ಕನ್ನಡ ಚಿತ್ರರಂಗದ ನಟಿ ಪ್ರಿಯಾಂಕಾ ಉಪೇಂದ್ರ 45ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಇಂದು ಜನ್ಮದಿನ ಆಚರಿಸಿಕೊಳ್ಳುತ್ತಿರುವ ಪ್ರಿಯಾಂಕಾ ಅವರಿಗೆ ಸ್ನೇಹಿತರು, ಅಭಿಮಾನಿಗಳು, ಆತ್ಮೀಯರು ಹಾಗೂ ಸ್ಯಾಂಡಲ್ವುಡ್ ಗಣ್ಯರು ಶುಭ ಕೋರುತ್ತಿದ್ದಾರೆ. ಕೈಮರ ಚಿತ್ರತಂಡ ಸ್ಪೆಷಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಪ್ರಿಯಾಂಕಾರಿಗೆ ವಿಶೇಷವಾಗಿ ಶುಭಕೋರಿದೆ.
ಖ್ಯಾತ ನಿರ್ದೇಶಕ ಪಿ.ವಾಸು ಅವರ ಸಹೋದರನ ಪುತ್ರ ಗೌತಮ್ ವಿಮಲ್ ನಿರ್ದೇಶನದ "ಕೈಮರ" ಚಿತ್ರದ ಪ್ರಮುಖ ಪಾತ್ರದಲ್ಲಿ ಪ್ರಿಯಾಂಕಾ ಉಪೇಂದ್ರ ನಟಿಸುತ್ತಿದ್ದಾರೆ. ಸಿನಿಮಾದ ಚಿತ್ರೀಕರಣ ಬಿರುಸಿನಿಂದ ಸಾಗಿದೆ. ವಿ.ಮತ್ತಿಯಳಗನ್ ನಿರ್ಮಾಣದ ಈ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಪ್ರಿಯಾಂಕಾ ಅಲ್ಲದೇ ಪ್ರಿಯಾಮಣಿ, ಛಾಯಾಸಿಂಗ್, ಮತ್ತಿಯಳಗನ್ ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ಚಿತ್ರದ ಕಥೆಯನ್ನು ಪಿ. ವಿಮಲ್ ಬರೆದಿದ್ದು, ಗುರುಕಿರಣ್ ಸಂಗೀತ ನಿರ್ದೇಶನ, ಮಣಿಕಂಠನ್ ಛಾಯಾಗ್ರಹಣ, ಮೋಹನ್ ಬಿ. ಕೆರೆ ಕಲಾ ನಿರ್ದೇಶನ ಹಾಗೂ ವಿನೋದ್ ಅವರ ಸಾಹಸ ನಿರ್ದೇಶನವಿದು.
1977ರ ನವೆಂಬರ್ 12ರಂದು ಕೋಲ್ಕತ್ತಾದಲ್ಲಿ ಜನಿಸಿದ ಪ್ರಿಯಾಂಕಾ ಬೆಳೆದದ್ದು ಹಾಗೂ ವಿದ್ಯಾಭ್ಯಾಸ ಮಾಡಿದ್ದು ಅಮೆರಿಕದಲ್ಲಿ. 10 ವರ್ಷಗಳ ಅಮೆರಿಕ ವಾಸದ ನಂತರ ಸಿಂಗಾಪುರದಲ್ಲಿ ಕೂಡಾ ಪ್ರಿಯಾಂಕಾ ಕುಟುಂಬ ಮೂರು ವರ್ಷಗಳ ಕಾಲ ನೆಲೆಸಿತ್ತು. ಕಾಲೇಜು ಬಳಿಕ ಜಾಹೀರಾತುಗಳಲ್ಲಿ ನಟಿಸಲು ಆರಂಭಿಸಿದ ಪ್ರಿಯಾಂಕಾ 'ಹೊಟತ್ ಬ್ರಿಸ್ಟಿ' ಎಂಬ ಬೆಂಗಾಳಿ ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟರು. ನಂತರ ಒಂದೆರಡು ಹಿಂದಿ, ಒಡಿಯಾ ಚಿತ್ರಗಳಲ್ಲಿ ನಟಿಸಿದ ಅವರು 'ರಾ' ಚಿತ್ರದ ಮೂಲಕ ತೆಲುಗು ಚಿತ್ರರಂಗಕ್ಕೆ ಬಂದರು. ಬಳಿಕ ಡಾ. ವಿಷ್ಣುವರ್ಧನ್ ಜೊತೆ 'ಕೋಟಿಗೊಬ್ಬ' ಚಿತ್ರದಲ್ಲಿ ನಟಿಸುವ ಮೂಲಕ ಸ್ಯಾಂಡಲ್ವುಡ್ಗೆ ಪದಾರ್ಪಣೆ ಮಾಡಿದರು.
'ಕೋಟಿಗೊಬ್ಬ' ಚಿತ್ರದ ನಂತರ ಹೆಚ್ಟುಒ, ರೌಡಿ ಅಳಿಯ, ಪಂಚರಂಗಿ, ಶ್ರೀಮತಿ, ಸೆಕೆಂಡ್ ಹಾಫ್, ದೇವಕಿ, ಮಮ್ಮಿ ಹಾಗೂ ಇನ್ನಿತರ ಕನ್ನಡ ಚಿತ್ರಗಳಲ್ಲಿ ಪ್ರಿಯಾಂಕಾ ನಟಿಸಿದರು. ಈ ನಡುವೆ ತಮಿಳು, ತೆಲುಗು, ಬೆಂಗಾಳಿ ಚಿತ್ರಗಳಲ್ಲಿ ಕೂಡಾ ನಟಿಸಿದರು. ಸದ್ಯ ಕೈಮರ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ ನಟಿ ಪ್ರಿಯಾಂಕಾ ಉಪೇಂದ್ರ.
ಇದನ್ನೂ ಓದಿ: ಅಮೂಲ್ಯ ಅವಳಿ ಮಕ್ಕಳ ನಾಮಕರಣಕ್ಕೆ ಸ್ಯಾಂಡಲ್ವುಡ್ ತಾರೆಯರ ರಂಗು - ವಿಡಿಯೋ
'ಹೆಚ್ಟುಒ' ಚಿತ್ರದ ನಂತರ ಉಪೇಂದ್ರ ಅವರನ್ನು ಪ್ರೀತಿಸಿ ಮದುವೆಯಾದ ಪ್ರಿಯಾಂಕಾ ಪತಿಯೊಂದಿಗೆ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಈ ದಂಪತಿಗೆ ಆಯುಷ್, ಐಶ್ವರ್ಯ ಎಂಬ ಇಬ್ಬರು ಮಕ್ಕಳಿದ್ದಾರೆ.