ಬಹುನಿರೀಕ್ಷಿತ 'ಸಲಾರ್' ಬಿಡುಗಡೆಗೆ ಕ್ಷಣಗಣನೆ ಆರಂಭವಾಗಿದೆ. ಪ್ರಭಾಸ್ ಅಭಿಮಾನಿಗಳು ಮತ್ತು ಸಿನಿಪ್ರೇಮಿಗಳು ಸಿನಿಮಾ ವೀಕ್ಷಣೆಗೆ ಕಾತುರದಿಂದ ಕಾಯುತ್ತಿದ್ದಾರೆ. ಭಾರಿ ನಿರೀಕ್ಷೆಗಳ ನಡುವೆ ಸಿನಿಮಾ ವಿಶ್ವದಾದ್ಯಂತ ನಾಳೆ ಮುಂಜಾನೆ ಬಿಡುಗಡೆಯಾಗುತ್ತಿದೆ. ಬಿಗ್ ಪ್ರಾಜೆಕ್ಟ್ ಕುರಿತ ಕೆಲವು ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳೋಣ.
15 ವರ್ಷ ಹಿಂದಿನ ಯೋಚನೆ: ಸಲಾರ್ ಚಿತ್ರಕಥೆಯನ್ನು ಸುಮಾರು 15 ವರ್ಷಗಳ ಹಿಂದೆಯೇ ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ಪ್ರಶಾಂತ್ ನೀಲ್ ನಿರ್ದೇಶಕರಾಗಿರಲಿಲ್ಲ. ನಿರ್ದೇಶಕನಾಗಿ ಮೊದಲ ಹೆಜ್ಜೆ ಇಡುವ ಸಂದರ್ಭ ಇಷ್ಟು ದೊಡ್ಡ ಕಥೆ ಹೇಳಲು ಬಜೆಟ್ ವಿಚಾರವಾಗಿ ಕೆಲವು ಇತಿಮಿತಿಗಳು ಎದುರಾಗಿದ್ದವು. ಹಾಗಾಗಿ ಒಂದಷ್ಟು ಸಿನಿಮಾಗಳನ್ನು ಮಾಡಿದ ನಂತರ ಪ್ರೇಕ್ಷಕರಿಗೆ ಸಲಾರ್ ಜಗತ್ತನ್ನು ಪರಿಚಯಿಸಬೇಕು ಎಂದುಕೊಂಡಿದ್ದರಂತೆ. 'ಉಗ್ರಂ' ಮೂಲಕ ಮೊಟ್ಟಮೊದಲ ಬಾರಿಗೆ ಡೈರೆಕ್ಟರ್ ಕ್ಯಾಪ್ ತೊಟ್ಟ ಪ್ರಶಾಂತ್ ನೀಲ್ ಯಶಸ್ಸಿನ ಹಾದಿಯಲ್ಲಿ ಮುಂದುವರಿಯುತ್ತಿದ್ದು, ಒಂದೂವರೆ ದಶಕದ ಹಿಂದಿನ ಕನಸನ್ನು ಸಾಕಾರಗೊಳಿಸುವ ಕ್ಷಣಗಳ ಸಮೀಪ ಬಂದಿದ್ದಾರೆ.
ದೇವ ಪಾತ್ರಕ್ಕೆ ಪ್ರಭಾಸ್ ಫಿಟ್: ಪ್ರಭಾಸ್ ಅವರನ್ನು ಈ ಚಿತ್ರಕ್ಕೆ ನಾಯಕನನ್ನಾಗಿ ಆಯ್ಕೆ ಮಾಡಲಾಗಿದೆ. ಪ್ಯಾನ್ ಇಂಡಿಯಾ ನಟ ಕಾನ್ಸೆಪ್ಟ್ ಸಲುವಾಗಿ ಅಲ್ಲ, ಬದಲಾಗಿ 'ದೇವ' ಪಾತ್ರದ ಸಲುವಾಗಿ ಚಿತ್ರಕ್ಕೆ ಆಯ್ದುಕೊಳ್ಳಲಾಗಿದೆ. ಸಿನಿಮಾವನ್ನು ಮೊದಲು ಎರಡು ಭಾಗಗಳಲ್ಲಿ ತರಲು ನಿರ್ಧರಿಸರಿರಲಿಲ್ಲ. ಚಿತ್ರೀಕರಣದ ವೇಳೆ ಸಿನಿಮಾವನ್ನು ಎರಡು ಭಾಗಗಳಲ್ಲಿ ತೋರಿಸಲು ತೀರ್ಮಾನಿಸಲಾಗಿತ್ತು.
ಕೆಜಿಎಫ್-ಸಲಾರ್ ನಡುವೆ ಲಿಂಕ್?: ಪ್ರಚಾರದ ಭಾಗಗಳಾದ ಗ್ಲಿಂಪ್ಸ್, ಟೀಸರ್, ಪೋಸ್ಟರ್ಗಳೆಲ್ಲ ಬಿಡುಗಡೆಯಾದಾಗ ಕೆಜಿಎಫ್ ಮತ್ತು ಸಲಾರ್ ನಡುವೆ ಏನೋ ಸಂಬಂಧ ಇದೆ ಎಂದು ಹಲವರು ಊಹಿಸಿದ್ದರು. ಆದ್ರೆ, ಈ ಎರಡೂ ಸಿನಿಮಾಗಳಿಗೆ ಅಂತಹ ಯಾವುದೇ ಸಂಬಂಧವಿಲ್ಲ ಎಂದು ನಿರ್ದೇಶಕರು ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲ, 'ಉಗ್ರಂ' ರಿಮೇಕ್ ಅಲ್ಲ ಎಂಬುದಾಗಿಯೂ ಸ್ಪಷ್ಟನೆ ಕೊಟ್ಟಿದ್ದಾರೆ. ಇನ್ನು, ಯಶ್ ಅತಿಥಿ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂಬುದು ಕೂಡ ಊಹಾಪೋಹಗಳಿಗೆ ಸೀಮಿತ.
ಕಥೆಯಲ್ಲಿ ರೊಮ್ಯಾನ್ಸ್?: ಪ್ರಭಾಸ್ ಮತ್ತು ಶ್ರುತಿ ಹಾಸನ್ ಜೋಡಿಯ ವಿಶೇಷ ಹಾಡನ್ನು ಚಿತ್ರಿಸಲು ಚಿತ್ರತಂಡ ಬಯಸಿತ್ತು. ಆದ್ರೆ ಭಾವನಾತ್ಮಕ ಕಥೆಯಲ್ಲಿ ಇಂತಹ ಹಾಡು ಹಾಕಿದರೆ, ಕಥೆ ಹೇಳುವ ರೀತಿಗೆ ಅಡ್ಡಿಯಾಗಬಹುದು ಎಂದು ಯೋಚಿಸಿ ಆ ವಿಚಾರವನ್ನು ಅಲ್ಲಿಗೇ ಕೈಬಿಟ್ಟರು. ಶ್ರುತಿ ಹಾಸನ್ ಆದ್ಯಾ ಪಾತ್ರದಲ್ಲಿ ಅಭಿನಯಿಸಲಿದ್ದಾರೆ.
ಪೃಥ್ವಿರಾಜ್ ಸುಕುಮಾರನ್ ಪಾತ್ರ: 'ದೇವ'ನಂತೆಯೇ ಮತ್ತೊಂದು ಪ್ರಮುಖ ಪಾತ್ರ ವರದರಾಜ ಮನ್ನಾರ್. ನಿರ್ದೇಶಕರು ಮೊದಲೇ ಈ ಪಾತ್ರಕ್ಕೆ ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್ ಅವರನ್ನು ಆಯ್ಕೆ ಮಾಡಿದ್ದರು. ಇವರಿಲ್ಲದೇ ಅಥವಾ ಇವರ ಈ ಪಾತ್ರವಿಲ್ಲದೇ ಸಲಾರ್ ಇಲ್ಲ ಎಂದು ಪ್ರಶಾಂತ್ ನೀಲ್ ತಿಳಿಸಿದ್ದಾರೆ. ಹಾಗಾದ್ರೆ, ಪೃಥ್ವಿರಾಜ್ ಸುಕುಮಾರನ್ ಅಭಿನಯ ಸಾಮರ್ಥ್ಯ ಮತ್ತು ಜನಪ್ರಿಯತೆ ಎಷ್ಟಿದೆ ಎಂಬುದನ್ನು ಅರ್ಥೈಸಿಕೊಳ್ಳಬಹುದು. ಇವರಲ್ಲದೇ ಜಗಪತಿ ಬಾಬು, ಈಶ್ವರಿ ರಾವ್, ಟಿನು ಆನಂದ್ ಸೇರಿದಂತೆ ಖ್ಯಾತ ನಟರು ಪ್ರಮುಖ ಪಾತ್ರಗಳಲ್ಲಿದ್ದಾರೆ.
2021ರಲ್ಲಿ ಶೂಟಿಂಗ್ ಶುರು: 2021ರ ಜನವರಿ 29ರಂದು ತೆಲಂಗಾಣದ ಗೋದಾವರಿಖಾನಿಯಲ್ಲಿ ಚಿತ್ರೀಕರಣ ಪ್ರಾರಂಭವಾಗಿತ್ತು. ನಂತರ ಹೈದರಾಬಾದ್, ಮಂಗಳೂರು ಮತ್ತು ವೈಜಾಗ್ ಬಂದರು ಪ್ರದೇಶದಲ್ಲಿ ಚಿತ್ರೀಕರಣ ನಡೆದಿದೆ. ಒಟ್ಟು 114 ದಿನಗಳಲ್ಲಿ ಚಿತ್ರೀಕರಣವಾಗಿದೆ. ಪ್ರೀ ಕ್ಲೈಮ್ಯಾಕ್ಸ್‌ನಲ್ಲಿ ಆ್ಯಕ್ಷನ್ ಸೀಕ್ವೆನ್ಸ್‌ಗಾಗಿ ಸುಮಾರು 20 ಕೋಟಿ ರೂ. ಖರ್ಚು ಮಾಡಲಾಗಿದೆ ಎಂದು ವರದಿಯಾಗಿದೆ. ಮತ್ತೊಂದು ದೃಶ್ಯದಲ್ಲಿ ನಾಯಕ ನಟ 1,000 ಜನರೊಂದಿಗೆ ಜಗಳವಾಡುತ್ತಾನೆ. ಚಿತ್ರದ ಒಟ್ಟು ಬಜೆಟ್ ಸುಮಾರು 270 ಕೋಟಿ ರೂ. ಆಗಿದೆಯಂತೆ.
ಯಾವುದೇ ರೀತಿಯ ಅಶ್ಲೀಲತೆ ಇಲ್ಲದಿದ್ದರೂ, ಕೆಲವು ಹಿಂಸಾತ್ಮಕ ದೃಶ್ಯಗಳಿಂದಾಗಿ ಸೆನ್ಸಾರ್ ಮಂಡಳಿ 'ಎ' ಪ್ರಮಾಣಪತ್ರ ನೀಡಿದೆ. ಚಿತ್ರದ ಒಟ್ಟು ಅವಧಿ 2 ಗಂಟೆ 55 ನಿಮಿಷ 19 ಸೆಕೆಂಡುಗಳು. ಈ ವರ್ಷದ ಮೊದಲಾರ್ಧದಲ್ಲಿ ತೆರೆಕಾಣಬೇಕಿದ್ದ ಸಲಾರ್ ಬಿಡುಗಡೆ ದಿನಾಂಕ ಕೆಲವು ಕಾರಣಗಳಿಗಾಗಿ ಮುಂದೂಡಿಕೆಯಾಗಿತ್ತು.
ಇದನ್ನೂ ಓದಿ: ಅಡ್ವಾನ್ಸ್ ಟಿಕೆಟ್ ಬುಕಿಂಗ್: 'ಡಂಕಿ'ಗಿಂತ 'ಸಲಾರ್' ಒಂದು ಹೆಜ್ಜೆ ಮುಂದೆ!
'ಕೆಜಿಎಫ್' ಸಿನಿಮಾದಲ್ಲಿ 'ನರಾಚಿ' ಜಗತ್ತು ತೋರಿಸಿದ್ದ ಪ್ರಶಾಂತ್ ನೀಲ್ 'ಸಲಾರ್' ಮೂಲಕ 'ಖಾನ್ಸಾರ್' ಜಗತ್ತನ್ನು ಪರಿಚಯಿಸಲಿದ್ದಾರೆ. ಇಬ್ಬರು ಆತ್ಮೀಯ ಗೆಳೆಯರು ಪರಮ ಶತ್ರುಗಳಾಗುವುದು ಈ ಸಿನಿಮಾದ ಕಥೆ. ದೇವ-ವರದರಾಜ ಮನ್ನಾರ್ ಶತ್ರುಗಳಾಗಲು ಕಾರಣವೇನು? ಖಾನ್ಸಾರ್ ಮೂಲ ಕಥೆ ಏನೆಂಬುದು ಮುಂದಿನ ಕೆಲವೇ ಗಂಟೆಗಳಲ್ಲಿ ಗೊತ್ತಾಗುತ್ತದೆ!.