ್ನು ಅವರು ಹಾಡಿದ್ದಾರೆ. ಒಂದು ಹಾಡು ಈಗ ಬಿಡುಗಡೆಯಾಗಿದೆ. ಕನ್ನಡ ಹಾಗೂ ಹಿಂದಿಯಲ್ಲಿ ಈ ಚಿತ್ರ ಬರಲಿದೆ ಎಂದರು.
ಈ ಚಿತ್ರಕ್ಕೆ ಅಗಸ್ತ್ಯ ಸಂತೋಷ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಈ ಸಂದರ್ಭದಲ್ಲಿ ಸಹ ನಿರ್ಮಾಪಕ ರಾಕೇಶ್ ರಾವ್, ಪ್ರಕೃತಿ ಬನವಾಸಿ, ನಿರ್ಮಾಪಕರಾದ ಅಣಜಿ ನಾಗರಾಜ್, ವೆಂಕಟೇಶ್ ಮುಂತಾದವರು ಹಾಡು ಬಿಡುಗಡೆ ಸಮಾರಂಭದಲ್ಲಿ ಉಪಸ್ಥಿತರಿದ್ದರು. ಟೈಟಲ್ನಿಂದಲೇ ಗಮನ ಸೆಳೆಯುತ್ತಿರೋ ರಿಚ್ಚಿ ಚಿತ್ರ ಆಗಸ್ಟ್ ತಿಂಗಳಲ್ಲಿ ತೆರೆಗೆ ತರಲು ನಾಯಕ, ನಿರ್ಮಾಪಕ ಹಾಗೂ ನಿರ್ದೇಶಕ ರಿಚ್ಚಿ ಪ್ಲಾನ್ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ: ದಿ ಕೇರಳ ಸ್ಟೋರಿ ಚಿತ್ರದ ಮೇಲೆ ಪಶ್ಚಿಮ ಬಂಗಾಳ ಸರ್ಕಾರದ ನಿಷೇಧ ಆದೇಶಕ್ಕೆ ಸುಪ್ರೀಂ ತಡೆ