'ಜೈಲರ್' ಸದ್ಯ ದೇಶದೆಲ್ಲೆಡೆ ಕೇಳಿಬರುತ್ತಿರುವ ಹೆಸರು. ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಮುಖ್ಯಭೂಮಿಕೆಯ ಈ ಚಿತ್ರ ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ನೆಲ್ಸನ್ ದಿಲೀಪ್ ಕುಮಾರ್ ನಿರ್ದೇಶನದ ಸಿನಿಮಾಗೆ ನಿರೀಕ್ಷೆಗೂ ಮೀರಿದ ರೆಸ್ಪಾನ್ಸ್ ಸಿಕ್ಕಿದೆ. ಬಿಡುಗಡೆಯಾದ ಮೂರೇ ದಿನಗಳಲ್ಲಿ 100 ಕೋಟಿ ಗಳಿಸುವ ಮೂಲಕ ಅದ್ಭುತ ಯಶಸ್ಸನ್ನು ಕಂಡಿದೆ. ಇದೀಗ ಚಿತ್ರವು ವಿಶ್ವದಾದ್ಯಂತ ನಾಲ್ಕನೇ ದಿನ 200 ಕೋಟಿ ರೂಪಾಯಿಗಿಂತಲೂ ಹೆಚ್ಚು ಗಳಿಸಿದೆ. ಮುಂದಿನ ದಿನಗಳಲ್ಲಿ 500 ರಿಂದ 600 ಕೋಟಿ ರೂಪಾಯಿ ಗಳಿಸುವ ಸಾಧ್ಯತೆ ಇದೆ.
4ನೇ ದಿನದ ಕಲೆಕ್ಷನ್: ಟ್ರೇಡ್ ಅಗ್ರಿಗೇಟರ್ ಸ್ಯಾಕ್ನಿಲ್ ಪ್ರಕಾರ, ಚಿತ್ರವು ಬಿಡುಗಡೆಯಾದ ಮೊದಲ ದಿನ (ಗುರುವಾರ) 48.35 ಕೋಟಿ ರೂ., ಶುಕ್ರವಾರ 25.75 ಕೋಟಿ ರೂ., ಶನಿವಾರ 35 ಕೋಟಿ ರೂ. ಗಳಿಸಿತ್ತು. ಇದೀಗ 4ನೇ ದಿನವಾದ ಭಾನುವಾರ 38 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. ಈ ಮೂಲಕ ಭಾರತದಲ್ಲಿ ಒಟ್ಟು 147 ಕೋಟಿ ರೂಪಾಯಿ ಗಳಿಸಿದೆ. ಆದರೆ ವಿಶ್ವದಾದ್ಯಂತ 200 ಕೋಟಿ ರೂಪಾಯಿಗೂ ಹೆಚ್ಚು ಕಲೆಕ್ಷನ್ ಮಾಡಿದೆ.
ಇನ್ನು ಸ್ವಾತಂತ್ರ್ಯ ದಿನಾಚರಣೆಯ ಅಂಗವಾಗಿ 'ಜೈಲರ್' ಹೆಚ್ಚು ಪ್ರದರ್ಶನ ಕಾಣುವ ಸಾಧ್ಯತೆಯಿದೆ. ವಿದೇಶದಲ್ಲಿ 300 ಕೋಟಿ ಕ್ಲಬ್ ಸೇರುವ ನಿರೀಕ್ಷೆಯಿದೆ. ಆದರೆ ಭಾರತದಲ್ಲಿ ಚಿತ್ರವು ಶೀಘ್ರವೇ 150 ಕೋಟಿ ರೂ. ಗಡಿ ದಾಟಲಿದೆ. ರಜನಿಕಾಂತ್ ಅವರ 2.0 ಸಿನಿಮಾ ನಾಲ್ಕು ದಿನಗಳಲ್ಲಿ 400 ಕೋಟಿ ಗಳಿಸಿತ್ತು. ಇದೀಗ 'ಜೈಲರ್' 300 ಕೋಟಿ ರೂಪಾಯಿಗಳನ್ನು ಗಳಿಸಿದರೆ, ವಿಶ್ವದಾದ್ಯಂತ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಎರಡನೇ ತಮಿಳು ಸಿನಿಮಾವಾಗಲಿದೆ.
ಇದನ್ನೂ ಓದಿ: ಥಿಯೇಟರ್ಗಳಲ್ಲಿ ರಜನಿ ನಟನೆಯ 'ಜೈಲರ್' ಹವಾ: 2ನೇ ದಿನದ ಕಲೆಕ್ಷನ್ ಎಷ್ಟು ಗೊತ್ತಾ?
ರಜನಿ ಎರಡು ವರ್ಷಗಳ ನಂತರ ಹಿರಿತೆರೆಗೆ ಮರಳಿದ್ದು, ಸೋಲಿಲ್ಲದ ಸರದಾರನಾಗಿ ತಮ್ಮ ಸ್ಥಾನವನ್ನು ಮರಳಿ ಪಡೆದಿದ್ದಾರೆ. ನಟ ಕೊನೆಯದಾಗಿ 'ಅಣ್ಣಾತ್ತೇ'ಯಲ್ಲಿ ಕಾಣಿಸಿಕೊಂಡಿದ್ದರು. ನೆಲ್ಸನ್ ದಿಲೀಪ್ ಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಜೈಲರ್ನಲ್ಲಿ ನಾಯಕಿಯಾಗಿ ಬಹುಭಾಷಾ ತಾರೆ ತಮನ್ನಾ ಭಾಟಿಯಾ ನಟಿಸಿದ್ದಾರೆ. ಜೊತೆಗೆ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್, ಮಾಲಿವುಡ್ ಸೂಪರ್ಸ್ಟಾರ್ ಮೋಹನ್ಲಾಲ್, ರಮ್ಯಾ ಕೃಷ್ಣನ್, ಯೋಗಿ ಬಾಬು, ವಸಂತ್ ರವಿ ಸೇರಿದಂತೆ ಅನೇಕರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.
'ಜೈಲರ್' ಸಿನಿಮಾ ದೆಹಲಿ, ಮುಂಬೈ, ಗುಜರಾತ್ ಮತ್ತು ಪಂಜಾಬ್ ಸೇರಿದಂತೆ ಕೆಲವು ಹಿಂದಿ ಮಾರುಕಟ್ಟೆಯಲ್ಲಿ ಉತ್ತಮ ಪ್ರದರ್ಶನ ಕಾಣುತ್ತಿದೆ. ಜೊತೆಗೆ ಯುನೈಟೆಡ್ ಸ್ಟೇಟ್ಸ್, ಕೆನಡಾ, ಆಸ್ಟ್ರೇಲಿಯಾ, ಮಲೇಷ್ಯಾ, ಶ್ರೀಲಂಕಾ, ಇಂಡೋನೇಷ್ಯಾ, ಯುನೈಟೆಡ್ ಅರಬ್ ಎಮಿರೇಟ್ಸ್ ಮತ್ತು ಯುನೈಟೆಡ್ ಕಿಂಗ್ಡಮ್ನಲ್ಲಿ ಉತ್ತಮ ಪ್ರದರ್ಶನ ಕಾಣುವುದರೊಂದಿಗೆ, ವಿಮರ್ಶೆಗಳನ್ನು ಪಡೆಯುತ್ತಿದೆ.
ಇದನ್ನೂ ಓದಿ: Jailer: ರಜನಿ ಸಿನಿಮಾ ಸೂಪರ್ ಹಿಟ್.. 3 ದಿನಗಳಲ್ಲಿ ₹100 ಕೋಟಿ ಬಾಚಿದ 'ಜೈಲರ್'