ಕನ್ನಡ ಚಿತ್ರರಂಗದಲ್ಲಿ 'ಗಂಟುಮೂಟೆ' ಸಿನಿಮಾದ ಮೂಲಕ ಭರವಸೆಯ ನಿರ್ದೇಶಕಿಯಾಗಿ ಗುರುತಿಸಿಕೊಂಡಿರುವ ರೂಪಾ ರಾವ್ ಇದೀಗ 'ಕೆಂಡ' ಚಿತ್ರದ ಮೂಲಕ ನಿರ್ಮಾಪಕಿಯಾಗುತ್ತಿದ್ದಾರೆ. ಈ ಚಿತ್ರ ಒಂದಲ್ಲೊಂದು ವಿಚಾರಕ್ಕೆ ಗಾಂಧಿನಗರದಲ್ಲಿ ಸದ್ದು ಮಾಡುತ್ತಿದೆ. 'ಕೆಂಡ' ಚಿತ್ರತಂಡದಿಂದ ಮತ್ತೊಂದು ಸಮ್ಮೋಹಕ ವಿಚಾರ ಹೊರಬಿದ್ದಿದೆ. ಅಂತಾರಾಷ್ಟ್ರೀಯ ಸಿನಿಮಾ ನಿರ್ಮಾಣ ಸಂಸ್ಥೆಯಾದ ಕಿಲ್ಜಾಯ್ ಫಿಲಂಸ್ ಈ ಚಿತ್ರದ ನಿರ್ಮಾಣದಲ್ಲಿ ಸಾಥ್ ಕೊಟ್ಟಿದೆ. ಈ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಸಿನಿಮಾ ಪ್ರೇಮಿಗಳನ್ನು ಪರಿಣಾಮಕಾರಿಯಾಗಿ ತಲುಪಬಹುದು.
- " class="align-text-top noRightClick twitterSection" data="">
ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗದ ಪ್ರತಿಭೆಗಳು ರಾಜ್ಯದ ಗಡಿ ದಾಟಿ ತಮ್ಮ ಕಲೆ ಪ್ರದರ್ಶನ ಮಾಡುತ್ತಿದ್ದಾರೆ. 'ಕೆಂಡ'ದ ಮೂಲಕ ದಾಖಲಾಗಿರುವ ಈ ದಾಖಲೆ ಆ ಎಲ್ಲ ಪ್ರತಿಭೆಗಳಿಗೆ ಮತ್ತಷ್ಟು ಮೆರುಗು ತಂದಿದೆ. ಕಿಲ್ಜಾಯ್ ಫಿಲಂಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಾನ್ಯತೆ ಮತ್ತು ಘನತೆ ಹೊಂದಿರುವ ನಿರ್ಮಾಣ ಸಂಸ್ಥೆ. ನ್ಯೂಯಾರ್ಕ್ ಹಾಗೂ ಬರ್ಲಿನ್ ಮೂಲದ ಈ ಸಂಸ್ಥೆಯು ಬಾಫ್ಟಾ, ಆಸ್ಕರ್ನಂತಹ ಪ್ರಶಸ್ತಿ ಪಡೆದುಕೊಂಡ ಅನೇಕ ಸಿನಿಮಾಗಳನ್ನು ನಿರ್ಮಿಸಿದೆ. ಈ ಸಂಸ್ಥೆಯಿಂದ ಹಲವಾರು ಪ್ರತಿಭಾನ್ವಿತ ನಿರ್ದೇಶಕರು ಪ್ರವರ್ಧಮಾನಕ್ಕೆ ಬಂದಿದ್ದಾರೆ.
ಕಿಲ್ಜಾಯ್ 'ಕೆಂಡ' ಚಿತ್ರದ ವಿತರಣಾ ಹಕ್ಕುಗಳನ್ನು ಪಡೆದುಕೊಂಡಿದೆ. ಅದಲ್ಲದೇ, ಹೆಮ್ಮೆಯಿಂದ ಈ ವಿಚಾರವನ್ನು ಅಧಿಕೃತವಾಗಿ ಘೋಷಿಸಿದೆ. ಈ ಸಂಸ್ಥೆ ವ್ಯವಹಾರಿಕವಾಗಿ ಮುಂದುವರೆಯಬೇಕೆಂದರೆ ಸಾಕಷ್ಟು ಕಟ್ಟುನಿಟ್ಟಾದ ಮಾನದಂಡಗಳನ್ನು ಹೊಂದಿದೆ. ಅದೆಲ್ಲದರಲ್ಲಿ ನಿರ್ದೇಶಕ ಸಹದೇವ್ ಕೆಲವಡಿ ಪಾಸ್ ಆಗಿದ್ದಾರೆ.
ಈ ಸಿನಿಮಾವನ್ನು ಸಹದೇವ್ ಕಟ್ಟಿಕೊಟ್ಟಿರುವ ರೀತಿಗೆ ಈ ಸಂಸ್ಥೆಯ ಮಂದಿ ಖುಷಿಯಾಗಿದ್ದಾರೆ. ಇದು ಕೆಂಡ ಚಿತ್ರ ತಂಡದಲ್ಲಿ ಹೊಸ ಹುರುಪು ಮೂಡಿಸಿದೆ. ಜೊತೆಗೆ, ಕಿಲ್ಜಾಯ್ ಸಂಸ್ಥೆಯ ಮೂಲಕ ಕೆಂಡ ವಿಶ್ವಾದ್ಯಂತ ಕಮಾಲ್ ಮಾಡಲಿದೆ. ಹಾಗೆಯೇ, ಸಹದೇವ್ ಕೆಲವಡಿ ನಿರ್ದೇಶಕರಾಗಿ ವಿಶ್ವಮಟ್ಟದಲ್ಲಿ ಗಮನ ಸೆಳೆಯುವ ಲಕ್ಷಣಗಳು ದಟ್ಟವಾಗಿವೆ. ಈ ಪಲ್ಲಟದಿಂದಾಗಿ ರೂಪಾ ರಾವ್ ಮತ್ತು ಸಹದೇವ್ ಸಾರಥ್ಯದ ಅಮೇಯುಕ್ತಿ ಸ್ಟುಡಿಯೋಸ್ ಎಂಬ ನಿರ್ಮಾಣ ಸಂಸ್ಥೆಗೂ ಮತ್ತಷ್ಟು ಶಕ್ತಿ ಬಂದಿದೆ. ರಂಗಭೂಮಿ ಪ್ರತಿಭೆಗಳೇ ಚಿತ್ರದಲ್ಲಿ ಪ್ರಧಾನ ಪಾತ್ರಗಳನ್ನು ನಿರ್ವಹಿಸಿದ್ದಾರೆ.
ಬಿ.ವಿ.ಭರತ್, ಪ್ರಣವ್ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ ದೇಶಪಾಂಡೆ ಮುಂತಾದವರ ತಾರಾಗಣ ಚಿತ್ರದಲ್ಲಿದೆ.