ಶ್ರೀನಗರ (ಜಮ್ಮು ಮತ್ತು ಕಾಶ್ಮೀರ): ತಮ್ಮ ಮುಂಬರುವ ಸಿನಿಮಾಗಳ ಚಿತ್ರೀಕರಣಕ್ಕಾಗಿ ಪ್ರಸಿದ್ಧ ಬಾಲಿವುಡ್ ನಿರ್ದೇಶಕರು ಮತ್ತು ತಾರೆಯರು ಈ ವರ್ಷ ಕಾಶ್ಮೀರಕ್ಕೆ ಪ್ರಯಾಣಿಸಿದ್ದಾರೆ. ಪ್ರವಾಸಿಗರನ್ನು ಹೆಚ್ಚಾಗಿ ಆಕರ್ಷಿಸುವ ಕಣಿವೆ ನಾಡಿನಲ್ಲಿ ಹಿಂದಿ ಸಿನಿಮಾಗಳ ಶೂಟಿಂಗ್ ಮಾಡಲಾಗುತ್ತಿದೆ. ಕಾಶ್ಮೀರದಲ್ಲಿನ ಕೆಲವು ಪ್ರದೇಶಗಳು ಸಿನಿಮಾದಲ್ಲಿನ ಲವ್, ರೊಮ್ಯಾಂಟಿಕ್ ಸೀನ್ಗಳನ್ನು ಸೆರೆಹಿಡಿಯಲು ಅದ್ಭುತ ಸ್ಥಳವಾಗಿದೆ. ಹೀಗಾಗಿ ಬಾಲಿವುಡ್ ಚಿತ್ರರಂಗ ಹೆಚ್ಚಾಗಿ ಕಾಶ್ಮೀರದ ಕಡೆಗೆ ತಮ್ಮ ಒಲವು ತೋರಿಸುತ್ತಿದೆ.
ಮಾರ್ಚ್ ಆರಂಭದಲ್ಲಿ ನಟ ರಣವೀರ್ ಸಿಂಗ್ ಮತ್ತು ನಟಿ ಆಲಿಯಾ ಭಟ್ "ರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿ" ಸಿನಿಮಾದ ಲವ್ ಸಾಂಗ್ ಅನ್ನು ಚಿತ್ರೀಕರಿಸಲು ಕಾಶ್ಮೀರದ ಪಹಲ್ಗಾಮ್ಗೆ ತೆರಳಿದ್ದರು. ಬಳಿಕ ಹೆಸರಾಂತ ಬಾಲಿವುಡ್ ನಟ ಸಂಜಯ್ ದತ್ ತಮ್ಮ ಮುಂಬರುವ ಚಲನಚಿತ್ರ 'ಲಿಯೋ'ನ ತಮಿಳು ಆವೃತ್ತಿಯನ್ನು ಚಿತ್ರೀಕರಿಸಲು ಅಲ್ಲಿಗೆ ಭೇಟಿ ನೀಡಿದ್ದರು. ಇದೀಗ 'ಸತ್ಯ ಪ್ರೇಮ್ ಕಿ ಕಥಾ' ಸಿನಿಮಾದ ಕೊನೆಯ ಹಂತದ ಚಿತ್ರೀಕರಣಕ್ಕಾಗಿ ಬಾಲಿವುಡ್ ತಾರೆಯರಾದ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಬುಧವಾರ ಗಂಡರ್ಬಾಲ್ ಪ್ರದೇಶದ ಜನಪ್ರಿಯ ಪ್ರವಾಸಿ ತಾಣವಾದ ಸೋನಾಮಾರ್ಗ್ಗೆ ತೆರಳಿದ್ದಾರೆ.
ಕಾರ್ತಿಕ್ ಮತ್ತು ಕಿಯಾರಾ ತಮ್ಮ 'ಸತ್ಯ ಪ್ರೇಮ್ ಕಿ ಕಥಾ' ಸಿನಿಮಾದ ಶೂಟಿಂಗ್ ಅನ್ನು ಸೋನಾಮಾರ್ಗ್ನಲ್ಲಿ ಪ್ರಾರಂಭಗೊಳಿಸಿದ್ದಾರೆ ಎಂದು ಚಿತ್ರತಂಡದ ಸಿಬ್ಬಂದಿಯೊಬ್ಬರು ಈಟಿವಿ ಭಾರತ್ಗೆ ತಿಳಿಸಿದ್ದಾರೆ. ಈ ಮಧ್ಯೆ ಕಣಿವೆ ನಾಡಿನ ಬ್ಯೂಟಿಫುಲ್ ಫೋಟೋಗಳನ್ನು ಸಿನಿ ತಾರೆಯರು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಭಿಮಾನಿಗಳಿಗೆ ತಮ್ಮ ಸಿನಿಮಾದ ಬಗ್ಗೆ ಮತ್ತು ಅಲ್ಲಿನ ಹವಮಾನದ ಬಗ್ಗೆ ಅಪ್ಡೇಟ್ ನೀಡುತ್ತಿದ್ದಾರೆ.
ಕಾಶ್ಮೀರದ ಹಿಮದಿಂದ ಆವೃತವಾದ ಪರ್ವತಗಳಲ್ಲಿ ಪ್ರಣಯದ ಹಾಡನ್ನು ಚಿತ್ರೀಕರಿಸಲಾಗಿದೆ. ಸಿನಿಮಾವು ಕೊನೆಯ ಹಂತದ ನಿರ್ಮಾಣದಲ್ಲಿದೆ. 'ಸತ್ಯ ಪ್ರೇಮ್ ಕಿ ಕಥಾ' ಹಿಂದಿ ಲವ್ ರೊಮ್ಯಾಂಟಿಕ್ ಸಿನಿಮಾವಾಗಿದ್ದು, ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಗಜರಾಜ್ ರಾವ್ ಮತ್ತು ಸುಪ್ರಿಯಾ ಪಾಠಕ್ ಇದ್ದಾರೆ. ಜೂನ್ 29 ರಂದು, ಮರಾಠಿ ಚಲನಚಿತ್ರ ನಿರ್ಮಾಪಕ ಸಮೀರ್ ವಿದ್ವಾನ್ಸ್ ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಲಿದ್ದಾರೆ. ಇದಕ್ಕೂ ಮೊದಲು ಕೊನೆಯದಾಗಿ 'ಬೂಲ್ ಭುಲೈಯಾ ಚಿತ್ರದಲ್ಲಿ ಕಾರ್ತಿಕ್ ಆರ್ಯನ್ ಮತ್ತು ಕಿಯಾರಾ ಅಡ್ವಾಣಿ ತೆರೆ ಮೇಲೆ ಜೊತೆಯಾಗಿ ಕಾಣಿಸಿಕೊಂಡಿದ್ದರು.
ಈ ಸಿನಿಮಾದ ಜೊತೆಗೆ ಕಿಯಾರಾ ಅಡ್ವಾಣಿ ಟಾಲಿವುಡ್ ನಟ ರಾಮ್ ಚರಣ್ ಅಭಿನಯದ ಗೇಮ್ ಚೇಂಜರ್ ಸಿನಿಮಾದಲ್ಲಿಯೂ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಈ ಚಿತ್ರ RC 15 ಎಂದು ಅನೌನ್ಸ್ ಆಗಿತ್ತು. ಆದರೆ ಇತ್ತೀಚೆಗೆ ರಾಮ್ ಚರಣ್ ಹುಟ್ಟುಹಬ್ಬಕ್ಕೆ ನಿರ್ದೇಶಕ ಶಂಕರ್ ಅವರು ಗೇಮ್ ಚೇಂಜರ್ ಎನ್ನುವ ಟೈಟಲ್ ಕೂಡ ರಿವೀಲ್ ಮಾಡಿದ್ದರು. ಸಿನಿಮಾ ತೆಲುಗು, ತಮಿಳು ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ಬರಲಿದೆ. ಚಿತ್ರದಲ್ಲಿ ರಾಮ್ ಚರಣ್ ಮತ್ತು ಕಿಯಾರಾ ಅಡ್ವಾಣಿ ಜೊತೆಗೆ ಎಸ್‌ಜೆ ಸೂರ್ಯ, ಜಯರಾಮ್, ಅಂಜಲಿ ಮತ್ತು ಶ್ರೀಕಾಂತ್ ಕೂಡ ನಟಿಸಿದ್ದಾರೆ.
ಇದನ್ನೂ ಓದಿ: ಒಂದು ವಾರದೊಳಗೆ 100 ಕೋಟಿ ಕ್ಲಬ್ ಸೇರಿದ 'ದಸರಾ': ಗೆಲುವಿನ ನಗೆ ಬೀರಿದ ಟಾಲಿವುಡ್