ಸ್ಯಾಂಡಲ್ವುಡ್ನಲ್ಲಿ ನಟನಾಗಿ, ಸಂಗೀತ ನಿರ್ದೇಶನಾಗಿ ಲಯಕೋಕಿಲ ಗುರುತಿಸಿಕೊಂಡಿದ್ದಾರೆ. ಇವರ ಚೊಚ್ಚಲ ನಿರ್ದೇಶನದ ಚಿತ್ರ 'ತಾಯ್ತ'. ಈ ಸಿನಿಮಾದ 'ಶಿವನೇ ಕಾಪಾಡು' ಹಾಡು ಇತ್ತೀಚೆಗೆ ಬಿಡುಗಡೆಯಾಯಿತು. ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಧರ್ಮದ ದೇವರ ಕುರಿತಾದ ಈ ಹಾಡನ್ನು ಮೂರು ಧರ್ಮದ ಗುರುಗಳು ಬಿಡುಗಡೆಗೊಳಿಸಿ ಚಿತ್ರತಂಡಕ್ಕೆ ಶುಭಹಾರೈಸಿದರು. ಈ ಸಂದರ್ಭದಲ್ಲಿ ಸಾಧುಕೋಕಿಲ, ಉಷಾ ಕೋಕಿಲ, ಸಿರಿ ಮ್ಯೂಸಿಕ್ ಚಿಕ್ಕಣ್ಣ ಉಪಸ್ಥಿತರಿದ್ದರು. 'ಶಿವನೇ ಕಾಪಾಡು' ಹಾಡನ್ನು ರಾಮ್ ನಾರಾಯಣ್ ಬರೆದಿದ್ದಾರೆ.
ಇದನ್ನೂ ಓದಿ: Skanda: ಉಸ್ತಾದ್ ರಾಮ್ ಪೋತಿನೇನಿ ಜೊತೆ ಬಬ್ಲಿ ಬೆಡಗಿ ಶ್ರೀಲೀಲಾ ಬೊಂಬಾಟ್ ಡ್ಯಾನ್ಸ್
ಹಾಡು ಬಿಡುಗಡೆಗೊಂಡ ಬಳಿಕ ಮೊದಲು ಮಾತು ಶುರು ಮಾಡಿದ ನಟ ಹಾಗೂ ನಿರ್ದೇಶಕ ಸಾಧುಕೋಕಿಲ, "ನಮ್ಮದು ಸಂಗೀತದ ಕುಟುಂಬ. ಬಹುತೇಕ ಎಲ್ಲರೂ ಸಂಗೀತಕ್ಕೆ ಸಂಬಂಧಿಸಿದ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡುತ್ತಿದ್ದೇವೆ. ನಮ್ಮ ಅಣ್ಣ ಲಯಕೋಕಿಲ ಈಗ ನಿರ್ದೇಶಕರಾಗಿದ್ದಾರೆ. ಅವರ ನಿರ್ದೇಶನದ ತಾಯ್ತ ಚಿತ್ರದ ಹಾಡು ಇಂದು ಬಿಡುಗಡೆಯಾಗಿದೆ. ಈ ಹಾಡಿಗೆ ಅವರೇ ಸಂಗೀತ ನೀಡಿದ್ದಾರೆ. ನಾನು ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ಸಿನಿಮಾ ಯಶಸ್ವಿಯಾಗಲಿ" ಎಂದು ಶುಭಹಾರೈಸಿದರು.
ಬಳಿಕ ಸಾಧುಕೋಕಿಲ ಸಹೋದರ, ಸಂಗೀತ ನಿರ್ದೇಶಕ ಲಯಕೋಕಿಲ ಮಾತನಾಡಿ, "ಇದು ನನ್ನ ಮೊದಲ ನಿರ್ದೇಶನದ ಚಿತ್ರ. ಹಾರಾರ್ ಜಾನರ್ನ ಚಿತ್ರವಾಗಿದ್ದರೂ ಸಹ, ಕಾಮಿಡಿ ಮತ್ತು ಥ್ರಿಲ್ಲರ್ ಇದೆ. ನಿರ್ಮಾಪಕ ಶಾಹಿದ್ ಅವರು ಕಥೆ ಬರೆದಿದ್ದಾರೆ. ಚಿತ್ರಕಥೆ, ಸಂಭಾಷಣೆ ಬರೆದು ಸಂಗೀತ ಸಂಯೋಜನೆ ಮತ್ತು ನಿರ್ದೇಶನವನ್ನು ನಾನು ಮಾಡಿದ್ದೇನೆ" ಎಂದು ತಿಳಿಸಿದರು.
ಇದನ್ನೂ ಓದಿ: Skanda: ಉಸ್ತಾದ್ ರಾಮ್ ಪೋತಿನೇನಿ ಜೊತೆ ಬಬ್ಲಿ ಬೆಡಗಿ ಶ್ರೀಲೀಲಾ ಬೊಂಬಾಟ್ ಡ್ಯಾನ್ಸ್
ಮುಂದುವರೆದು, "ರಿಯಾನ್ ಅವರು ಈ ಚಿತ್ರದ ನಾಯಕನಾಗಿ ಹಾಗೂ ಹರ್ಷಿಕಾ ಪೂಣಚ್ಚ ನಾಯಕಿಯಾಗಿ ನಟಿಸಿದ್ದಾರೆ. ನನ್ನ ಮಗಳು ಭಾನುಪ್ರಿಯ ಕೂಡ ಅಭಿನಯಿಸಿದ್ದಾರೆ. ಕೆಲವರನ್ನು ಬಿಟ್ಟು, ಈ ಚಿತ್ರದಲ್ಲಿ ಅಭಿನಯಿಸಿರುವ ಎಲ್ಲರೂ ಹೊಸ ಕಲಾವಿದರೆ. ಚಿತ್ರದಲ್ಲಿ ಒಟ್ಟು ನಾಲ್ಕು ಹಾಡುಗಳಿವೆ. ಗೀತೆ ರಚನೆಕಾರ ರಾಮ್ ನಾರಾಯಣ್ ಬರೆದಿರುವ ಪದಗಳಿಗೆ ಅನುರಾಧ ಭಟ್ ಧ್ವನಿಯಾಗಿದ್ದಾರೆ" ಎಂದು ಚಿತ್ರದ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು.
ತಾಯ್ತ ಶೀಘ್ರದಲ್ಲಿ ಬಿಡುಗಡೆ: ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ನಾಯಕ ನಟ ರಿಯಾನ್, ನಾಯಕಿ ನಟಿ ಹರ್ಷಿಕಾ ಪೂಣಚ್ಚ, ನಟಿ ಭಾನುಪ್ರಿಯ ಸೇರಿದಂತೆ ಅನೇಕ ಕಲಾವಿದರು ತಾಯ್ತ ಚಿತ್ರದ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು. ಇಷ್ಟು ದಿನ ನಟನಾಗಿ, ಸಂಗೀತ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದ ಲಯಕೋಕಿಲ ಅವರ ಮೊದಲ ನಿರ್ದೇಶನದ ಸಿನಿಮಾದ ಮೇಲೆ ಪ್ರೇಕ್ಷಕರಲ್ಲಿ ನಿರೀಕ್ಷೆ ಇದೆ. ಈಗಾಗಲೇ ಬಹುತೇಕ ಚಿತ್ರೀಕರಣ ಮುಗಿಸಿರುವ ತಾಯ್ತ ಸಿನಿಮಾ ಸದ್ಯದಲ್ಲೇ ಬಿಡುಗಡೆ ಆಗಲಿದೆ.
ಇದನ್ನೂ ಓದಿ: ಬಹುನಿರೀಕ್ಷಿತ 'ವುಲ್ಫ್' ಚಿತ್ರದ ಟೀಸರ್ ರಿಲೀಸ್: ಪ್ರಭುದೇವ ಹೊಸ ಲುಕ್ಗೆ ಫ್ಯಾನ್ಸ್ ಫಿದಾ!