ಬಿಚ್ಚುಗತ್ತಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಭರವಸೆ ಮೂಡಿಸಿರೋ ನಟ ರಾಜವರ್ಧನ್. ಈ ಚಿತ್ರದ ಬಳಿಕ ಕಥೆಗೆ ಹೆಚ್ಚು ಪ್ರಾಧಾನ್ಯತೆ ಇರುವ ಚಿತ್ರಗಳನ್ನೇ ಆಯ್ಕೆ ಮಾಡುತ್ತಿರುವ ರಾಜವರ್ಧನ್ ಈಗ ಗಜರಾಮನಾಗಿ ತೆರೆಮೇಲೆ ಮಿಂಚಲು ಸಿದ್ಧರಾಗಿದ್ದಾರೆ. ಗಜರಾಮ ಸಿನಿಮಾದ ಶೂಟಿಂಗ್ ಭರದಿಂದ ಸಾಗುತ್ತಿದೆ. ಸಿನಿಮಾ ಸೆಟ್ಟೇರಿದ ದಿನದಿಂದಲೇ ಚಿತ್ರೀಕರಣ ಆರಂಭಿಸಿದ ಚಿತ್ರತಂಡ ಕೇವಲ 16 ದಿನಗಳಲ್ಲಿ ತನ್ನ ಮೊದಲ ಹಂತದ ಚಿತ್ರೀಕರಣವನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.
ಸಿನೆಮಾ ನಿರ್ದೇಶಕ ಸುನೀಲ್ ಕುಮಾರ್ ವಿ.ಎ ಮಾತನಾಡಿ, ಹದಿನಾರು ದಿನಗಳ ಕಾಲ ಬೆಂಗಳೂರು ಸುತ್ತಮುತ್ತ ಚಿತ್ರೀಕರಣ ನಡೆಸಿದ್ದೇವೆ. ಮೊದಲ ಶೆಡ್ಯೂಲ್ ಮುಗಿದಿದ್ದು ಎರಡನೆ ಶೆಡ್ಯೂಲ್ ಗಾಗಿ ಲೊಕೇಶನ್ ಹುಡುಕಾಟದಲ್ಲಿದ್ದೇವೆ. ಇನ್ನು ನಲವತ್ತು ದಿನಗಳ ಶೂಟಿಂಗ್ ಬಾಕಿ ಇದೆ. ನಾನು ಏನು ಅಂದುಕೊಂಡಿದ್ದೆನೋ ಹಾಗೆಯೇ ಚಿತ್ರೀಕರಣ ನಡೆಯುತ್ತಿದೆ. ಸಿನಿಮಾವೂ ಮೂಡಿ ಬರ್ತಿದೆ. ಮೊದಲ ಸಿನಿಮಾ ಎಂದು ನೋಡದೇ ಹಿರಿಯ ಹಾಗೂ ಅನುಭವಿ ಛಾಯಾಗ್ರಾಹಕ ಕೆ.ಎಸ್ ಚಂದ್ರಶೇಖರ್ ನನಗೆ ಸಹಕಾರ ನೀಡುತ್ತಾ ನನ್ನ ಬೆನ್ನೆಲುಬಾಗಿ ನಿಂತಿದ್ದಾರೆ ಎಂದರು.

ಚಿತ್ರರಂಗದಲ್ಲಿ ಹಲವು ವರ್ಷಗಳಿಂದ ಸಹಾಯಕ ನಿರ್ದೇಶಕರಾಗಿ ದುಡಿದಿರುವ ಸುನೀಲ್ ಕುಮಾರ್ ವಿ.ಎ ಅವರ ನಿರ್ದೇಶನದ ಮೊದಲ ಸಿನಿಮಾ ಇದಾಗಿದೆ. ಲವ್ ಸ್ಟೋರಿ ಹಾಗೂ ಮಾಸ್ ಆಕ್ಷನ್ ಕಥಾಹಂದರ ಒಳಗೊಂಡ ಚಿತ್ರದಲ್ಲಿ ರಾಜವರ್ಧನ್ ಜೋಡಿಯಾಗಿ ಹರಿಕಥೆ ಅಲ್ಲ ಗಿರಿಕಥೆ ಖ್ಯಾತಿಯ ತಪಸ್ವಿನಿ ಪೂಣಚ್ಚ ನಟಿಸುತ್ತಿದ್ದಾರೆ. ಶಿಷ್ಯ ದೀಪಕ್ ಚಿತ್ರದ ಪ್ರಮುಖ ಪಾತ್ರದಲ್ಲಿ ಮಿಂಚುತ್ತಿದ್ದು, ಖಳನಟನಾಗಿ ಪೈಲ್ವಾನ್ ಖ್ಯಾತಿಯ ಕಬೀರ್ ದುಹಾನ್ ಸಿಂಗ್ ನಟಿಸುತ್ತಿದ್ದಾರೆ. ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂತು, ಗೋವಿಂದೇ ಗೌಡ ಒಳಗೊಂಡ ತಾರಾಬಳಗ ಸಿನಿಮಾದಲ್ಲಿದೆ.
ಲೈಫ್ ಲೈನ್ ಫಿಲ್ಮಂ ಪ್ರೊಡಕ್ಷನ್ ನಡಿ ನರಸಿಂಹಮೂರ್ತಿ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝೇವಿಯರ್ ಫರ್ನಾಂಡಿಸ್ ಕೂಡ ನಿರ್ಮಾಣದ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಮನೋಮೂರ್ತಿ ಸಂಗೀತ ನಿರ್ದೇಶನ, ಕೆ.ಎಸ್. ಚಂದ್ರಶೇಖರ್ ಛಾಯಾಗ್ರಾಹಣ, ಜ್ಞಾನೇಶ್ ಬಿ ಮಠದ್ ಸಂಕಲನ, ಧನಂಜಯ್ ನೃತ್ಯ ನಿರ್ದೇಶನ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ, ಚೇತನ್ ಕುಮಾರ್ ಸಾಹಿತ್ಯದಲ್ಲಿ ಸಿನೆಮಾ ಹಾಡುಗಳು ಮೂಡಿ ಬರಲಿದೆ.
ಇದನ್ನೂ ಓದಿ :ನ.25ಕ್ಕೆ ತೆರೆ ಕಾಣಲಿರುವ ಸ್ಪೂಕಿ ಕಾಲೇಜ್ ಪ್ರಚಾರ ಅಬ್ಬರ