ನವದೆಹಲಿ: ವಂಚಕ ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ 200 ಕೋಟಿ ರೂಪಾಯಿ ಅಕ್ರಮ ಹಣ ವರ್ಗಾವಣೆ ಪ್ರಕರಣದ ಆರೋಪಿಯಾಗಿರುವ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್ ಅವರು ಬುಧವಾರ ನಗರದ ಮಂದಿರ ಮಾರ್ಗದಲ್ಲಿರುವ ಇಒಡಬ್ಲ್ಯು ಕಚೇರಿಯಲ್ಲಿ ವಿಚಾರಣೆ ಎದುರಿಸಿದ್ದಾರೆ.
8 ಗಂಟೆ ಜಾಕ್ವೆಲಿನ್ ವಿಚಾರಣೆ: ಜಾಕ್ವೆಲಿನ್ ಫರ್ನಾಂಡೀಸ್ ಅವರನ್ನು ದೆಹಲಿ ಪೊಲೀಸ್ ಆರ್ಥಿಕ ಅಪರಾಧ ವಿಭಾಗವು ಎಂಟು ಗಂಟೆಗಳ ಕಾಲ ವಿಚಾರಣೆ ನಡೆಸಿದೆ ಎಂದು ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ನಟಿಯನ್ನು ಆರೋಪಿ ಚಂದ್ರಶೇಖರ್‌ಗೆ ಪರಿಚಯಿಸಿದ ನೋರಾ ಫತೇಹಿ ಮತ್ತು ಪಿಂಕಿ ಇರಾನಿ ಅವರನ್ನು ಇಂದು ವಿಚಾರಣೆಗೆ ಕರೆಯಲಾಗಿದೆ ಎಂದು ತಿಳಿಸಿದ್ದಾರೆ. ಪಿಂಕಿ ಇರಾನಿ ಬುಧವಾರ ಸಹ ವಿಚಾರಣೆಗೆ ಒಳಗಾಗಿದ್ದರು.
ತನಿಖೆಗೆ ಸಹಕರಿಸಿದ ನಟಿ: ಶ್ರೀಲಂಕಾ ಮೂಲದ ಜಾಕ್ವೆಲಿನ್ ಫರ್ನಾಂಡಿಸ್ ಮೂರು ಬಾರಿ ಸಮನ್ಸ್ ನೀಡಿದ ನಂತರ ನಿನ್ನೆ ತನಿಖೆಗೆ ಹಾಜರಾದರು. ಪಿಂಕಿ ಇರಾನಿ ಸಹ ಅವರ ಜೊತೆಗಿದ್ದರು ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. ವಿಶೇಷ ಪೊಲೀಸ್ ಆಯುಕ್ತ (ಅಪರಾಧ) ರವೀಂದ್ರ ಯಾದವ್ ಮಾಹಿತಿ ನೀಡಿದ್ದು, ಸುಕೇಶ್ ಚಂದ್ರಶೇಖರ್‌ಗೆ ಸಂಬಂಧಿಸಿದ ಬಹುಕೋಟಿ ಹಣ ವರ್ಗಾವಣೆ ಪ್ರಕರಣದಲ್ಲಿ ಫರ್ನಾಂಡಿಸ್ ಪಾತ್ರ, ಆರೋಪಿಯೊಂದಿಗೆ ಹೊಂದಿರುವ ಸಂಬಂಧ, ಪಡೆದ ಉಡುಗೊರೆಗಳು ಸೇರಿದಂತೆ ಹಲವು ವಿಷಯಗಳನ್ನಿಟ್ಟುಕೊಂಡು ಜಾಕ್ವೆಲಿನ್ ಮತ್ತು ಪಿಂಕಿ ವಿಚಾರಣೆ ನಡೆಸಲಾಗಿದೆ ಎಂದು ತಿಳಿಸಿದರು. ವಿಚಾರಣೆ ವೇಳೆ ಫರ್ನಾಂಡಿಸ್ ಮತ್ತು ಇರಾನಿ ಮುಖಾಮುಖಿಯಾದರು. ಇಬ್ಬರೂ ತನಿಖೆಗೆ ಸಹಕರಿಸಿದ್ದಾರೆ. ನಂತರ ಊಟ ಮಾಡಿದರು ಎಂದು ಹೇಳಿದರು.
ನೋರಾ ಫತೇಹಿ ವಿಚಾರಣೆ: ಈ ಪ್ರಕರಣದಲ್ಲಿ ಈಗಾಗಲೇ ನಟಿ ನೋರಾ ಫತೇಹಿ ಅವರನ್ನು ಸಹ ಆರರಿಂದ ಏಳು ಗಂಟೆಗಳ ಕಾಲ ವಿಚಾರಣೆಗೊಳಪಡಿಸಲಾಗಿತ್ತು. ಅವರ ಹಲವು ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೂ ಕೆಲ ಉತ್ತರವಿಲ್ಲದ ಪ್ರಶ್ನೆಗಳು ಬಾಕಿ ಇರುವುದರಿಂದ ಇಂದು(ಗುರುವಾರ) ಹೆಚ್ಚಿನ ವಿಚಾರಣೆಗೆ ಒಳಪಡಿಸಲಾಗುವುದು ಎಂದು ಹೇಳಿದರು. ಆದಾಗ್ಯೂ, ಈ ಇಬ್ಬರು ನಟಿಯರ ನಡುವಿನ ಯಾವುದೇ ನೇರ ಸಂಪರ್ಕದ ಬಗ್ಗೆ ಮಾಹಿತಿ ನೀಡಲು ಅಧಿಕಾರಿ ನಿರಾಕರಿಸಿದರು.
ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ: ತನಿಖೆಗೆ ಹಾಜರಾದ ನಟಿ ಜಾಕ್ವೆಲಿನ್ ಫರ್ನಾಂಡಿಸ್
ಪ್ರಸ್ತುತ ಜೈಲಿನಲ್ಲಿರುವ ಸುಕೇಶ್ ಚಂದ್ರಶೇಖರ್ ಮಾಜಿ ಫೋರ್ಟಿಸ್ ಹೆಲ್ತ್‌ಕೇರ್ ಪ್ರಚಾರಕ ಶಿವಿಂದರ್ ಮೋಹನ್ ಸಿಂಗ್ ಅವರ ಪತ್ನಿ ಅದಿತಿ ಸಿಂಗ್ ಅವರಂತಹ ಉನ್ನತ ವ್ಯಕ್ತಿಗಳು ಸೇರಿದಂತೆ ವಿವಿಧ ಜನರನ್ನು ವಂಚಿಸಿದ ಆರೋಪ ಹೊತ್ತಿದ್ದಾರೆ. ಈ ಪ್ರಕರಣದಲ್ಲಿ ನೋರಾ ಫತೇಹಿಯನ್ನು ಈ ಹಿಂದೆ ಜಾರಿ ನಿರ್ದೇಶನಾಲಯ (ಇಡಿ) ಪ್ರಶ್ನಿಸಿತ್ತು. ಆಗಸ್ಟ್ 17 ರಂದು ಪ್ರಕರಣದಲ್ಲಿ ಫರ್ನಾಂಡಿಸ್ ಅವರನ್ನು ಆರೋಪಿ ಎಂದು ಹೆಸರಿಸಿ ಇಡಿ ಆರೋಪಪಟ್ಟಿ ಸಲ್ಲಿಸಿತ್ತು. ಇಡಿ ಪ್ರಕಾರ, ನೋರಾ ಫತೇಹಿ ಮತ್ತು ಫರ್ನಾಂಡಿಸ್ ಆರೋಪಿಯಿಂದ ಐಷಾರಾಮಿ ಕಾರುಗಳು ಮತ್ತು ಇತರೆ ದುಬಾರಿ ಉಡುಗೊರೆಗಳನ್ನು ಪಡೆದಿದ್ದಾರೆ.