ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕಿಚ್ಚ ಸುದೀಪ್ ಅಭಿನಯದ ಬಹು ನಿರೀಕ್ಷೆಯ ಪ್ಯಾನ್ ಇಂಡಿಯಾ ಚಿತ್ರ ಕಬ್ಜ. ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಹೈ ವೋಲ್ಟೆಜ್ ಚಿತ್ರವಾಗಿರೋ ಕಬ್ಜಕ್ಕೆ 2023ರಲ್ಲಿ ಜಾಗತಿಕ ಸಿನಿ ಪ್ರೇಕ್ಷಕರು ಕಾಯುತ್ತಿದ್ದಾರೆ. ಹೌದು ಸಿನಿಮಾ, ಟಿವಿ ಕಾರ್ಯಕ್ರಮ ಹಾಗೂ ಸಿನಿಮಾ ತಾರೆಯರ ಅಧಿಕೃತ ಮಾಹಿತಿ ತಾಣವೆನಿಸಿಕೊಂಡಿರುವ ಇಂಟರ್ನೆಟ್ ಮೂವಿ ಡೇಟಾಬೇಸ್ (ಐಎಂಡಿಬಿ) ಈ ವರ್ಷದ ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. 20 ಚಿತ್ರಗಳ ಈ ಪಟ್ಟಿಯಲ್ಲಿ ಕನ್ನಡದಿಂದ ರಿಯಲ್ ಸ್ಟಾರ್ ಉಪೇಂದ್ರ ಹಾಗೂ ಸುದೀಪ್ ಅಭಿನಯಿಸಿರುವ ಪ್ಯಾನ್ ಇಂಡಿಯಾ ಚಿತ್ರ 'ಕಬ್ಜ' ಮಾತ್ರ ಇರುವುದು ವಿಶೇಷ.
ಕಬ್ಜ ಚಿತ್ರವು ಈ ಪಟ್ಟಿಯ ಏಳನೇ ಸ್ಥಾನದಲ್ಲಿದ್ದು, ಮಿಕ್ಕಂತೆ ಶಾರುಖ್ ಖಾನ್ ಅಭಿನಯದ ಪಠಾಣ್, ಅಲ್ಲು ಅರ್ಜುನ್ ಅಭಿನಯದ ಪುಷ್ಪ - ದಿ ರೂಲ್, ಪ್ರಭಾಸ್ ಅಭಿನಯದ ಸಲಾರ್ ಮತ್ತು ಆದಿಪುರುಷ್, ವಿಜಯ್ ಅಭಿನಯದ ವಾರಿಸು, ಸಲ್ಮಾನ್ ಖಾನ್ ಅಭಿನಯದ ಟೈಗರ್ 3, ಕಮಲ್ ಹಾಸನ್ ಅಭಿನಯದ ಇಂಡಿಯನ್ 2 ಮುಂತಾದ ಚಿತ್ರಗಳಿವೆ. ಹಿಂದಿ, ತೆಲುಗು ಮತ್ತು ತಮಿಳು ಚಿತ್ರಗಳೇ ಹೆಚ್ಚಿರುವ ಈ ಚಿತ್ರಗಳ ಪಟ್ಟಿಯಲ್ಲಿ ಕನ್ನಡದಿಂದ ಏಕೈಕ ಚಿತ್ರವಾಗಿ ಕಬ್ಜ ಹೊರಹೊಮ್ಮಿದೆ.
ಭೂಗತ ದೊರೆಯ ಚಿತ್ರ ಕಬ್ಜ: ಇನ್ನು ಸ್ವಾತಂತ್ರ್ಯ ಹೋರಾಟಗಾರ ಅಮರೇಶ್ವರನ ಮಗ ಅರ್ಕೇಶ್ವರ, 1960-1984 ರ ಅವಧಿಯಲ್ಲಿ ಭಾರತದಲ್ಲಿ ಭೂಗತ ಜಗತ್ತಿನ ರಾಜನಾಗುತ್ತಾನೆ ಮತ್ತು ಭಾರತೀಯ ಇತಿಹಾಸದಲ್ಲಿ ತನ್ನ ಛಾಪು ಮೂಡಿಸುತ್ತಾನೆ. ಇಂಥದ್ದೊಂದು ಕಥೆ ಇರುವ ಕಬ್ಜ ಚಿತ್ರದ ಬಗ್ಗೆ ಬರೀ ಕನ್ನಡವಷ್ಟೇ ಅಲ್ಲ, ಇಡೀ ಭಾರತೀಯ ಚಿತ್ರರಂಗದಲ್ಲೇ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಹೆಚ್ಚಿಸಿದೆ.
ಶ್ರೀ ಸಿದ್ಧೇಶ್ವರ ಎಂಟರ್ಪ್ರೈಸಸ್ನಡಿ ಆರ್. ಚಂದ್ರು ಬರೆದು ನಿರ್ಮಿಸಿ, ನಿರ್ದೇಶಿಸಿರುವ ಕಬ್ಜ ಚಿತ್ರವು ಶುರುವಾದಾಗಿನಿಂದ ಇಲ್ಲಿಯವರೆಗೂ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿವೆ. ಅದರಲ್ಲೂ ಇತ್ತೀಚೆಗೆ ಚಿತ್ರದ ಟೀಸರ್ ಬಿಡುಗಡೆಯಾದ ಮೇಲೆ ಆ ನಿರೀಕ್ಷೆಗಳು ನೂರ್ಮಡಿಯಾಗಿವೆ ಎಂದರೆ ತಪ್ಪಿಲ್ಲ. ಬರೀ ಕರ್ನಾಟಕವಷ್ಟೇ ಅಲ್ಲ, ಬೇರೆ ಭಾಷೆಗಳಲ್ಲೂ ಈ ಚಿತ್ರಕ್ಕಾಗಿ ಬೇಡಿಕೆ ಹೆಚ್ಚಿದ್ದು, ಈಗಾಗಲೇ ಹಿಂದಿ ಅವತರಣಿಕೆಯ ಹಕ್ಕುಗಳನ್ನು ಬಾಲಿವುಡ್ನ ಜನಪ್ರಿಯ ಚಿತ್ರ ನಿರ್ಮಾಣ ಹಾಗೂ ವಿತರಣಾ ಸಂಸ್ಥೆಯಾದ ಆನಂದ್ ಪಂಡಿತ್ ಮೋಷನ್ ಪಿಕ್ಚರ್ಸ್ ಪಡೆದುಕೊಂಡಿದೆ. ಹಿಂದಿಯಷ್ಟೇ ಅಲ್ಲ, ಬೇರೆ ಅವತರಣಿಕೆಗಳ ಹಕ್ಕುಗಳಿಗೂ ಬೇಡಿಕೆ ಹೆಚ್ಚಿದೆ.
ಕಬ್ಜ ಚಿತ್ರ ತಂಡ: ಕಬ್ಜ ಸಿನಿಮಾದಲ್ಲಿ ಉಪೇಂದ್ರ ಜತೆಗೆ ಸುದೀಪ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು, ಶ್ರೀಯಾ ಶರಣ್, ಕಬೀರ್ ಸಿಂಗ್ ದುಹಾನ್, ಪ್ರಮೋದ್ ಶೆಟ್ಟಿ, ಮುರಳಿ ಶರ್ಮ ನವಾಬ್ ಷಾ, ತೆಲುಗಿನ ಬೇಡಿಕೆಯ ನಟರಾದ ಪೊಸನಿ ಕೃಷ್ಣ ಮುರಳಿ ಈ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಎಂ.ಟಿ.ಬಿ ನಾಗರಾಜ್ ಅರ್ಪಿಸುವ, ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ಆರ್. ಚಂದ್ರು ಅವರೇ ನಿರ್ಮಿಸುತ್ತಿರುವ ಕಬ್ಜ ಚಿತ್ರಕ್ಕೆ ಕೆ.ಜಿ.ಎಫ್ ಖ್ಯಾತಿಯ ರವಿ ಬಸ್ರೂರು ಸಂಗೀತ ನಿರ್ದೇಶನವಿದೆ. ಎ.ಜೆ.ಶೆಟ್ಟಿ ಛಾಯಾಗ್ರಹಣ, ಮಹೇಶ್ ಸಂಕಲನ, ರಾಜು ಸುಂದರಂ, ಗಣೇಶ್, ಶೇಖರ್ ನೃತ್ಯ ನಿರ್ದೇಶನ, ರವಿವರ್ಮ, ವಿಕ್ರಂಮೋರ್, ವಿಜಯ್ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ.
ಕಬ್ಜ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಪ್ರಗತಿಯಲ್ಲಿದ್ದು, ಈ ವರ್ಷ ಹಲವು ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಚಿತ್ರವಾಗಿ ಬಿಡುಗಡೆಯಾಗಲಿದೆ. ನಿರ್ದೇಶಕ ಆರ್ ಚಂದ್ರು ನಿರ್ದೇಶನದ ಜೊತೆಗೆ ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಆಗುತ್ತಿರುವ ಕಬ್ಜ ಸಿನಿಮಾದ ಮೇಲೆ ದೊಡ್ಡ ಮಟ್ಟದ ನಿರೀಕ್ಷೆ ಹುಟ್ಟಿಸಿದೆ.
ಇದನ್ನೂ ಓದಿ: ರಿಲೀಸ್ಗೂ ಮೊದಲೇ ಡಿಮ್ಯಾಂಡ್ ಸೃಷ್ಟಿಸಿಕೊಂಡ ಬಿ ಸಿ ಪಾಟೀಲ್.. ಗರಡಿ ಆಡಿಯೋ ಕೋಟಿಗೆ ಮಾರಾಟ!