ನಿನ್ನೆಯಷ್ಟೇ ಪ್ರಭಾಸ್ ಅಭಿನಯದ 'ಆದಿಪುರುಷ' ಸಿನಿಮಾದ ಟೀಸರ್ ಬಿಡುಗಡೆಯಾಗಿದೆ. ಸರಯೂ ನದಿ ತೀರದಲ್ಲಿ ನಡೆದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ನಟ ಪ್ರಭಾಸ್ ಅವರು, ನಿರ್ದೇಶಕ ಓಂ ರಾವುತ್ ಅವರು ರಾಘವ ಪಾತ್ರದಲ್ಲಿ ನಟಿಸಲು ಅವಕಾಶ ನೀಡಿದಾಗ ನಿಜವಾಗಿಯೂ ನನಗೆ ಭಯವಾಗಿತ್ತು ಎಂದು ಹೇಳಿಕೊಂಡಿದ್ದಾರೆ.
ಆ ಪಾತ್ರವನ್ನು ಮಾಡುವಾಗ ನಾನೇನಾದರೂ ತಪ್ಪು ಮಾಡುತ್ತೇನಾ ಎಂಬ ಭಯವಿತ್ತು. ಪಾತ್ರ ಮಾಡುತ್ತೇನೆ ಎಂದು ಒಪ್ಪಿಗೆ ಸೂಚಿಸಲು ಮೂರು ದಿನ ನಿರ್ದೇಶಕರನ್ನು ಕಾಯಿಸಿದ್ದೇನೆ. ರಾಘವನ ಪಾತ್ರವನ್ನು ನಾನು ಅತ್ಯಂತ ಭಕ್ತಿ ಗೌರವ ಹಾಗೂ ಪ್ರೀತಿಯಿಂದ ಮಾಡಿದ್ದೇನೆ. ಅದಕ್ಕೆ ಆ ರಾಮನ ಆಶೀರ್ವಾದವಿದೆ ಏಕೆಂದರೆ ಇದು ದೇಶಕ್ಕೆ ಅತ್ಯಂತ ಅಮೂಕ್ಯವಾದ ಚಿತ್ರವಾಗಿದೆ. ಆ ಪಾತ್ರಕ್ಕೆ ನ್ಯಾಯ ಸಲ್ಲಿಸಲು ನನ್ನಿಂದಾದಷ್ಟು ಪ್ರಯತ್ನಿಸಿದ್ದೇನೆ ಎಂದು ಹೇಳಿದ್ದಾರೆ.
ಕೋವಿಡ್-19 ಮೊದಲ ಅಲೆಯ ಲಾಕ್ಡೌನ್ ಮಧ್ಯದ ಸಮಯದಲ್ಲಿ ನಿರ್ದೇಶಕ ಓಂ ರಾವುತ್ ಚಿತ್ರದ ಕುರಿತು ಮಾತನಾಡಲು ಪ್ರಭಾಸ್ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಲು ಮುಂಬೈನಿಂದ ಹೈದರಾಬಾದ್ಗೆ ತೆರಳಿದ್ದರು.
7000 ವರ್ಷಗಳ ಹಿಂದಿನ ವಾಲ್ಮೀಕಿ ರಾಮಾಯಣದ ಕಥೆಯನ್ನು ಆಧಾರವಾಗಿಟ್ಟುಕೊಂಡು ಆದಿಪುರುಷ್ ಸಿನಿಮಾವನ್ನು ರಾವುತ್ ನಿರ್ದೇಶಸಿದ್ದಾರೆ. ಆದರೆ ಚಿತ್ರದಲ್ಲಿ ಪ್ರಭಾಸ್ ಅವರು ರಾಮನ ಹೆಸರಲ್ಲಿ ಕರೆಸಿಕೊಳ್ಳದೇ ರಾಘವ ಎನ್ನುವ ಹೆಸರನ್ನು ಇಡಲಾಗಿದೆ. ನಾಯಕಿ ಕೃತಿ ಸನೋನ್ ಅವರು ಜಾನಕಿ ಎನ್ನುವ ಹೆಸರಿನಲ್ಲಿ ರಾವಣನ ಪಾತ್ರ ಮಾಡಿರುವ ಸೈಫ್ ಆಲಿ ಖಾನ್ ಅವರು ಲಂಕೇಶ್ ಎನ್ನುವ ಹೆಸರಿನಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ಓದಿ: ಆದಿಪುರುಷ ಟೀಸರ್ ಬಿಡುಗಡೆ: ಗಮನ ಸೆಳೆಯುತ್ತಿದೆ ಪ್ರಭಾಸ್-ಕೃತಿ ನಡುವಿನ ಕೆಮಿಸ್ಟ್ರಿ