ಸಿನಿಮಾ ನಿರ್ದೇಶನ ಅಲ್ಲದೇ ಇಂದಿನ ಟ್ರೆಂಡಿಗ್ಗೆ ತಕ್ಕಂತೆ ಹಾಡುಗಳನ್ನು ಬರೆಯುವ ವಿಕಟಕವಿ ಅಂದ್ರೆ ಯೋಗರಾಜ್ ಭಟ್. ಸದ್ಯ ಗರಡಿ ಸಿನಿಮಾದಲ್ಲಿ ಬ್ಯುಸಿಯಾಗಿರೋ ಭಟ್ರು ಬರೆದಿರೋ ಹೊಡಿರೆಲೆ ಹಲಗಿ ಹಾಡು ಸಿನಿ ಪ್ರಿಯರ ಮನಸ್ಸು ಗೆದ್ದಿದೆ. 'ಹೊಡಿರೆಲೆ ಹಲಗಿ' ಹಾಡನ್ನು ಮಿಲಿಯನ್ಗಟ್ಟಲೆ ಜನರು ವೀಕ್ಷಿಸಿ ಮೆಚ್ಚಿಕೊಂಡಿದ್ದಾರೆ.
ಯೋಗರಾಜ್ ಭಟ್ ಆ್ಯಕ್ಷನ್ ಕಟ್ ಹೇಳಿರುವ, ಯಶಸ್ ಸೂರ್ಯ ಹಾಗೂ ಕೌರವ ಖ್ಯಾತಿಯ ಬಿ.ಸಿ ಪಾಟೀಲ್ ಅಭಿನಯಿಸಿರುವ 'ಗರಡಿ' ಸಿನಿಮಾದ 'ಹೊಡಿರೆಲೆ ಹಲಗಿ' ಹಾಡನ್ನು ಕೆಲ ದಿನಗಳ ಹಿಂದಷ್ಟೇ ಬಿಡುಗಡೆ ಮಾಡಲಾಗಿತ್ತು. ಈ ಹಾಡಿನ ಮಾಧುರ್ಯಕ್ಕೆ ಕನ್ನಡಿಗರು ಮನ ಸೋತಿದ್ದಾರೆ. ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಈ ಹಾಡನ್ನು 16ಲಕ್ಷಕ್ಕೂ ಹೆಚ್ಚು ಜನರು ವೀಕ್ಷಿಸಿದ್ದಾರೆ. ಹಾಡಿಗೆ ಪ್ರಶಂಸೆಯ ಮಳೆ ಸುರಿಸುತ್ತಿದ್ದಾರೆ. ಮುಂದಿನ ಹಾಡು ಯಾವಾಗ ಬಿಡುಗಡೆಯಾಗಲಿದೆ? ಎಂಬ ನಿರೀಕ್ಷೆಯಲ್ಲಿದ್ದಾರೆ ಪ್ರೇಕ್ಷಕರು. ಮೊದಲ ಹಾಡಿಗೆ ಸಿಗುತ್ತಿರುವ ಉತ್ತಮ ಪ್ರತಿಕ್ರಿಯೆಗೆ "ಗರಡಿ" ತಂಡ ಸಂತಸ ವ್ಯಕ್ತಪಡಿಸಿದೆ.
ಯೋಗರಾಜ್ ಭಟ್ ಅವರು ಬರೆದಿರುವ ಈ ಹಾಡನ್ನು ಉತ್ತರ ಕರ್ನಾಟಕದ ಪ್ರತಿಭೆ ಮೇಘನಾ ಹಳಿಯಾಳ್ ಹಾಡಿದ್ದಾರೆ. ವಿ ಹರಿಕೃಷ್ಣ ಸಂಗೀತ ನೀಡಿದ್ದಾರೆ. ವಿಭಿನ್ನ ಚಿತ್ರಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಬೇಡಿಕೆ ಹೊಂದಿರುವ ನಟಿ ನಿಶ್ವಿಕಾ ನಾಯ್ಡು ಮೊದಲ ಬಾರಿಗೆ ಸ್ಪೆಷಲ್ ಹಾಡಿಗೆ ಸೊಂಟ ಬಳುಕಿಸಿದ್ದಾರೆ. ಉತ್ತರ ಕರ್ನಾಟಕದ ಕಾಸ್ಟೂಮ್ ತೊಟ್ಟು ಈ ಬೊಂಬಾಟ್ ಹಾಡಿಗೆ ನಿಶ್ವಿಕಾ ನಾಯ್ಡು ಮೈ ಕುಣಿಸಿದ್ದಾರೆ. ಸದ್ಯ ಈ ಹಾಡು ಪಡ್ಡೆ ಹುಡುಗರ ಹಾಟ್ ಫೇವರಿಟ್ ಆಗಿದೆ.
ಇನ್ನೂ ಚಿತ್ರದ ಹೆಸರೇ ಹೇಳುವ ಹಾಗೆ 'ಗರಡಿ' ಪೈಲ್ವಾನ್ಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಮಾಡಿರುವ ಸಿನಿಮಾ ಇದು. ಈ ಚಿತ್ರದಲ್ಲಿ ನಟ ಸೂರ್ಯ ಹಾಗು ಸೋನಾಲ್ ಮಾಂಟೆರೊ ಮತ್ತು ಕೌರವ ಖ್ಯಾತಿಯ ಬಿ.ಸಿ. ಪಾಟೀಲ್ ಅಲ್ಲದೇ, ರವಿಶಂಕರ್, ಬಲ ರಾಜವಾಡಿ, ಚೆಲುವರಾಜು, ರಾಘವೇಂದ್ರ, ಸೂರಜ್ ಬೇಲೂರ್, ಕಾಮಿಡಿ ಕಿಲಾಡಿಗಳು ನಯನ, ತ್ರಿವೇಣಿ, ರವಿಚೇತನ್, ತೇಜಸ್ವಿನಿ ಪ್ರಕಾಶ್ ಹೀಗೆ ದೊಡ್ಡ ತಾರಾ ಬಳಗವಿದೆ.
ಇದನ್ನೂ ಓದಿ: 'ಮ್ಯಾನೇಜರ್ ವಂಚಿಸಿಲ್ಲ, ಪರಸ್ಪರ ಒಪ್ಪಿಗೆಯಿಂದ ಪ್ರತ್ಯೇಕವಾಗಿದ್ದೇವೆ': ರಶ್ಮಿಕಾ ಮಂದಣ್ಣ ಸ್ಪಷ್ಟನೆ!
ಗರಡಿ ಚಿತ್ರಕ್ಕೆ ವಿ. ಹರಿಕೃಷ್ಣ ಅವರ ಸುಮಧುರ ಸಂಗೀತ, ನಿರಂಜನ್ ಬಾಬು ಅವರ ಛಾಯಾಗ್ರಹಣ, ಕೌರವ ವೆಂಕಟೇಶ್ ಅವರ ಸಾಹಸ ನಿರ್ದೇಶನ ಹಾಗೂ ಹೊಸ್ಮನೆ ಮೂರ್ತಿ ಅವರ ಕಲಾ ನಿರ್ದೇಶನ ಇದೆ. ಸಿನಿಮಾವನ್ನು ವನಜಾ ಪಾಟೀಲ್ ನಿರ್ಮಾಣ ಮಾಡುತ್ತಿದ್ದು, ಸೃಷ್ಟಿ ಪಾಟೀಲ್ ಈ ಚಿತ್ರದ ಕಾರ್ಯಕಾರಿ ನಿರ್ಮಾಪಕಿಯಾಗಿದ್ದಾರೆ. ಸದ್ಯ ಹೊಡಿರೆಲೆ ಹಲಗಿ ಹಾಡು ಮಿಲಿನ್ಗಟ್ಟಲೆ ವೀಕ್ಷಣೆ ಆಗಿದ್ದು, ಚಿತ್ರತಂಡದ ಆತ್ಮ ವಿಶ್ವಾಸವನ್ನು ಹೆಚ್ಚಿಸಿದೆ. ಸಿನಿಮಾ ಬಿಡುಗಡೆಗೆ ಸಿನಿಪ್ರಿಯರು ಕಾತರರಾಗಿದ್ದಾರೆ.
ಇದನ್ನೂ ಓದಿ: ಆದಿಪುರುಷ್ ಕಲೆಕ್ಷನ್ನಲ್ಲಿ ಭಾರಿ ಕುಸಿತ: ಒಂದು ವಾರದಲ್ಲಿ ಸಿನಿಮಾ ಸಂಪಾದಿಸಿದ್ದೆಷ್ಟು ಗೊತ್ತಾ?