ಸ್ಯಾಂಡಲ್ವುಡ್ನ ಅನೇಕ ನಟರು ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಯ ಸಿನಿಮಾಗಳಲ್ಲಿ ನಟಿಸಿ ಕನ್ನಡದ ಕೀರ್ತಿ ಹೆಚ್ಚಿಸಿದ್ದಾರೆ. ಆ ಸಾಲಿನಲ್ಲಿ ಬೆಂಕಿ ಕಂಗಳ ನಟ ಎಂದೇ ಖ್ಯಾತರಾಗಿರುವ ಡ್ಯಾನಿ ಕುಟ್ಟಪ್ಪ ಕೂಡ ಒಬ್ಬರು. ಈಗಾಗಲೇ ತಮಿಳು ಭಾಷೆಯ ಸಿನಿಮಾಗಳಲ್ಲಿ ನಟಿಸಿ ಭೇಷ್ ಎನಿಸಿಕೊಂಡಿರುವ ಇವರು ಇದೀಗ ಮತ್ತೆ ತೆಲುಗಿನಲ್ಲಿ ಅಬ್ಬರಿಸಲು ಸಜ್ಜಾಗಿದ್ದಾರೆ. ಸದ್ಯದಲ್ಲೇ ಬಿಡುಗಡೆಯಾಗಲಿರುವ ಟಾಲಿವುಡ್ ಮಾಸ್ ನಿರ್ದೇಶಕ ಬೋಯಾಪಾಟಿ ಶ್ರೀನು ಆ್ಯಕ್ಷನ್ ಕಟ್ ಹೇಳಿರುವ, ರಾಮ್ ಪೋತಿನೇನಿ ಅಭಿನಯದ 'ಸ್ಕಂದ' ಸಿನಿಮಾದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಡ್ಯಾನಿ ಕುಟ್ಟಪ್ಪ ಅವರಿಗೆ ಟಾಲಿವುಡ್ ಹೊಸತೇನಲ್ಲ. 'ಬಾಹುಬಲಿ' ಚಿತ್ರದ ಮೂಲಕ ತೆಲುಗು ರಂಗಕ್ಕೆ ಕಾಲಿಟ್ಟ ಅವರು ನಂತರ 'ಗದ್ದಲಕೊಂಡ ಗಣೇಶ್' ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ. ಈಗ 'ಸ್ಕಂದ' ಸಿನಿಮಾದಲ್ಲಿ ಅತೀ ಮುಖ್ಯವಾದ ನೆಗೆಟಿವ್ ರೋಲ್ ಪ್ಲೇ ಮಾಡುತ್ತಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ 'ಸ್ಕಂದ' ಟ್ರೇಲರ್ನಲ್ಲಿ ಡ್ಯಾನಿ ಕುಟ್ಟಪ್ಪ ಅವರ ಪಾತ್ರದ ಪರಿಚಯವೂ ಇದೆ.
ಇದಲ್ಲದೇ, ಇತ್ತೀಚೆಗೆ ನಡೆದ 'ಸ್ಕಂದ' ಟ್ರೇಲರ್ ಬಿಡುಗಡೆ ಸಮಾರಂಭದಲ್ಲಿ ನಿರ್ದೇಶಕ ಬೋಯಾಪಾಟಿ ಶ್ರೀನು ಅವರು ಡ್ಯಾನಿ ಕುಟ್ಟಪ್ಪ ಅವರನ್ನು ಆಂಧ್ರದ ಜನತೆಗೆ ಪರಿಚಯಿಸಿಕೊಡುವ ಜೊತೆಗೆ ಅವರ ಬಗ್ಗೆ ಒಳ್ಳೆಯ ಮಾತುಗಳನ್ನಾಡಿದ್ದಾರೆ. ಡ್ಯಾನಿ ಬಹಳ ಚೆನ್ನಾಗಿ ತಮ್ಮ ಪಾತ್ರವನ್ನು ನಿರ್ವಹಿಸಿದ್ದಾರೆ ಎಂದು ಸಾವಿರಾರು ಜನರ ಮುಂದೆ ಹೊಗಳಿದ್ದಾರೆ. ತೆಲುಗಿನಲ್ಲಿ ಅಖಂಡ, ಲೆಜೆಂಡ್, ಸಿಂಹ ಮುಂತಾದ ಹಲವು ಯಶಸ್ವಿ ಚಿತ್ರಗಳನ್ನು ನಿರ್ದೇಶಿಸಿರುವ ಶ್ರೀನು ಅವರಿಂದ ಮೆಚ್ಚುಗೆಯ ಮಾತು ಕೇಳುವುದು ಅಷ್ಟು ಸುಲಭವಲ್ಲ. ಅಂತಹವರು ಡ್ಯಾನಿ ಬಗ್ಗೆ ಮಾತನಾಡಿರುವುದು ನಿಜಕ್ಕೂ ಖುಷಿಯ ವಿಚಾರ.
ಈ ಬಗ್ಗೆ ಸಂತಸ ಹಂಚಿಕೊಂಡಿರುವ ಡ್ಯಾನಿ ಕುಟ್ಟಪ್ಪ, "ಬೋಯಾಪಾಟಿ ಶ್ರೀನು ಅವರು ಪ್ರತಿ ಪಾತ್ರಕ್ಕೂ ಸಾಕಷ್ಟು ಪ್ರಾಮುಖ್ಯತೆ ಕೊಡುತ್ತಾರೆ. ಆ ಪಾತ್ರವನ್ನು ಯಾರು ಮಾಡುತ್ತಾರೆ ಎನ್ನುವುದರಿಂದ ಹಿಡಿದು, ಆ ಪಾತ್ರ ಹೇಗಿರಬೇಕು, ಏನು ಮಾಡಬೇಕು ಎಂಬ ಸಣ್ಣ ಸಣ್ಣ ವಿಚಾರಗಳಿಗೂ ಹೆಚ್ಚು ಮಹತ್ವ ಕೊಡುತ್ತಾರೆ. ಯಾರಾದರೂ ಹಾಗೆ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ನಮ್ಮ ಜವಾಬ್ದಾರಿಯೂ ಇನ್ನಷ್ಟು ಹೆಚ್ಚುತ್ತದೆ. ಪಾತ್ರಕ್ಕೆ ಇನ್ನಷ್ಟು ಸಮರ್ಪಿಸಿಕೊಳ್ಳಬೇಕು ಎಂದು ಸ್ಫೂರ್ತಿ ಬರುತ್ತದೆ" ಎಂದರು.
'ಸ್ಕಂದ' ಚಿತ್ರಕ್ಕಾಗಿ 20 ದಿನಗಳ ಕಾಲ ಚಿತ್ರೀಕರಣದಲ್ಲಿ ಡ್ಯಾನಿ ಕುಟ್ಟಪ್ಪ ಭಾಗವಹಿಸಿದ್ದರಂತೆ. ಹೈದರಾಬಾದ್ನ ರಾಮೋಜಿ ಫಿಲಂ ಸಿಟಿ, ಅನ್ನಪೂರ್ಣ ಸ್ಟುಡಿಯೋಸ್ ಮುಂತಾದ ಕಡೆ ಚಿತ್ರೀಕರಣ ನಡೆದಿದ್ದು, ಹಲವು ಸಾಹಸಮಯ ಸನ್ನಿವೇಶಗಳಲ್ಲಿ ಭಾಗವಹಿಸಿದ್ದಾರೆ. ತಮ್ಮ ಪಾತ್ರವನ್ನು Rude and Rough ಎಂದು ಬಣ್ಣಿಸುವ ಅವರು, ಈ ಚಿತ್ರವು ತಮ್ಮ ವೃತ್ತಿಜೀವನಕ್ಕೆ ದೊಡ್ಡ ತಿರುವು ನೀಡಬಹುದೆಂಬ ನಿರೀಕ್ಷೆಯಲ್ಲಿದ್ದಾರೆ.
ಇನ್ನು ಮುಂಬರುವ ದಿನಗಳಲ್ಲಿ ಕನ್ನಡದಲ್ಲೂ ಎಲ್ಲರೊಂದಿಗೂ ಕೆಲಸ ಮಾಡುವ ಆಸೆಯನ್ನು ಡ್ಯಾನಿ ಕುಟ್ಟಪ್ಪ ವ್ಯಕ್ತಪಡಿಸಿದ್ದಾರೆ. "ಇಂತಹವರು ಇಂತಹದ್ದೇ ಪಾತ್ರ ಮಾಡಬೇಕು ಎನ್ನುವುದಕ್ಕಿಂತ ಆ ಪಾತ್ರದ ಕುರಿತು ಆರೋಗ್ಯಕರ ಚರ್ಚೆಯಾಗಬೇಕು. ಒಬ್ಬ ನಿರ್ದೇಶಕ ಮತ್ತು ನಟನ ನಡುವೆ ಚರ್ಚೆಗಳಾದಾಗ ಒಂದೊಳ್ಳೆಯ ಪಾತ್ರ ಮತ್ತು ಚಿತ್ರವನ್ನು ಮಾಡಬಹುದು" ಎನ್ನುತ್ತಾರೆ ಡ್ಯಾನಿ ಕುಟ್ಟಪ್ಪ.
ಇದನ್ನೂ ಓದಿ: 'ಸ್ಕಂದ'ನಾಗಿ ರಾಮ್ ಪೋತಿನೇನಿ ಗ್ರ್ಯಾಂಡ್ ಎಂಟ್ರಿ; ಮಾಸ್ ಅವತಾರದಲ್ಲಿ ಲವರ್ ಬಾಯ್