ಗ್ಲೋಬಲ್ ಸ್ಟಾರ್ ರಾಮ್ಚರಣ್ ನಟನೆಯ ಮುಂಬರುವ ಚಿತ್ರ 'ಗೇಮ್ ಚೇಂಜರ್'. ಭಾರೀ ನಿರೀಕ್ಷೆ ಮೂಡಿಸಿರುವ ಈ ಸಿನಿಮಾ ಸದ್ಯ ಶೂಟಿಂಗ್ ಹಂತದಲ್ಲಿದೆ. ನಿರ್ದೇಶಕ ಶಂಕರ್ ಅವರು ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಪ್ಯಾನ್ ಇಂಡಿಯಾ ಚಿತ್ರದ ಮೇಲೆ ಅಭಿಮಾನಿಗಳ ನಿರೀಕ್ಷೆ ಬೆಟ್ಟದಷ್ಟಿದೆ. ಈ ಸಿನಿಮಾದಿಂದ ಇಲ್ಲಿಯವರೆಗೆ ಪೋಸ್ಟರ್ಗಳು ಬಿಟ್ಟರೆ ಮತ್ಯಾವುದೇ ಅಪ್ಡೇಟ್ಸ್ ಬಂದಿಲ್ಲ. ಆದರೆ, ಇತ್ತೀಚೆಗಷ್ಟೇ ಚಿತ್ರದ ಮೊದಲ ಹಾಡನ್ನು ದೀಪಾವಳಿಗೆ ಬಿಡುಗಡೆಗೊಳಿಸುವುದಾಗಿ ಚಿತ್ರತಂಡ ಘೋಷಿಸಿತ್ತು. ಆದರೆ, ಇದೀಗ 'ಜರಗಂಡಿ' ಹಾಡು ಬಿಡುಗಡೆಯನ್ನು ಮುಂದೂಡಲಾಗಿದೆ.
ರಾಮ್ಚರಣ್ ನಟನೆಯ ಸಿನಿಮಾ ಆಗಿದ್ದರಿಂದ 'ಗೇಮ್ ಚೇಂಜರ್' ಮೇಲೆ ಸಾಕಷ್ಟು ನಿರೀಕ್ಷೆಯಿದೆ. ಇತ್ತೀಚೆಗೆ ಈ ಸಿನಿಮಾದ ಹಾಡು ಆನ್ಲೈನ್ನಲ್ಲಿ ಸೋರಿಕೆಯಾಗಿ, ವೈರಲ್ ಆಗಿತ್ತು. ಒಪ್ಪಿಗೆಯಿಲ್ಲದೇ, ಹಾಡು ಲೀಕ್ ಆಗಿದ್ದರ ಬಗ್ಗೆ ಕೋಪಗೊಂಡಿದ್ದ ಚಿತ್ರ ತಯಾರಕರು ಅಧಿಕೃತ ದೂರು ದಾಖಲಿಸಿದ್ದರು. ಅಲ್ಲದೇ, ಎಫ್ಐಆರ್ನ ಫೋಟೋವನ್ನು ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳನ್ನು ಹಂಚಿಕೊಂಡಿದ್ದರು. ಕೆಲವು ದಿನಗಳ ಹಿಂದೆ ಹಾಡು ಸೋರಿಕೆಗೆ ಕಾರಣವಾದ ಇಬ್ಬರನ್ನು ಸೈಬರ್ ಪೊಲೀಸರು ಬಂಧಿಸಿದ್ದರು.
ಆದರೆ ಲೀಕ್ ಆದ ಹಾಡು ಅಂತಿಮವಲ್ಲ. ಇದು ಜಸ್ಟ್ ಟೆಸ್ಟಿಂಗ್ ಹಾಡಾಗಿತ್ತು. ಆದರೆ, ಸೋರಿಕೆಯಾದ 30 ಸೆಕೆಂಡ್ಗಳ ಹಾಡಿನ ತುಣುಕು ಮಾತ್ರ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿತ್ತು. ಇದನ್ನು ಮನಗಂಡ ಚಿತ್ರ ತಯಾರಕರು ದೀಪಾವಳಿ ಹಬ್ಬದ ಉಡುಗೊರೆಯಾಗಿ 'ಜರಗಂಡಿ' ಹಾಡನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದರು. ಇದರಿಂದ ರಾಮ್ಚರಣ್ ಅಭಿಮಾನಿಗಳು ಸಂತೋಷದಲ್ಲಿದ್ದರು. ಆದರೆ, ಇದೀಗ ಚಿತ್ರತಂಡ ಹಾಡಿನ ಬಿಡುಗಡೆ ದಿನಾಂಕವನ್ನು ಮುಂದೂಡಿದೆ. ಇದು ಫ್ಯಾನ್ಸ್ಗೆ ನಿರಾಸೆ ಮೂಡಿಸಿದೆ.
ಇದನ್ನೂ ಓದಿ: ರಜನಿಕಾಂತ್ ಮುಂದಿನ ಸಿನಿಮಾ 'ಲಾಲ್ ಸಲಾಂ' ಟೀಸರ್ ಬಿಡುಗಡೆಗೆ ಮುಹೂರ್ತ ಫಿಕ್ಸ್
ಕೆಲವು ದಿನಗಳ ಹಿಂದೆ 'ಜರಗಂಡಿ' ಬಿಡುಗಡೆ ದಿನಾಂಕವನ್ನು ಮುಂದೂಡಲಾಗುತ್ತದೆ ಎಂಬ ವದಂತಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿತ್ತು. ಇದರಿಂದ ಅಭಿಮಾನಿಗಳು ಆತಂಕಗೊಂಡಿದ್ದರು. ಇದು ನಿಜವಾಗಬಾರದು ಎಂದು ಅವರು ಬಯಸಿದ್ದರು. ಆದರೆ, ಇದೀಗ ಚಿತ್ರತಂಡ ಹಾಡು ಬಿಡುಗಡೆಯನ್ನು ಮುಂದೂಡಿದೆ. ಆಡಿಯೋ ದಾಖಲಾತಿಗೆ ಸಂಬಂಧಿಸಿದ ತಾಂತ್ರಿಕ ಸಮಸ್ಯೆಯಿಂದ ಹಾಡನ್ನು ಮುಂದೂಡಲಾಗಿದೆ. ವಿವಿಧ ಚಿತ್ರಗಳ ನಡುವಿನ ಅನಿವಾರ್ಯ ಆಡಿಯೋ ದಾಖಲಾತಿ ಸಮಸ್ಯೆಗಳಿಂದಾಗಿ, ಗೇಮ್ ಚೇಂಜರ್‌ನ ಜರಗಂಡಿ ಹಾಡಿನ ಬಿಡುಗಡೆಯನ್ನು ಮುಂದೂಡಲಾಗಿದೆ ಎಂದು ಚಿತ್ರತಂಡ ತಿಳಿಸಿದೆ.
ಅಲ್ಲದೇ, ಹೊಸ ಬಿಡುಗಡೆ ದಿನಾಂಕವನ್ನು ಅತ್ಯಂತ ಶೀಘ್ರದಲ್ಲೇ ಘೋಷಿಸಲಿದ್ದೇವೆ. ರಾಮ್ಚರಣ್ ಮತ್ತು ಶಂಕರ್ ಅವರ ಅಭಿಮಾನಿಗಳ ಕಾಯುವಿಕೆ ಸಾರ್ಥಕವಾಗಲಿದೆ. ಗೇಮ್ ಚೇಂಜರ್ ಸಿನಿಮಾ ಅಭಿಮಾನಿಗಳಿಗೆ ಖುಷಿ ನೀಡಲಿದೆ. ಚಿತ್ರಕ್ಕಾಗಿ ಸಾಕಷ್ಟು ಮಂದಿ ಶ್ರಮಿಸುತ್ತಿದ್ದು, ನಿಮಗೆ ಉತ್ತಮವಾದುದನ್ನೇ ನೀಡಲಿದ್ದಾರೆ ಎಂದು ಹೇಳಿದೆ. ಆದರೆ, ದೀಪಾವಳಿಗೆ 'ಜರಗಂಡಿ' ನಿರೀಕ್ಷೆಯಲ್ಲಿದ್ದ ಫ್ಯಾನ್ಸ್ಗೆ ಮಾತ್ರ ನಿರಾಸೆ ಮೂಡಿದೆ.
ಚಿತ್ರತಂಡ ಹೀಗಿದೆ.. 'ಗೇಮ್ ಚೇಂಜರ್' ಸಿನಿಮಾವನ್ನು ಖ್ಯಾತ ನಿರ್ಮಾಪಕ ದಿಲ್ ರಾಜು ಅದ್ಧೂರಿ ಬಜೆಟ್ನಲ್ಲಿ ನಿರ್ಮಿಸುತ್ತಿದ್ದಾರೆ. ಆಕ್ಷನ್ ಎಂಟರ್ಟೈನ್ಮೆಂಟ್ ಚಿತ್ರವಾಗಿ ಇದು ತಯಾರಾಗುತ್ತಿದೆ. ಸಿನಿಮಾದಲ್ಲಿ ರಾಮ್ಚರಣ್ ದ್ವಿಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ರಾಮ್ಚರಣ್ಗೆ ನಾಯಕಿಯಾಗಿ ಬಾಲಿವುಡ್ ಬೆಡಗಿ ಕಿಯಾರಾ ಅಡ್ವಾಣಿ ನಟಿಸುತ್ತಿದ್ದಾರೆ. ತಮನ್ ಸಂಗೀತಾ ಸಂಯೋಜನೆ ಇರಲಿದೆ. ಹಿರಿಯ ನಟ ಎಸ್.ಜೆ ಸೂರ್ಯ, ಅಂಜಲಿ, ಶ್ರೀಕಾಂತ್, ಸುನೀಲ್ ಮುಂತಾದವರು ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಮುಂದಿನ ವರ್ಷ ಆಗಸ್ಟ್ ನಂತರ ಈ ಚಿತ್ರ ಬಿಡುಗಡೆಯಾಗುವ ಸಾಧ್ಯತೆಯಿದೆ.
ಇದನ್ನೂ ಓದಿ: 'ಟೈಗರ್ 3 ಲೀಕ್ ಆಗದಂತೆ ನೋಡಿಕೊಳ್ಳಿ': ಅಭಿಮಾನಿಗಳಲ್ಲಿ ಸಲ್ಮಾನ್, ಕತ್ರಿನಾ ಮನವಿ!