ಬೆಂಗಳೂರು: ಕಾಲಿವುಡ್ ಹಿರಿಯ ನಟ ರಜನಿಕಾಂತ್ ಅಭಿನಯದ 'ಕೊಚ್ಚಾಡಿಯನ್' ಚಲನಚಿತ್ರ ಸಂಬಂಧ ಉಂಟಾದ ನಷ್ಟ ತುಂಬಿಕೊಡದ ಬಗ್ಗೆ ಮಾಧ್ಯಮಗಳು ಸುದ್ದಿ ಪ್ರಕಟಿಸದಂತೆ ನ್ಯಾಯಾಲಯದಿಂದ ನಿರ್ಬಂಧಕಾಜ್ಞೆ ಆದೇಶ ಪಡೆಯಲು ನಕಲಿ ದಾಖಲೆ ಸಲ್ಲಿಸಿದ ಪ್ರಕರಣಕ್ಕೆ ಸಂಬಂಧಿಸಿ ರಜನಿಕಾಂತ್ ಅವರ ಪತ್ನಿ ಲತಾ ಮಂಗಳವಾರ ನಗರದ ಎಸಿಎಂಎಂ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.
ಪೋರ್ಜರಿ ಪ್ರಕರಣದ ಸಂಬಂಧ ತಮ್ಮ ವಿರುದ್ಧದ ಆರೋಪಗಳನ್ನು ಕೈ ಬಿಡುವಂತೆ ಕೋರಿ ಲತಾ ರಜನಿಕಾಂತ್ ನಗರದ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಆರೋಪ ಜಾಮೀನು ರಹಿತ ಸ್ವರೂಪದ್ದಾಗಿದ್ದು, ಲತಾ ಜಾಮೀನು ಸಹ ಪಡೆದುಕೊಂಡಿರಲಿಲ್ಲ. ಇದರಿಂದ ಆರೋಪ ಕೈ ಬಿಡಲು ಕೋರಿ ಅವರೇ ನ್ಯಾಯಾಲಯಕ್ಕೆ ಖುದ್ದು ಹಾಜರಾಗಿ ಅರ್ಜಿ ಸಲ್ಲಿಸಬೇಕಾದ ಹಿನ್ನೆಲೆಯಲ್ಲಿ, 2024ರ ಜನವರಿ 6 ಅಥವಾ ಅದಕ್ಕೂ ಮೊದಲು ನ್ಯಾಯಾಲಯಕ್ಕೆ ಹಾಜರಾಗಬೇಕು ಎಂದು 2023ರ ಡಿಸೆಂಬರ್ 2ರಂದು ಸೂಚಿಸಲಾಗಿತ್ತು.
ಈ ಹಿನ್ನೆಲೆಯಲ್ಲಿ ಲತಾ ರಜನಿಕಾಂತ್ ಎಸಿಎಂಎಂ ನ್ಯಾಯಾಲಯದ ಮುಂದೆ ಹಾಜರಾದರು. ಈ ವೇಳೆ ಲತಾ ಅವರ ಪರ ವಕೀಲರು ಜಾಮೀನು ಕೋರಿ ಸಲ್ಲಿಸಿದ ಅರ್ಜಿ ಪುರಸ್ಕರಿಸಿದ ನ್ಯಾಯಾಧೀಶ ಆನಂದ್ ಕರಿಯಮ್ಮನವರ್ ಜಾಮೀನು ಮಂಜೂರು ಮಾಡಿದರು. ಒಂದು ಲಕ್ಷ ರೂಪಾಯಿ ಮೊತ್ತದ ವೈಯಕ್ತಿಕ ಬಾಂಡ್ ಮತ್ತು ಇಬ್ಬರ ಭದ್ರತಾ ಖಾತರಿ ಒದಗಿಸಬೇಕು. 25 ಸಾವಿರ ರೂ. ನಗದು ಪಾವತಿಸಬೇಕು. ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು. ನ್ಯಾಯಾಲಯದ ವಿಚಾರಣೆಗಳಿಗೆ ತಪ್ಪದೇ ಹಾಜರಾಗಬೇಕು ಎಂದು ಷರತ್ತು ವಿಧಿಸಿ ವಿಚಾರಣೆಯನ್ನು 2024ರ ಜನವರಿ 6ಕ್ಕೆ ಮುಂದೂಡಲಾಗಿದೆ.
ಕೋರ್ಟ್ ಕಲಾಪದ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಲತಾ, ತಾವು ಕಾನೂನಿಗೆ ಗೌರವ ಕೊಡುವ ಮಹಿಳೆ. ಕಾನೂನು ಪಾಲಿಸುವ ಉದ್ದೇಶದಿಂದ ಕೋರ್ಟ್‌ಗೆ ಹಾಜರಾಗಿದ್ದೆ. ತಾವು ಸೆಲೆಬ್ರಿಟಿ ಎನ್ನುವ ಕಾರಣಕ್ಕೆ ಪ್ರಕರಣ ದಾಖಲಿಸಲಾಗಿದೆ. ಮುಂದಿನದ್ದು ಕಾನೂನು ಪ್ರಕಾರ ನಡೆಯುತ್ತದೆ ಎಂದು ತಿಳಿಸಿದರು.
ಪ್ರಕರಣದ ಹಿನ್ನೆಲೆ: ರಜನಿಕಾಂತ್ ಅವರ ಪುತ್ರಿ ಕೊಚ್ಚಾಡಿಯನ್ ಸಿನಿಮಾವನ್ನು ನಿರ್ದೇಶಿಸಿದ್ದರು. ಆ ಚಿತ್ರದ ಸಂಬಂಧ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ ಮತ್ತು ಮೆರ್ಸಸ್ ಮೀಡಿಯಾ ಒನ್ ಗ್ಲೋಬಲ್ ಎಂಟರ್‌ಟೈನ್‌ಮೆಂಟ್ ಲಿಮಿಟೆಡ್ ನಡುವೆ ಆರ್ಥಿಕ ವಹಿವಾಟು ನಡೆದಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಅವರು ಸುಮಾರು 6.5 ಕೋಟಿ ರೂ.ಗೆ ಭದ್ರತಾ ಖಾತರಿ ನೀಡಿದ್ದರು. ಆದರೆ, ಚಿತ್ರ ನಷ್ಟಕ್ಕೆ ಗುರಿಯಾದರೂ ಮೆರ್ಸಸ್ ಆ್ಯಡ್ ಬ್ಯೂರೋ ಅಡ್ವರ್ಟೈಸ್ಮೆಂಟ್ ಪ್ರೈವೇಟ್ ಲಿಮಿಟೆಡ್ಗೆ ನಷ್ಟ ಪರಿಹಾರ ತುಂಬಿಕೊಟ್ಟಿರಲಿಲ್ಲ.
ಈ ವಿವಾದ ಪತ್ರಿಕೆ ಹಾಗೂ ಟಿವಿ ವಾಹಿನಿಗಳಲ್ಲಿ ಪ್ರಸಾರವಾಗಿತ್ತು. ಈ ಕುರಿತ ಸುದ್ದಿ ಪ್ರಸಾರ ಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಹೇರಬೇಕು ಎಂದು ಕೋರಿ ಲತಾ ಅರ್ಜಿ ಸಲ್ಲಿಸಿದ್ದರು. ಅದನ್ನು ಪುರಸ್ಕರಿಸಿದ್ದ ಬೆಂಗಳೂರು ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್, ಮಾಧ್ಯಮಗಳಿಗೆ ನಿರ್ಬಂಧಕಾಜ್ಞೆ ನೀಡಿ 2014ರ ಡಿಸೆಂಬರ್ 2ರಂದು ಆದೇಶಿಸಿತ್ತು.
ಆದರೆ, ಮಾಧ್ಯಮಗಳ ವಿರುದ್ಧ ನಿರ್ಬಂಧಕಾಜ್ಞೆ ಆದೇಶ ಪಡೆಯಲು ಬೆಂಗಳೂರು ಪ್ರೆಸ್‌ಕ್ಲಬ್ ಅಧೀನದಲ್ಲಿ ಇರದ ಸಂಸ್ಥೆಯೊಂದರ ನಕಲಿ ದಾಖಲೆ ಸಲ್ಲಿಸಿದ್ದಾರೆ ಎಂದು ಆರೋಪಿಸಿ ಲತಾ ಅವರ ವಿರುದ್ಧ ಆ್ಯಡ್ ಬ್ಯೂರೋ ಅಡ್ವರ್‌ಟೈಸ್ಮೆಂಟ್ ಪ್ರೈವೆಟ್ ಲಿಮಿಟೆಡ್ 2015ರ ಮೇ 30ರಂದು ಹಲಸೂರು ಗೇಟ್ ಪೊಲೀಸ್ ಠಾಣೆಗೆ ದೂರು ನೀಡಿತ್ತು. ಆ ಕುರಿತು ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಿದ್ದ ಪೊಲೀಸರು, ದೋಷಾರೋಪ ಪಟ್ಟಿ ಸಲ್ಲಿಸಿದ್ದರು.
ಇದನ್ನೂ ಓದಿ: ಕೊಚಾಡಿಯನ್ ಚಲನಚಿತ್ರ ಪ್ರಕರಣ : ಲತಾ ರಜನಿಕಾಂತ್ ಖುದ್ದು ಹಾಜರಿಗೆ ನ್ಯಾಯಾಲಯ ಸೂಚನೆ