ಅಕಿರ, ಕನ್ನಡಕ್ಕಾಗಿ ಒಂದನ್ನು ಒತ್ತಿ ಮತ್ತು ಲಂಕೆ ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟಿ ಕೃಷಿ ತಾಪಂಡ. ರಿಯಾಲಿಟಿ ಶೋ, ಜಾಹೀರಾತುಗಳಲ್ಲಿ ಗುರುತಿಸಿಕೊಂಡಿರುವ ಮಲೆನಾಡ ಬೆಡಗಿ ಕೃಷಿ ತಾಪಂಡ ಸದ್ಯ 'ರೂಪಾಯಿ' ಎಂಬ ಶೀರ್ಷಿಕೆಯ ಹೊಸ ಚಿತ್ರದೊಂದಿಗೆ ಸಿನಿ ಪ್ರಿಯರ ಮುಂದೆ ಬರುತ್ತಿದ್ದಾರೆ. ಯುವ ಪ್ರತಿಭೆ ವಿಜಯ್ ಜಗದಾಲ್ ಅಭಿನಯಿಸಿ, ನಿರ್ದೇಶನ ಮಾಡಿರುವ 'ರೂಪಾಯಿ' ಚಿತ್ರದಲ್ಲಿ ವಿಜಯ್ ಜಗದಾಲ್ ಅವರಿಗೆ ಜೋಡಿಯಾಗಿ ಕೃಷಿ ತಾಪಂಡ ಸ್ಕ್ರೀನ್ ಶೇರ್ ಮಾಡಿಕೊಂಡಿದ್ದಾರೆ.
ಖಾರಾಬಾತ್ ಹಾಡು ಬಿಡುಗಡೆ: ಇತ್ತೀಚೆಗೆ ಚಿತ್ರದ ಮೋಷನ್ ಪೋಸ್ಟರ್ ಅನ್ನು ಸ್ಯಾಂಡಲ್ವುಡ್ನ ನಟರಾಕ್ಷಸ ಡಾಲಿ ಧನಂಜಯ್ ಬಿಡುಗಡೆ ಮಾಡಿದ್ದರು. ಇದೀಗ ರೂಪಾಯಿ ಚಿತ್ರದ ಬೊಂಬಾಟ್ ಹಾಡು ರಿವೀಲ್ ಆಗಿದೆ. ಖಾರಾಬಾತ್ ಸಾಮಾನ್ಯವಾಗಿ ಎಲ್ಲರಿಗೂ ಪ್ರಿಯವಾಗುವ ಖಾದ್ಯ. ಈ "ಖಾರಾಬಾತ್" ಅನ್ನು ಕೇಂದ್ರವಾಗಿಟ್ಟುಕೊಂಡೇ ವಿಜಯ್ ಜಗದಾಲ್ ಅವರು ತಮ್ಮ ರೂಪಾಯಿ ಚಿತ್ರಕ್ಕೆ ಹಾಡೊಂದನ್ನು ಬರೆದಿದ್ದಾರೆ. ಖ್ಯಾತ ಗಾಯಕಿ ಸುಪ್ರಿಯಾ ರಾಮ್ ಈ ಹಾಡನ್ನು ಹಾಡಿದ್ದಾರೆ. ಈ ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆ ಆಗಿದೆ. ಈ ಹಾಡು ಜನರ ಮನ ಗೆಲ್ಲುತ್ತಿದೆ. ಆನಂದ್ ರಾಜ್ ವಿಕ್ರಮ್ ಸಂಗೀತ ನೀಡಿದ್ದಾರೆ.
ರೂಪಾಯಿ ಚಿತ್ರತಂಡ: ವಿಜಯ್ ಜಗದಾಲ್ ಈ ರೂಪಾಯಿ ಚಿತ್ರವನ್ನು ನಿರ್ದೇಶಿಸಿದ್ದಾರೆ. ಜೊತೆಗೆ ನಾಯಕನ ಪಾತ್ರದಲ್ಲಿಯೂ ನಟಿಸಿದ್ದಾರೆ. ಕೃಷಿ ತಾಪಂಡ, ಚಂದನ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಪ್ರಮುಖ ಪಾತ್ರದಲ್ಲಿ ಅಭಿನಯ ಮಾಡಿದ್ದಾರೆ.
ಇದನ್ನೂ ಓದಿ: ಪತ್ರದ ಮೂಲಕ ನಿಮ್ಮ ಮನೆಗೂ ಬರಲಿದೆ 'ಹೊಂದಿಸಿ ಬರೆಯಿರಿ'.. ಸಿನಿಮಾ ಪ್ರಚಾರದಲ್ಲಿ ಚಿತ್ರತಂಡ
ರೂಪಾಯಿ ಮಹತ್ವ ಸಾರುವ ಸಿನಿಮಾ: ರೂಪಾಯಿ ಮಹತ್ವ ಸಾರುವ ಈ ಚಿತ್ರದಲ್ಲಿ, ಕಾಮಿಡಿ, ಸೆಂಟಿಮೆಂಟ್ ಹೀಗೆ ಎಲ್ಲ ಅಂಶಗಳು ಇವೆ. ವಿವಿಧ್ ಸಿನಿಮಾಸ್ ಲಾಂಛನದಲ್ಲಿ ಮಂಜುನಾಥ್ ಎಂ, ಹರೀಶ್ ಬಿ.ಕೆ ಮತ್ತು ವಿನೋದ್ ಎನ್ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಆರ್.ಡಿ ನಾಗಾರ್ಜುನ ಛಾಯಾಗ್ರಹಣ ಹಾಗೂ ಶಿವರಾಜ್ ಮೇಹು ಸಂಕಲನವಿರುವ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕರು ಸುನಿವಿನಿ. ಸದ್ಯ ಖಾರಾಬಾತ್ ಹಾಡಿನಿಂದ ಸದ್ದು ಮಾಡುತ್ತಿರುವ ಚಿತ್ರದ ಟ್ರೇಲರ್ ಫೆಬ್ರವರಿ 1 ರಂದು ರಿಲೀಸ್ ಆಗಲಿದೆ. ಕುತೂಹಲ ಹುಟ್ಟಿಸಿರುವ ಈ ಚಿತ್ರ ಫೆಬ್ರವರಿ 10ರಂದು ತೆರೆಗೆ ಬರಲಿದೆ.
ಇದನ್ನೂ ಓದಿ: ರೂಪಾಯಿ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬರ್ತಾ ಇರೋ ಕೃಷಿ ತಾಪಂಡ
ರೂಪಾಯಿ ಮೋಷನ್ ಪೋಸ್ಟರ್: ಸದ್ದಿಲ್ಲದೇ ಶೂಟಿಂಗ್ ಮುಗಿಸಿರುವ ರೂಪಾಯಿ ಚಿತ್ರತಂಡ ಕೆಲ ದಿನಗಳ ಹಿಂದೆ ಮೋಷನ್ ಪೋಸ್ಟರ್ ರಿಲೀಸ್ ಮಾಡಿದೆ. ಡಾಲಿ ಧನಂಜಯ್ ಅವರು ಈ ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಿದ್ದರು.
ಇದನ್ನೂ ಓದಿ: ಹರಳಿನ ಮೂಗುತಿಯಲ್ಲಿ ಮತ್ತೇರಿಸುವ ಮದನಾರಿ: ಕನ್ನಡಿಯ ನಾಚಿಸುವ ಜಾನ್ವಿಯ ಬೆಡಗು
ಕನ್ನಡ ಚಿತ್ರರಂಗದಲ್ಲಿ ಉತ್ತಮ ಸಿನಿಮಾಗಳು ಮೂಡಿ ಬರುತ್ತಿದ್ದು, ಈ ಚಿತ್ರದ ಮೇಲೂ ಭಾರೀ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ಉತ್ತಮ ಕಥೆಗೆ ಪ್ರಾಶಸ್ತ್ಯ ಕೊಡಲಾಗುತ್ತಿದ್ದು ರೂಪಾಯಿ ಮಹತ್ವ ಸಾರುವ ಸಿನಿಮಾ ಯಶಸ್ವಿಯಾಗಲಿದೆ ಅನ್ನೋದು ಚಿತ್ರತಂಡದ ಭರವಸೆ.