ಚಿತ್ರರಂಗದಲ್ಲಿ ಸಾಕಷ್ಟು ಸದ್ದು ಮಾಡುತ್ತಿರುವ ಹಾಗೂ ಹಲವು ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿರುವ ಕನ್ನಡದ ಕಾಂತಾರ ಚಿತ್ರದ ವರಾಹ ರೂಪಂ ಗೀತೆಯ ವಿರುದ್ಧ ಕೃತಿ ಚೌರ್ಯದ ಆರೋಪ ಕೇಳಿ ಬಂದಿದೆ. ಮಲಯಾಳಂನ ಜನಪ್ರಿಯ ಸಂಗೀತ ಸಂಸ್ಥೆ ತೈಕ್ಕುಡಂ ಬ್ರಿಡ್ಜ್ ತಂಡ ಕಾನೂನು ಕ್ರಮದ ಎಚ್ಚರಿಕೆ ನೀಡಿದೆ. ವರಾಹ ರೂಪಂ ಗೀತೆಯು ಮಲಯಾಳಂನ ನವರಸಂ ಗೀತೆಯ ಮೂಲ ಎಂದು ಅದು ಹೇಳಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ತೈಕ್ಕುಡಂ ಬ್ರಿಡ್ಜ್ ತಂಡ ಪೋಸ್ಟ್ ಮಾಡಿದ್ದು, ಕಾಂತಾರ ಚಿತ್ರದೊಂದಿಗೆ ನಮ್ಮ ಸಂಸ್ಥೆ ಹಾಗೂ ಅಂಗ ಸಂಸ್ಥೆಯಾದ ಸ್ಟ್ಯಾಂಡ್ ಪಾಯಿಂಟ್ ಯಾವ ಸಂಬಂಧವನ್ನೂ ಹೊಂದಿಲ್ಲ. ಆದರೆ, ವರಾಹ ರೂಪಂ ಹಾಗೂ ನವರಸಂ ನಡುವೆ ತುಂಬಾ ಹೋಲಿಕೆಗಳಿವೆ. ಆದ್ದರಿಂದ ಕೃತಿ ಚೌರ್ಯ ಕಾನೂನುಗಳ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ತಿಳಿಸಿದೆ.
ಇದಕ್ಕೆ ಕಾರಣವಾದ ಚಿತ್ರತಂಡದ ವಿರುದ್ಧ ಕಾನೂನು ಕ್ರಮಕ್ಕೆ ನಾವು ಬಯಸುತ್ತೇವೆ. ಗೀತೆಗೆ ಸಂಬಂಧಿಸಿದಂತೆ ಯಾವುದೇ ಹಕ್ಕುಗಳನ್ನು ಅಂಗೀಕರಿಸಿಲ್ಲ. ಆದರೆ, ಚಿತ್ರದ ತಂಡದವರು ತಮ್ಮದೇ ಮೂಲ ಹಾಡು ಎಂಬಂತೆ ಪ್ರಚಾರ ಮಾಡಿದ್ದಾರೆ. ಹೀಗಾಗಿ ನಮ್ಮೆಲ್ಲ ಕೇಳುಗರಲ್ಲೂ ಬೆಂಬಲಿಸುವಂತೆ ಮನವಿ ಮಾಡುತ್ತೇವೆ ಹಾಗೂ ಸಂಗೀತದ ಮೂಲ ಹಕ್ಕನ್ನು ರಕ್ಷಿಸುವ ನಿಟ್ಟಿನಲ್ಲಿ ಎಲ್ಲ ಕಲಾವಿದರು ಧ್ವನಿ ಎತ್ತಬೇಕೆಂದು ಕೋರುತ್ತೇವೆ ಎಂದು ತೈಕ್ಕುಡಂ ಬ್ರಿಡ್ಜ್ ತಂಡ ಮನವಿ ಮಾಡಿದೆ.
ರಿಷಬ್ ಶೆಟ್ಟಿ ನಿರ್ದೇಶಿಸಿ, ನಟಿಸಿರುವ ಕಾಂತಾರ ಸೆಪ್ಟೆಂಬರ್ 30ರಂದು ಬಿಡುಗಡೆಯಾಗಿದ್ದು, ಕನ್ನಡ ಮಾತ್ರವಲ್ಲದೇ ಭಾರತೀಯ ಚಿತ್ರರಂಗದಲ್ಲೇ ಹೊಸ ಕ್ರೇಜ್ ಹುಟ್ಟಿಸಿದೆ. ಇದೀಗ ಗೀತೆಯ ಬಗ್ಗೆ ವಿವಾದ ಎದ್ದಿದೆ. ಚಿತ್ರದ ಸಂಗೀತ ನಿರ್ದೇಶಕ ಅಜನೀಶ್ ಲೋಕನಾಥ್ ಕೃತಿ ಚೌರ್ಯ ಆರೋಪವನ್ನು ನಿರಾಕರಿಸಿದ್ದಾರೆ.
ಇದನ್ನೂ ಓದಿ: 'ಕೆಜಿಎಫ್' ಹಿಂದಿಕ್ಕಿ ಎರಡನೇ ಅತಿದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದ 'ಕಾಂತಾರ'