ವಿಭಿನ್ನ ಮ್ಯಾನರಿಸಂನಿಂದ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಬೇಡಿಕೆ ಹೊಂದಿರುವ ಹಾಸ್ಯನಟ ಡಿಂಗ್ರಿ ನಾಗರಾಜ್. ಇವರ ಪುತ್ರ ರಾಜವರ್ಧನ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. 'ಬಿಚ್ಚುಗತ್ತಿ' ಮೂಲಕ ಸ್ಯಾಂಡಲ್ವುಡ್ ಪ್ರವೇಶಿಸಿದ ಮ್ಯಾಸಿವ್ ಸ್ಟಾರ್, ಪ್ರಸ್ತುತ 'ಗಜರಾಮ' ಸಿನಿಮಾ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಇತ್ತೀಚಿಗೆ ಟೀಸರ್ ಬಿಡುಗಡೆ ಕಾರ್ಯಕ್ರಮ ಮಲ್ಲೇಶ್ವರನಲ್ಲಿರುವ ಎಸ್.ಆರ್.ವಿ ಥಿಯೇಟರ್ನಲ್ಲಿ ನಡೆಯಿತು.
- " class="align-text-top noRightClick twitterSection" data="">
ನಾಯಕ ನಟ ರಾಜವರ್ಧನ್ ಮಾತನಾಡಿ, ''ಇದೊಂದು ಬಹಳ ಎಮೋಷನಲ್ ಜರ್ನಿ. ಮಾತನಾಡಲು ಕಂಟೆಂಟ್ ಬಹಳಾನೇ ಇದೆ. ಅದನ್ನು ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಮಾತನಾಡುತ್ತೇನೆ. ಈ ರೀತಿ ಕಮರ್ಷಿಯಲ್ ಇರುವ ಎಲಿಮೆಂಟ್ ಅನ್ನು ನಾನು ಸಣ್ಣ ವಯಸ್ಸಿನಲ್ಲಿ ಬೇರೆ ಹೀರೋಗಳನ್ನು ನೋಡಿ ಸಿಳ್ಳೆ, ಚಪ್ಪಾಳೆ ಹೊಡೆದು ಎಂಜಾಯ್ ಮಾಡುತ್ತಿದ್ದೆ. ಇಂದು ನನ್ನನ್ನು ನಾನು ಸ್ಕ್ರೀನ್ ಮೇಲೆ ನೋಡಿಕೊಂಡಿದ್ದು ಖುಷಿಯಾಗಿದೆ. ನನ್ನ ತಂದೆ ಟೀಸರ್ ನೋಡಿ ಬಹಳ ಖುಷಿಪಟ್ಟರು. ಅದು ನನಗೆ ದೊಡ್ಡ ಪ್ರಶಸ್ತಿ ಸಿಕ್ಕಷ್ಟೇ ಸಂತೋಷವಾಯಿತು'' ಎಂದರು.
''ಇದು ನನ್ನ ಎರಡನೇ ಸಿನಿಮಾ. ಇಂಡಸ್ಟ್ರಿಗೆ ಹೊಸಬಳು. ನನ್ನ ಮೊದಲ ಚಿತ್ರವನ್ನು ರಿಷಬ್ ಸರ್ ಜೊತೆ ಮಾಡಿದ್ದು, ನಾನು ಬಹಳ ಅದೃಷ್ಟವಂತೆ. 'ಹರಿಕಥೆ ಅಲ್ಲ ಗಿರಿಕಥೆ' ಒಂದು ಬ್ಯೂಟಿಫುಲ್ ಜರ್ನಿ. ಗಜರಾಮ ಸಿನಿಮಾಗೆ ಬಂದಾಗ ಸುನಿಲ್ ಸರ್ ಹೇಳಿದ ಕಥೆ ಕೇಳಿ ಖುಷಿಯಾಯ್ತು. ಇಡೀ ತಂಡ ಎಲ್ಲಾ ರೀತಿಯಿಂದಲೂ ಬಹಳ ಸಪೋರ್ಟ್ ಮಾಡಿದ್ದಾರೆ. ಟೀಸರ್ ನೋಡಿ ಪಾಸಿಟಿವ್ ಎನರ್ಜಿ ಬಂದಿದೆ'' ಎಂದು ನಾಯಕಿ ತಪಸ್ವಿನಿ ತಿಳಿಸಿದರು.
ನಿರ್ದೇಶಕ ಸುನಿಲ್ ಕುಮಾರ್ ಮಾತನಾಡುತ್ತಾ, ''ಟೀಸರ್ ಇಷ್ಟು ಅದ್ಭುತವಾಗಿ ಬರಲು ಕಾರಣ ನಿರ್ಮಾಪಕರು. ಅವರು ನನ್ನ ಮೇಲೆ ನಂಬಿಕೆ ಇಟ್ಟು ಪ್ರಾಜೆಕ್ಟ್ ಕೊಟ್ಟಿದ್ದರು. ಆ ನಂಬಿಕೆ ಉಳಿಸಿಕೊಂಡಿದ್ದೇನೆಂದು ಭಾವಿಸುತ್ತೇನೆ. ರಾಜವರ್ಧನ್ ಸರ್ ಬಹಳ ಶ್ರದ್ಧೆಯಿಂದ ಕೆಲಸ ಮಾಡಿದ್ದಾರೆ. ರಾಮ ಪಾತ್ರಕ್ಕೆ ಪರಿಪೂರ್ಣವಾಗಿ ಜೀವ ತುಂಬಿದ್ದಾರೆ. ದೀಪಕ್ ಸರ್ ಪೊಲೀಸ್ ಪಾತ್ರವನ್ನು ಅಚ್ಚುಕಟ್ಟಾಗಿ ನಿಭಾಯಿಸಿದ್ದಾರೆ. ಚಂದ್ರು ಸರ್ ಕ್ಯಾಮರಾವರ್ಕ್, ಮನೋಮೂರ್ತಿ ಸರ್ ಸಂಗೀತ, ಧನು ಮಾಸ್ಟರ್ ಕೊರಿಯೋಗ್ರಫಿ ಅದ್ಭುತವಾಗಿ ಮೂಡಿ ಬಂದಿದೆ'' ಎಂದು ಮಾಹಿತಿ ಹಂಚಿಕೊಂಡರು.
''ಗಜರಾಮ ಟೀಸರ್ ನೋಡಿದ್ದೀರಾ? ನಮ್ಮ ಹೀರೋ ಇದನ್ನು ಆ್ಯಕ್ಷನ್ ಅಂತಾರೆ. ಆದ್ರೆ, ಆ್ಯಕ್ಷನ್, ಸೆಂಟಿಮೆಂಟ್, ಲವ್ ಎಲ್ಲವೂ ಇದೆ. ಮೂರು ಶೇಡ್ನಲ್ಲಿ ನಾಯಕ ನಟ ಕಾಣಿಸಿಕೊಳ್ಳುತ್ತಾರೆ. ಒಂದು ಪೈಲ್ವಾನ್ ಪಾತ್ರ. ಮತ್ತೊಂದು ಸೆಂಟಿಮೆಂಟ್ ಪಾತ್ರ-ಅದು ರಾಮ. ಮಗದೊಂದು ನಾಯಕಿನ್ನು ರಕ್ಷಿಸುವ ಪಾತ್ರ-ಅದು ರಾವಣ. ಹೀಗೆ ಮೂರು ರೀತಿಯ ಶೇಡ್ ಇದೆ. ಇದು ವಿಭಿನ್ನ ಸಿನಿಮಾ. ಅದಕ್ಕಾಗಿ ಚಿತ್ರದ ಹಾಡುಗಳನ್ನು ವಿಭಿನ್ನವಾಗಿ ಮಾಡಿದ್ದೇವೆ. 2024ರಲ್ಲಿ ಈ ಚಿತ್ರ ಸೂಪರ್ ಹಿಟ್ ಆಗುವ ನಂಬಿಕೆ ಇದೆ'' ಎಂಬ ವಿಶ್ವಾಸ ಸಂಗೀತ ನಿರ್ದೇಶಕ ಮನೋಮೂರ್ತಿ ಅವರದ್ದು.
ಇದನ್ನೂ ಓದಿ: ಅಮೀರ್ ಪುತ್ರಿಯ ಆರತಕ್ಷತೆಯಲ್ಲಿ ಬಾಲಿವುಡ್ ತಾರೆಯರ ಸಮಾಗಮ-ವಿಡಿಯೋ
ಆ್ಯಕ್ಷನ್ ಅಂಶಗಳಿಂದ ಕೂಡಿರುವ ಟೀಸರ್ನಲ್ಲಿ ಪ್ರೇಮಕಥೆಯನ್ನು ತೋರಿಸಲಾಗಿದೆ. ರಾಜವರ್ಧನ್ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಇವರಿಗೆ ಜೋಡಿಯಾಗಿ ತಪಸ್ವಿನಿ ಬಣ್ಣ ಹಚ್ಚಿದ್ದಾರೆ. ಪೊಲೀಸ್ ಪಾತ್ರದಲ್ಲಿ ದೀಪಕ್ ನಟಿಸಿದ್ದಾರೆ. ಕಬೀರ್ ಸಿಂಗ್ ಖಳನಾಯಕನ ಪಾತ್ರ ನಿರ್ವಹಿಸಿದ್ದಾರೆ. ಖ್ಯಾತ ನಿರ್ದೇಶಕರಾದ ಯೋಗರಾಜ್ ಭಟ್, 'ದುನಿಯಾ' ಸೂರಿ ಸೇರಿದಂತೆ ಒಂದಷ್ಟು ನಿರ್ದೇಶಕರ ಜೊತೆ ಅಸಿಸ್ಟೆಂಟ್, ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಅನುಭವವಿರುವ ಸುನಿಲ್ ಕುಮಾರ್ ಅವರೀಗ 'ಗಜರಾಮ' ಸಿನಿಮಾ ಮೂಲಕ ಸ್ವತಂತ್ರ್ಯ ನಿರ್ದೇಶಕರಾಗಿ ಬಡ್ತಿ ಪಡೆಯುತ್ತಿದ್ದಾರೆ.
ಇದನ್ನೂ ಓದಿ: 'ಸಾರಾಂಶ'ದೊಂದಿಗೆ ಪ್ರೇಕ್ಷಕರೆದುರು ಬರಲಿದ್ದಾರೆ ಶೃತಿ ಹರಿಹರನ್
'ಗಜರಾಮ'ನಿಗೆ ಮನೋಮೂರ್ತಿ ಸಂಗೀತ ನೀಡಿರುವುದು ವಿಶೇಷ. ಕೆ.ಎಸ್.ಚಂದ್ರಶೇಖರ್ ಛಾಯಾಗ್ರಾಹಣ ಮಾಡುತ್ತಿದ್ದು, ಜ್ಞಾನೇಶ್ ಬಿ.ಮಠದ್ ಸಂಕಲನದ ಹೊಣೆ ಹೊತ್ತುಕೊಂಡಿದ್ದಾರೆ. ಧನಂಜಯ್ ಕೊರಿಯೋಗ್ರಾಫಿ, ಚಿನ್ಮಯ್ ಭಾವಿಕೆರೆ, ಜಯಂತ್ ಕಾಯ್ಕಿಣಿ ಸಾಹಿತ್ಯ ಚಿತ್ರಕ್ಕಿದೆ. ಬಾಂಡ್ ರವಿ ಸಿನಿಮಾವನ್ನು ನಿರ್ಮಾಣ ಮಾಡಿರುವ ಲೈಫ್ ಲೈನ್ ಫಿಲ್ಮ್ ಪ್ರೊಡಕ್ಷನ್ ಅಡಿಯಲ್ಲಿ ನರಸಿಂಹಮೂರ್ತಿ ಗಜರಾಮ ನಿರ್ಮಾಣ ಮಾಡುತ್ತಿದ್ದು, ಮಲ್ಲಿಕಾರ್ಜುನ್ ಕಾಶಿ ಮತ್ತು ಝವೀಯರ್ ಫರ್ನಾಂಡಿಸ್ ಸಹ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.