ಕರ್ನಾಟಕದಾದ್ಯಂತ ಈಗ 'ಕಾಟೇರ' ಸಿನಿಮಾದ್ದೇ ಕ್ರೇಜ್. ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಿನಿಪಯಣದಲ್ಲೇ ವಿಭಿನ್ನ ರೀತಿಯ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರೋ 'ಕಾಟೇರ' 400ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಭರ್ಜರಿ ಪ್ರದರ್ಶನಗೊಳ್ಳುತ್ತಿದೆ. ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುವತ್ತ ಸಾಗಿದೆ. ಮೊದಲ ದಿನವೇ 19.79 ಕೋಟಿ ರೂ. ಕಲೆಕ್ಷನ್ ಮಾಡಿ ಎಲ್ಲರ ಗಮನ ಸೆಳೆದಿದೆ.
'ಕಾಟೇರ' ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡ ಹಿನ್ನೆಲೆ ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಚಿತ್ರತಂಡದಿಂದ ಸಕ್ಸಸ್ ಮೀಟ್ ನಡೆಯಿತು. ಈ ಸಂದರ್ಭದಲ್ಲಿ, ನಮ್ಮ ಚಿತ್ರದ ಯಶಸ್ಸಿಗೆ ತಂತ್ರಜ್ಞರು, ಕಲಾವಿದರು, ಪೋಷಕ ಕಲಾವಿದರು ಸೇರಿ ಸಂಪೂರ್ಣ ತಂಡ ಕಾರಣ ಎಂದು ತಿಳಿಸಲಾಯಿತು.
ಕನ್ನಡ ಚಿತ್ರರಂಗ ಕಂಡ ಮೇರು ನಟ ಡಾ. ರಾಜ್‌ಕುಮಾರ್ ಅಭಿನಯದ 'ಭಕ್ತ ಪ್ರಹ್ಲಾದ' ಚಿತ್ರದ ಹಿರಣ್ಯ ಕಶಿಪು ಪಾತ್ರ ಎಂದೆಂದಿಗೂ ಎವರ್ ಗ್ರೀನ್. 1983ರಲ್ಲಿ ಬಂದ ಈ ಚಿತ್ರದಲ್ಲಿ ಹಿರಣ್ಯ ಕಶಿಪು ಪಾತ್ರದಲ್ಲಿ ಡಾ. ರಾಜ್‌ಕುಮಾರ್ ಅಬ್ಬರಿಸಿದ್ದರು. ಪೌರಾಣಿಕ ಪಾತ್ರದಲ್ಲಿ ಅದ್ಭುತ ಅಭಿನಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದಿದ್ದರು. ಹಿರಣ್ಯ ಕಶಿಪು ಹರಿ (ವಿಷ್ಣು)ಯನ್ನು ತನ್ನ ವೈರಿ ಎಂದು ಭಾವಿಸಿರುತ್ತಾನೆ. ಹಿರಣ್ಯ ಕಶಿಪುವಿನ ಪುತ್ರ ಪ್ರಹ್ಲಾದನೇ ವಿಷ್ಣುವಿನ ಭಕ್ತನಾಗಿರುತ್ತಾನೆ. ಇದು ತಂದೆಗೆ ಇಷ್ಟವಿರುವುದಿಲ್ಲ. ಇದೇ ಕಾರಣಕ್ಕೆ ಮಗನನ್ನು ಕೊಲ್ಲಲು ಪ್ರಯತ್ನಿಸಿದರೂ ಸಾಧ್ಯವಾಗುವುದಿಲ್ಲ. ತನ್ನ ಅಸಹಾಯಕತೆಯಿಂದ ಚಿಂತಾಕ್ರಾಂತನಾದಾಗ ಹಿರಣ್ಯ ಕಶಿಪು ಹೇಳುವ ಡೈಲಾಗ್ ಅಂದು ಸೂಪರ್ ಹಿಟ್ ಆಗಿತ್ತು. ರಂಗಭೂಮಿ ಹಿನ್ನೆಲೆಯ ಅಣ್ಣಾವ್ರು ಹಿರಣ್ಯ ಕಶಿಪು ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದರು. ಸ್ವಚ್ಛ ಕನ್ನಡದಲ್ಲಿ ಅಣ್ಣಾವ್ರ ಸಂಭಾಷಣೆ ಕೇಳುವುದೇ ಚೆಂದ. ಅಥಳ ವಿತಳ ಪಾತಾಳ ಎಂಬ ಡೈಲಾಗ್ ಸೂಪರ್ ಹಿಟ್ ಆಗಿತ್ತು.
ಈ ಡೈಲಾಗ್ ಅನ್ನು ಕಾಟೇರ ಚಿತ್ರದಲ್ಲಿ ದರ್ಶನ್ ಹೇಳುವ ಪರಿ ನೋಡುಗರನ್ನು ಹುಬ್ಬೇರಿಸುವಂತೆ ಮಾಡಿದೆ. ಅಣ್ಣಾವ್ರ ಬಳಿಕ ಕನ್ನಡದಲ್ಲಿ ದರ್ಶನ್ ಡೈಲಾಗ್ ಹೇಳಿದ ಶೈಲಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಈ ಬಗ್ಗೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ದರ್ಶನ್, ನಾನು ರಾಜ್‌ಕುಮಾರ್ ಅವರ ಕಾಲಿನ ಧೂಳಿಗೂ ಸಮ ಇಲ್ಲ. ಅವರಿಗೆ ನನ್ನನ್ನು ಹೋಲಿಸಬೇಡಿ. ಅವರು ಮಾಡಿರುವ ಪಾತ್ರಗಳಲ್ಲಿ 0.5 ರಷ್ಟನ್ನೂ ಕೂಡ ನಾನು ಮಾಡಲು ಆಗಲ್ಲ, ಪ್ರಯತ್ನಿಸಬಹುದಷ್ಟೇ ಅಂತಾ ದರ್ಶನ್ ತಿಳಿಸಿದರು.
ಇದನ್ನೂ ಓದಿ: ಕುಟುಂಬದವರಿಂದ ದೂರವಿರಬೇಕಾ ಪ್ರತಾಪ್! ತನಿಷಾ-ಕಾರ್ತಿಕ್ ನಡುವೆ ಬಿರುಕು?
ಡಾ. ರಾಜ್‌ಕುಮಾರ್ ಕುಟುಂಬಕ್ಕೂ, ದರ್ಶನ್ ತಂದೆ ತೂಗದೀಪ್ ಶ್ರೀನಿವಾಸ್ ಕುಟುಂಬಕ್ಕೂ ಒಂದು ಅವಿನಾಭಾವ ನಂಟಿದೆ. ರಾಜ್ ಸಿನಿಮಾಗಳಲ್ಲಿ ತೂಗದೀಪ ಶ್ರೀನಿವಾಸ್ ಇರುತ್ತಿದ್ದರು. ಇವರಿಬ್ಬರ ಸ್ನೇಹ ಗಾಢವಾಗಿತ್ತು. ತೂಗುದೀಪ ಶ್ರೀನಿವಾಸ್ ಅವರ ನಿಷ್ಕಲ್ಮಶ ಮನಸ್ಸಿನ ಸ್ನೇಹ ಅಣ್ಣಾವ್ರಿಗೆ ಅವರ ಮೇಲೆ ವಿಶೇಷ ಕಾಳಜಿ ಇಡುವಂತೆ ಮಾಡಿತ್ತು. ಒಮ್ಮೆ ತೂಗುದೀಪ ಶ್ರೀನಿವಾಸ್ ಅವರು ಮೈಸೂರಿನಲ್ಲಿ ಒಂದೊಳ್ಳೆ ಮನೆ ಕಟ್ಟಬೇಕು ಎಂದುಕೊಂಡಾಗ ಅವರ ಬಳಿ ಹಣದ ಅಭಾವವಿತ್ತು. ಇದರಿಂದಾಗಿ ಅವರು ಮನೆ ಕಟ್ಟುವ ಯೋಚನೆಯನ್ನು ಕೈ ಬಿಟ್ಟಿದ್ದರು.
ಇದನ್ನೂ ಓದಿ: ಅಭಿಷೇಕ್ ಅಂಬರೀಶ್ ಅಭಿನಯದ 'ಕಾಳಿ' ಸಿನಿಮಾ ನಿಂತು ಹೋಗಿದ್ದೇಕೆ?
ಈ ವಿಷಯ ಅಣ್ಣಾವ್ರಿಗೆ ಗೊತ್ತಾಗಿ ಮನೆ ಕಟ್ಟುವ ಕಾರ್ಯಕ್ಕೆ ಸಾಥ್ ನೀಡಿದರು. ಅಣ್ಣಾವ್ರಿಗೆ ಕೃತಜ್ಞತೆ ಸಲ್ಲಿಸುವ ನಿಟ್ಟಿನಲ್ಲಿ ತಮ್ಮ ಮನೆಗೆ 'ಮುಪಾ ಕೃಪಾ' ಎಂಬ ಹೆಸರಿಟ್ಟರು. ಮು ಅಂದರೆ ಮುತ್ತುರಾಜ್, ಇದು ಅಣ್ಣಾವ್ರ ನಿಜ ಹೆಸರು. ಹಾಗೂ ಪಾ ಅಂದರೆ ಪಾರ್ವತಮ್ಮ ಎಂದರ್ಥ. ಹೀಗೆ ಈ ಎರಡೂ ಕುಟುಂಬಗಳಿಗೂ ಒಂದೊಳ್ಳೆ ಸಂಬಂಧ ಇದೆ. ನಟ ದರ್ಶನ್ ಕೂಡ ದೊಡ್ಮನೆ ಮೇಲೆ ಅಷ್ಟೇ ಗೌರವ ಪ್ರೀತಿ ಹೊಂದಿದ್ದಾರೆ.