ಸಿಸಿಎಲ್ ಕ್ರಿಕೆಟ್ ಮೂಲಕ ಕನ್ನಡ ಚಿತ್ರರಂಗದಲ್ಲಿ ತನ್ನದೇ ಐಡೆಂಟಿಟಿ ಹೊಂದಿರುವ ನಟ ರಾಜೀವ್. ಸದ್ಯ ಉಸಿರೇ ಉಸಿರೇ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ರಾಜೀವ್ ಅವರ ಈ ಸಿನಿಮಾದಲ್ಲಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಈ ಚಿತ್ರದ ಶೂಟಿಂಗ್ ಮುಗಿಸಿರುವ ಕಿಚ್ಚ ತಮ್ಮ ಹುಟ್ಟುಹಬ್ಬದ ಹಿಂದಿನ ದಿನ ಈ ಚಿತ್ರದ ಡಬ್ಬಿಂಗ್ ಮುಗಿಸಿದ್ದಾರೆ. ಸುದೀಪ್ ಡಬ್ಬಿಂಗ್ ಮಾಡುವ ವಿಡಿಯೋವನ್ನ ಚಿತ್ರತಂಡ ರಿವೀಲ್ ಮಾಡಿದೆ.
"ಇದೊಂದು ನವೀರಾದ ಪ್ರೇಮ ಕಥೆ. ಇದು ನನ್ನ ಮೊದಲ ನಿರ್ಮಾಣದ ಚಿತ್ರ. ಚಿತ್ರ ನಿರ್ಮಾಣ ಮಾಡಲು ಕಿಚ್ಚ ಸುದೀಪ್ ಅವರೇ ಸ್ಫೂರ್ತಿ. ಅವರು ನನ್ನ ಬೆನ್ನೆಲುಬಾಗಿ ನಿಂತರು. ಜತೆಗೆ ಪ್ರಮುಖ ಪಾತ್ರದಲ್ಲಿ ಅಭಿನಯ ಕೂಡ ಮಾಡಿದ್ದಾರೆ. ಸುದೀಪ್ ಅವರಿಗೆ ಹಾಗೂ ನನ್ನ ಇಡೀ ತಂಡಕ್ಕೆ ಧನ್ಯವಾದ" ಎನ್ನುತ್ತಾರೆ ನಿರ್ಮಾಪಕ ಪ್ರದೀಪ್ ಯಾದವ್.
ಇದನ್ನೂ ಓದಿ: ಒಂದು ಮಿಲಿಯನ್ಗೂ ಅಧಿಕ ವೀಕ್ಷಣೆ ಕಂಡ 'ಉಸಿರೇ ಉಸಿರೇ' ಟೀಸರ್... ಅದೃಷ್ಟ ಪರೀಕ್ಷೆಗಿಳಿದ ರಾಜೀವ್
ಸಿನಿಮಾದ ಚಿತ್ರೀಕರಣ ಮುಕ್ತಾಯವಾಗಿ, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಎಲ್ಲಾ ಅಂದುಕೊಂಡಂತೆ ಆದರೆ ಆಕ್ಟೋಬರ್ ತಿಂಗಳಿನಲ್ಲಿ ಚಿತ್ರ ತೆರೆಗೆ ಬರುವ ಸಾಧ್ಯತೆಗಳಿವೆ. "ಉಸಿರೇ ಉಸಿರೇ" ಚಿತ್ರದಲ್ಲಿ ಕಲಾವಿದರ ದಂಡೇ ಇದೆ. ರಾಜೀವ್ ಅವರಿಗೆ ನಾಯಕಿಯಾಗಿ ಶ್ರೀಜಿತ ನಟಿಸಿದ್ದಾರೆ. ಕಿಚ್ಚ ಸುದೀಪ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
'ತೆಲುಗಿನ ಖ್ಯಾತ ನಟ ಡಾ. ಅಲಿ ಹಾಗೂ ಪದ್ಮಭೂಷಣ ಪ್ರಶಸ್ತಿ ವಿಜೇತರು, ಅತೀ ಹೆಚ್ಚು ಸಿನಿಮಾಗಳಲ್ಲಿ ನಟಿಸಿ ಗಿನ್ನೆಸ್ ರೆಕಾರ್ಡ್ ಮಾಡಿರುವ ಬ್ರಹ್ಮಾನಂದಂ ಮೊದಲ ಬಾರಿಗೆ ನಮ್ಮ ಚಿತ್ರದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್, ಸಾಧು ಕೋಕಿಲ, ಮಂಜು ಪಾವಗಡ, ತಾರಾ, ಸುಚೇಂದ್ರ ಪ್ರಸಾದ್, ರಾಜೇಶ್ ನಟರಂಗ, ಶೈನಿಂಗ್ ಸೀತಾರಾಮು, ಜಗಪ್ಪ, ಸುಶ್ಮಿತಾ ಮುಂತಾದವರ ತಾರಾಬಳಗವಿದೆ ಎನ್ನುತ್ತಾರೆ' ನಿರ್ದೇಶಕ ಸಿ.ಎಂ.ವಿಜಯ್.
ಮನು ಛಾಯಾಗ್ರಹಣ, ಕೆ.ಎಂ ಪ್ರಕಾಶ್ ಸಂಕಲನ, ಟೈಗರ್ ಶಿವು ಸಾಹಸ ನಿರ್ದೇಶನ ಹಾಗೂ ಮೋಹನ್ ಮತ್ತು ಹೈಟ್ ಮಂಜು ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ವಿವೇಕ್ ಚಕ್ರವರ್ತಿ ಸಂಗೀತ ಸಂಯೋಜನೆ ಮಾಡುತ್ತಿದ್ದಾರೆ. ಬಹುತೇಕ ಶೂಟಿಂಗ್ ಮುಗಿಸಿರುವ ಉಸಿರೇ ಉಸಿರೇ ಚಿತ್ರ ಮುಂದಿನ ತಿಂಗಳು ಪ್ರೇಕ್ಷಕರ ಮುಂದೆ ಬರುವ ನಿರೀಕ್ಷೆಯಿದೆ.
ಇದನ್ನೂ ಓದಿ: ಹುಟ್ಟು ಹಬ್ಬದ ಸಂಭ್ರಮದಲ್ಲಿ 'ಅಭಿನಯ ಚಕ್ರವರ್ತಿ': ನೆಚ್ಚಿನ 'ನಲ್ಲ'ನಿಗೆ ಪತ್ನಿಯಿಂದ ಸ್ಪೆಷಲ್ ಸರ್‌ಪ್ರೈಸ್!
ಚಿತ್ರದ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ: ಕನ್ನಡ ಬಿಗ್ ಬಾಸ್ ಖ್ಯಾತಿಯ ನಟ ರಾಜೀವ್ ನಾಯಕರಾಗಿ ನಟಿಸಿರುವ "ಉಸಿರೇ ಉಸಿರೇ" ಚಿತ್ರಕ್ಕಾಗಿ ಪ್ರೇಮಕವಿ ಕೆ. ಕಲ್ಯಾಣ್ ಬರೆದಿರುವ "ಉಸಿರೇ ನನ್ನ ಉಸಿರೇ" ಎಂಬ ಚಿತ್ರದ ಮೊದಲ ಹಾಡು ಇತ್ತೀಚೆಗೆ ಬಿಡುಗಡೆಯಾಗಿತ್ತು. ವಿವೇಕ್ ಚಕ್ರವರ್ತಿ ಸಂಗೀತ ನೀಡಿದ್ದು, ವಾಸುಕಿ ವೈಭವ್ ಹಾಡಿರುವ ಈ ಹಾಡು ಸಖತ್ ಸೌಂಡ್ ಮಾಡುತ್ತಿದೆ. ಖ್ಯಾತ ಸಂಗೀತ ನಿರ್ದೇಶಕ, ಗಾಯಕ ಗುರುಕಿರಣ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಭಾ.ಮ ಹರೀಶ್ ಹಾಗೂ ಭೀಮ ಜ್ಯುವೆಲರ್ಸ್ನ ಮಾಲೀಕರಾದ ವಿಷ್ಣು ಭಟ್ ಹಾಡು ಬಿಡುಗಡೆ ಮಾಡಿದ್ದರು.
ಇದನ್ನೂ ಓದಿ: ಬಿಗ್ ಬಾಸ್ ಖ್ಯಾತಿಯ ರಾಜೀವ್ ಅಭಿನಯದ ಉಸಿರೇ ಉಸಿರೇ ಚಿತ್ರದ ಮೊದಲ ಹಾಡಿಗೆ ಫ್ಯಾನ್ಸ್ ಫಿದಾ