ಚೆನ್ನೈ: ಕೊವೈಗೆ ಡಿಎಂಕೆ ಸಂಸದೆ ಕನಿಮೊಳಿ (DMK MP Kanimozhi) ಭೇಟಿ ವೇಳೆ ವಿವಾದ ಸೃಷ್ಟಿಸಿಯಾದ ಹಿನ್ನೆಲೆ ಕೆಲಸ ಕಳೆದುಕೊಮಡ ತಮಿಳುನಾಡಿನ ಕೊಯಮತ್ತೂರಿನ ಮಹಿಳಾ ಚಾಲಕಿ ಶರ್ಮಿಳಾ ಅವರಿಗೆ ಖ್ಯಾತ ನಟ ಹಾಗೂ ಎಂಎನ್‌ಎಂ ಪಕ್ಷದ ನಾಯಕ ಕಮಲ್ ಹಾಸನ್ ಕಾರೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಈವರೆಗೆ ಉದ್ಯೋಗಿಯಾಗಿದ್ದ ಶರ್ಮಿಳಾ ಇನ್ನು ಮುಂದೆ ಹಲವಾರು ಜನರಿಗೆ ಉದ್ಯೋಗ ನೀಡುವ ರೀತಿಯಲ್ಲಿ ಬೆಳೆಯಲಿ ಎಂದು ಹಾರೈಸಿದ್ದಾರೆ.
ಡಿಎಂಕೆ ಸಂಸದೆ ಕನಿಮೊಳಿ ಅವರು ಇತ್ತೀಚೆಗೆ ಕೊವೈಗೆ ಭೇಟಿ ನೀಡಿದ್ದರು. ಸಂಸದರು ಬಸ್‌ನಲ್ಲಿ ಪ್ರಯಾಣಿಸುವ ವೇಳೆ ಶರ್ಮಿಳಾ ಅವರೇ ಬಸ್ ಚಾಲನೆ ಮಾಡುತ್ತಿದ್ದರು. ಈ ವೇಳೆ, ಬಸ್ ಕಂಡಕ್ಟರ್ ಸಂಸದರಿಗೆ ಟಿಕೆಟ್ ನೀಡಿದ್ದು, ಕಂಡಕ್ಟರ್ ವರ್ತನೆಗೆ ಡ್ರೈವರ್ ಶರ್ಮಿಳಾ ಆಕ್ಷೇಪ ವ್ಯಕ್ತಪಡಿಸಿ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಡಿಎಂಕೆ ನಾಯಕಿ, ಸಂಸದೆ ಕನಿಮೊಳಿ ಕೊಯಮತ್ತೂರಿನ ಗಾಂಧಿಪುರಂನಿಂದ ಪೀಲಮೇಡುವಿಗೆ ಖಾಸಗಿ ಬಸ್‌ನಲ್ಲಿ ಪ್ರಯಾಣ ಬೆಳೆಸಿದ್ದರು. ಬಸ್ ಚಲಾಯಿಸುತ್ತಿದ್ದ ಶರ್ಮಿಳಾ ಅವರ ಪ್ರತಿಭೆಯನ್ನು ಸಂಸದರು ಶ್ಲಾಘಿಸಿದರು. ಬಸ್ ಚಾಲಕಿಗೆ ವಾಚ್ ಅನ್ನು ಸಹ ಉಡುಗೊರೆಯಾಗಿ ನೀಡಿದರು. ನಂತರ, ತಾನು ಓಡಿಸಿದ ಬಸ್‌ನಲ್ಲಿ ಸಂಸದೆ ಕನಿಮೊಳಿ ಅವರೊಂದಿಗೆ ಟ್ರೈನಿ ಬಸ್ ಕಂಡಕ್ಟರ್ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಶರ್ಮಿಳಾ ತಮ್ಮ ಆಡಳಿತ ಮಂಡಳಿಗೆ ದೂರು ನೀಡಿದ್ದರು.
ಟ್ರೈನಿ ಕಂಡಕ್ಟರ್ ಕೂಡ ಡ್ರೈವರ್ ಶರ್ಮಿಳಾ ವಿರುದ್ಧ ದೂರಿದ್ದರು. ಅವರು ತಮ್ಮ ಜನಪ್ರಿಯತೆಗಾಗಿ ಆಗಾಗ್ಗೆ ಸೆಲೆಬ್ರಿಟಿಗಳನ್ನು ಬಸ್‌ನಲ್ಲಿ ಪ್ರಯಾಣಿಸಲು ಆಹ್ವಾನಿಸುವ ಮೂಲಕ ಪ್ರಯಾಣಿಕರಿಗೆ ಅನಾನುಕೂಲತೆ ಸೃಷ್ಟಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಇಬ್ಬರ ವಾದವನ್ನು ಆಲಿಸಿದ್ದ ಆಡಳಿತ ಮಂಡಳಿ ಚಾಲಕಿ ಶರ್ಮಿಳಾ ಅವರನ್ನು ಕೆಲಸದಿಂದ ವಜಾಗೊಳಿಸಿತ್ತು. ಈ ವಿಷಯ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು.
ಇದನ್ನೂ ಓದಿ: ಕೊಯಂಬತ್ತೂರಿನ ಪ್ರಥಮ ಮಹಿಳಾ ಬಸ್ ಡ್ರೈವರ್ ಎಂಬ ಹೆಗ್ಗಳಿಕೆಗೆ ಪಾತ್ರರಾದ 24 ವರ್ಷದ ಯುವತಿ
ಕೊಯಮತ್ತೂರಿನ ಮೊದಲ ಮಹಿಳಾ ಬಸ್ ಚಾಲಕಿ ಶರ್ಮಿಳಾ ಅವರ ವಿಚಾರ ಚರ್ಚೆಗೆ ಗ್ರಾಸವಾಗಿರುವುದು ನನಗೆ ನೋವು ತಂದಿದೆ. ಯುವಕರಿಗೆ ಆಕೆ ದೊಡ್ಡ ಸ್ಫೂರ್ತಿ ಆಗಿದ್ದರು. ಶರ್ಮಿಳಾ ಕೇವಲ ಡ್ರೈವರ್ ಆಗಿ ಉಳಿಯಬಾರದು. ಹಲವು ಶರ್ಮಿಳಾರನ್ನು ಸೃಷ್ಟಿಸಬೇಕೆಂಬುದು ನನ್ನ ಆಸೆ. ನಾವು ಕಮಲ್ ಕಲ್ಚರಲ್ ಸೆಂಟರ್ ವತಿಯಿಂದ ಶರ್ಮಿಳಾ ಅವರಿಗೆ ಕಾರನ್ನು ನೀಡುತ್ತಿದ್ದೇವೆ. ಈ ಕಾರು ಕೇವಲ ಕ್ಯಾಬ್ ಸೇವೆಗೆ ಸೀಮಿತವಾಗಿರದೇ, ಹೆಚ್ಚು ಜನರಿಗೆ ಉದ್ಯೋಗ ನೀಡಲು ಸಹಕರಿಸಲಿ ಎಂದು ಕಮಲ್ ಹಾಸನ್ ಹೇಳಿದ್ದಾರೆ.
ಇದನ್ನೂ ಓದಿ: 1.75 ಕೋಟಿ ರೂ. ಕಲೆಕ್ಷನ್: ಅತಿ ಕಡಿಮೆ ಸಂಪಾದನೆ ಮಾಡಿದ 'ಆದಿಪುರುಷ್'!
ಶರ್ಮಿಳಾ ಅವರು ಕೊಯಂಬತ್ತೂರು ನಗರದ ಮೊದಲ ಬಸ್ ಚಾಲಕಿ ಎಂದು ಖ್ಯಾತಿ ಪಡೆದಿದ್ದಾರೆ. ಕೊಯಂಬತ್ತೂರಿನ ಗಾಂಧಿಪುರಂನಿಂದ ಸೋಮನೂರು ಮಾರ್ಗದಲ್ಲಿ ಬಸ್ ಚಲಾಯಿಸಿ ಜನಪ್ರಿಯತೆ ಹೊಂದಿದ್ದರು. ಯಾವುದೇ ಪರುಷರಿಗಿಂತ ಕಡಿಮೆ ಇಲ್ಲ ಎನ್ನುವಂತಿತ್ತು ಇವರ ಇವರ ಕೌಶಲ್ಯ. ಶರ್ಮಿಳಾ ಅವರನ್ನು ಜನರು ಅಭಿನಂದಿಸುತ್ತಿದ್ದರು. ಇದೀಗ ಕೆಲಸ ಕಳೆದುಕೊಂಡಿದ್ದು, ಹಿರಿಯ ನಟ ಕಮಲ್ ಹಾಸನ್ ಕಾರೊಂದನ್ನು ಉಡುಗೊರೆ ಆಗಿ ನೀಡಿದ್ದಾರೆ.