ಪ್ಯಾನ್ ಇಂಡಿಯಾ ಸ್ಟಾರ್ ಪ್ರಭಾಸ್ ನಟನೆಯ ಮುಂಬರುವ ಸಿನಿಮಾ 'ಸಲಾರ್'. 'ಕೆಜಿಎಫ್' ನಿರ್ದೇಶಕ ಪ್ರಶಾಂತ್ ನೀಲ್ ಮತ್ತು ಹೊಂಬಾಳೆ ಫಿಲ್ಮ್ಸ್ ನಿರ್ಮಾಣದಲ್ಲಿ ಮೂಡಿ ಬಂದಿರುವ ಈ ಚಿತ್ರವು ಇದೇ ಡಿಸೆಂಬರ್ 22ರಂದು ತೆರೆ ಕಾಣಲಿದೆ. ಸದ್ಯ ಚಿತ್ರತಂಡ ಪ್ರಚಾರದ ಕೆಲಸದಲ್ಲಿ ನಿರತವಾಗಿದೆ. ಈಗಾಗಲೇ ಟ್ರೇಲರ್ ಮತ್ತು ಮೊದಲ ಹಾಡು ಬಿಡುಗಡೆಗೊಂಡು ಎಲ್ಲೆಡೆ ಸದ್ದು ಮಾಡುತ್ತಿದೆ. ಈ ಮಧ್ಯೆ 'ಸಲಾರ್' ಬಗ್ಗೆ ಹೊಸ ಅಪ್ಡೇಟ್ ಹೊರಬಿದ್ದಿದೆ. ಇದು ಪ್ರಭಾಸ್ ಅಭಿಮಾನಿಗಳ ಸಂತಸಕ್ಕೆ ಕಾರಣವಾಗಿದೆ.
ಈಗಾಗಲೇ 'ಸಲಾರ್' ಟ್ರೇಲರ್ ಬಿಡುಗಡೆಯಾಗಿದ್ದು, ಮಿಲಿಯನ್ಗಟ್ಟಲೆ ವೀಕ್ಷಣೆ ಪಡೆದುಕೊಂಡಿದೆ. ಇದೀಗ ಮತ್ತೊಂದು ಆ್ಯಕ್ಷನ್ ಪ್ಯಾಕ್ಡ್ ಟ್ರೇಲರ್ ಅನ್ನು ರಿಲೀಸ್ ಮಾಡಲು ಚಿತ್ರತಂಡ ತಯಾರಿ ನಡೆಸುತ್ತಿದೆ ಎಂಬುದು ಸದ್ಯದ ಸುದ್ದಿ. ಚಿತ್ರದ ಎರಡನೇ ಟ್ರೇಲರ್ ಡಿಸೆಂಬರ್ 17 ಅಂದರೆ ನಾಳೆ ಬಿಡುಗಡೆಯಾಗಲಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ಘೋಷಣೆ ಹೊರಬಿದ್ದಿಲ್ಲ. ಈಗಾಗಲೇ ಬಿಡುಗಡೆಯಾಗಿರುವ ಟ್ರೇಲರ್ನಲ್ಲಿ ದೇವಾ (ಪ್ರಭಾಸ್) ಮತ್ತು ವರದರಾಜ ಮನ್ನಾರ್ (ಪೃಥ್ವಿರಾಜ್ ಸುಕುಮಾರನ್) ನಡುವಿನ ಸ್ನೇಹದ ಬಗ್ಗೆ ಹೆಚ್ಚು ತೋರಿಸಲಾಗಿದೆ. ಮುಂಬರುವ ಟ್ರೇಲರ್ನಲ್ಲಿ ಆಕ್ಷನ್ ಸೀಕ್ವೆನ್ಸ್ ಇರಲಿದೆಯಂತೆ.
ಮುಂಗಡ ಟಿಕೆಟ್ ಬುಕ್ಕಿಂಗ್ ಓಪನ್: 'ಸಲಾರ್' ಸಿನಿಮಾದ ಮುಂಗಡ ಬುಕ್ಕಿಂಗ್ ಪ್ರಾರಂಭಗೊಂಡಿದೆ. ನಿನ್ನೆಯಿಂದ ಕರ್ನಾಟಕ ಮತ್ತು ಕೇರಳದಲ್ಲಿ ಅಡ್ವಾನ್ಸ್ ಬುಕ್ಕಿಂಗ್ ಪ್ರಕ್ರಿಯೆ ಆರಂಭವಾಗಿದೆ. ಇಂದು ತೆಲಂಗಾಣದಲ್ಲಿ ಆನ್ಲೈನ್ ಟಿಕೆಟ್ ಬುಕ್ಕಿಂಗ್ ಓಪನ್ ಆಗಿದ್ದು, ತೆಲುಗು ರಾಜ್ಯದಲ್ಲಿ ಮೊದಲ ಟಿಕೆಟ್ ಅನ್ನು ರಾಜಮೌಳಿ ಅವರು ಖರೀದಿಸುವ ಮೂಲಕ ಚಿತ್ರತಂಡಕ್ಕೆ ಬೆಂಬಲ ನೀಡಿದ್ದಾರೆ. ಈ ವಿಚಾರವನ್ನು ಸ್ವತಃ ಸಲಾರ್ ಸಿನಿಮಾ ನಿರ್ಮಿಸಿರುವ ಹೊಂಬಾಳೆ ಫಿಲ್ಮ್ಸ್ ಹಂಚಿಕೊಂಡಿದೆ.
ವರದಿಗಳ ಪ್ರಕಾರ, ಮೈತ್ರಿ ಮೂವಿ ಮೇಕರ್ಸ್ ನಿಜಾಮ್ ಪ್ರದೇಶದಲ್ಲಿ (ತೆಲಂಗಾಣ) 90.06 ಕೋಟಿ ರೂಪಾಯಿಗಳನ್ನು ಹೂಡಿಕೆ ಮಾಡಿ ಸಲಾರ್ ಥಿಯೇಟ್ರಿಕಲ್ ರೈಟ್ಸ್ ಅನ್ನು ಪಡೆದುಕೊಂಡಿದೆ. ಈ ಮೊತ್ತದ ಪೈಕಿ 65 ಕೋಟಿ ರೂ. ನಾನ್-ಫಂಡೇಬಲರ್, ಉಳಿದ 25.6 ಕೋಟಿ ರೂ. ಫಂಡೇಬಲ್. ಈ ಒಪ್ಪಂದ ನಿಜಾಮ್ ಪ್ರಾಂತ್ಯದಲ್ಲಾದ ಅತ್ಯಂತ ಮಹತ್ವದ ಒಪ್ಪಂದಗಳಲ್ಲಿ ಒಂದಾಗಿದೆ.
'ಕೆಜಿಎಫ್'ನಿಂದಾಗಿ ಹೆಸರುವಾಸಿಯಾಗಿರುವ ಪ್ರಶಾಂತ್ ನೀಲ್ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿರುವುದರಿಂದ ಮತ್ತು ಬಾಹುಬಲಿ ಖ್ಯಾತಿಯ ಪ್ರಭಾಸ್ ತೆರೆ ಮೇಲೆ ಅಬ್ಬರಿಸಿರುವುದರಿಂದ ಈ ಪ್ರಾಜೆಕ್ಟ್ ಮೇಲಿನ ನಿರೀಕ್ಷೆ, ಉತ್ಸಾಹ, ಕುತೂಹಲ ಬೆಟ್ಟದಷ್ಟಿದೆ. ಚಿತ್ರದಲ್ಲಿ ಪ್ರಭಾಸ್ ಜೊತೆಗೆ ಪೃಥ್ವಿರಾಜ್ ಸುಕುಮಾರನ್, ಶ್ರುತಿ ಹಾಸನ್, ಜಗಪತಿ ಬಾಬು ಸೇರಿದಂತೆ ಮುಂತಾದವರು ನಟಿಸಿದ್ದು, ಹೊಂಬಾಳೆ ಫಿಲ್ಮ್ಸ್ನಡಿ ವಿಜಯ್ ಕಿರಗಂದೂರು ಚಿತ್ರವನ್ನು ನಿರ್ಮಿಸಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಸಿನಿಮಾ ತೆರೆ ಕಾಣಲಿದೆ.
ಇದನ್ನೂ ಓದಿ: 'ಸಲಾರ್'ಗೆ ಸಿನಿಮ್ಯಾಟಿಕ್ ಏರ್ ಸೆಲ್ಯೂಟ್: ಕೆನಡಾ ಅಭಿಮಾನಿಗಳ ಅದ್ಭುತ ವಿಡಿಯೋ ನೋಡಿ