ಅಕ್ಟೋಬರ್ 2, ಗಾಂಧಿ ಜಯಂತಿ ಅಂಗವಾಗಿ ರಾಷ್ಟ್ರವ್ಯಾಪಿ ಸ್ವಚ್ಛತಾ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದ ಕರೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಸಾಮಾನ್ಯ ಪ್ರಜೆಗಳಿಂದ ಹಿಡಿದು, ರಾಜಕಾರಣಿಗಳು ಸೇರಿದಂತೆ ಸಿನಿಮಾ ತಾರೆಯರು ಕೂಡ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ದೊಡ್ಡ ಪರದೆಯಲ್ಲಿ ಮನರಂಜನೆ ನೀಡುತ್ತಿದ್ದ ನಟ, ನಟಿಯರು ಪೊರಕೆ ಹಿಡಿದು ಸ್ವಚ್ಛತೆಗೆ ಆದ್ಯತೆ ನೀಡಿದ್ದು, ಅಭಿಯಾನದಲ್ಲಿ ಪಾಲ್ಗೊಳ್ಳುತ್ತಿರುವ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
'ಮನ್ ಕಿ ಬಾತ್' 105 ನೇ ಸಂಚಿಕೆಯಲ್ಲಿ ಪ್ರಧಾನಿ ಮೋದಿ ಅಕ್ಟೋಬರ್ 1 ರಂದು ಎಲ್ಲಾ ನಾಗರಿಕರು 'ಸ್ವಚ್ಛತೆಗಾಗಿ ಒಂದು ಗಂಟೆ ಶ್ರಮದಾನ' ಮಾಡಿ ಎಂದು ಮನವಿ ಮಾಡಿದ್ದರು. ಇದು ಮಹಾತ್ಮ ಗಾಂಧಿಯವರ ಜನ್ಮದಿನದ ಮುನ್ನಾ ದಿನದಂದು ನಡೆಯುವ 'ಸ್ವಚ್ಛಾಂಜಲಿ' ಎಂದು ಹೇಳಿದ್ದರು. ಜೊತೆಗೆ, ಈ ಅಭಿಯಾನವನ್ನು 'ಏಕ್ ತಾರೀಖ್, ಏಕ್ ಗಂಟಾ, ಏಕ್ ಸಾಥ್' ಎಂದು ಕರೆದಿದ್ದರು.
ಬಾಲಿವುಡ್ ನಟ ರಾಜ್ಕುಮಾರ್ ರಾವ್ ಅವರು ಮ್ಯಾಂಗ್ರೋವ್ ಅರಣ್ಯದಲ್ಲಿ ಆಯೋಜಿಸಲಾಗಿದ್ದ ಸ್ವಚ್ಛತಾ ಅಭಿಯಾನದ ನೇತೃತ್ವ ವಹಿಸಿದ್ದರು. ಮಹಾರಾಷ್ಟ್ರ ಆದಾಯ ತೆರಿಗೆ ಇಲಾಖೆಯೊಂದಿಗೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡು ತಮಗಿರುವ ಪರಿಸರ ಪ್ರೇಮ ಪ್ರದರ್ಶಿಸಿದರು. ಅಭಿಯಾನದಲ್ಲಿ ಪಾಲ್ಗೊಂಡ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡ ಅವರು, "ಇಂದು ಬೆಳಗ್ಗೆ ಐರೋಲಿ ಕ್ರೀಕ್‌ನಲ್ಲಿನ ಮ್ಯಾಂಗ್ರೋವ್ ಅರಣ್ಯದಲ್ಲಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಂಡಿದ್ದೆವು. ಇದು ತುಂಬಾ ಸಂತೋಷಕರ ಅನುಭವ" ಎಂದು ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯವರ 'ಏಕ್ ತಾರೀಖ್, ಏಕ್ ಗಂಟಾ, ಏಕ್ ಸಾಥ್' ಕರೆಗೆ ಓಗೊಟ್ಟು, ನಟ ಅರ್ಜುನ್ ರಾಂಪಾಲ್ ಅವರು ಗೋವಾದ ಮಿರಾಮಾರ್ ಬೀಚ್ನಲ್ಲಿ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಅರ್ಜುನ್ ಮತ್ತು ನಿರ್ಮಾಪಕ, ನಟ ರಾಹುಲ್ ಮಿತ್ರ ಒಂದು ಗಂಟೆ ಸ್ವಚ್ಛತಾ ಕಾರ್ಯದಲ್ಲಿ ಪಾಲ್ಗೊಂಡರು. ಬಳಿಕ ಮಾತನಾಡಿದ ಅರ್ಜುನ್, "ಮುಂದಿನ ಪೀಳಿಗೆಗೆ ಸ್ವಚ್ಛ ಭೂಮಿಯನ್ನು ಬಿಟ್ಟುಕೊಡುವುದು ನಮ್ಮ ಜವಾಬ್ದಾರಿ" ಎಂದು ಹೇಳಿದರು. ಅರ್ಜುನ್ ಕೂಡ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾದ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಅದೇ ರೀತಿ ಬಾಲಿವುಡ್ ಕಿಲಾಡಿ ಅಕ್ಷಯ್ ಕುಮಾರ್ ಭಾರತದಿಂದ ಹೊರಗಿದ್ದರೂ, ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು. ಬಳಿಕ ಫೋಟೋವನ್ನು ಹಂಚಿಕೊಂಡಿರುವ ಅವರು, "ಶುಚಿತ್ವವು ಭೌತಿಕ ಸ್ಥಳಗಳಿಗೆ ಸಂಬಂಧಿಸಿದ್ದಲ್ಲ. ಅದು ಮನಸ್ಸಿನ ಸ್ಥಿತಿಯಾಗಿದೆ. ದೇಶದಿಂದ ಹೊರಗಿರುವ ನನಗೆ ಸ್ವಚ್ಛತಾ ಅಭಿಯಾನಕ್ಕೆ ಗೌರವ ಸಲ್ಲಿಸದೇ ಇರಲು ಸಾಧ್ಯವಾಗಲಿಲ್ಲ. ನೀವು ಎಲ್ಲೇ ಎರಿ, ಆದರೆ ನೀವು ಇರುವ ಜಾಗವನ್ನು ಮತ್ತು ಮನಸ್ಸನ್ನು ನಿಮ್ಮ ಕೈಲಾದಷ್ಟು ಸ್ವಚ್ಛವಾಗಿರಿಸಿಕೊಳ್ಳಿ" ಎಂದು ಹೇಳಿದ್ದಾರೆ.
ನಟಿ ರಸಿಕಾ ದುಗಲ್ ಕೂಡ ಸ್ವಚ್ಛತಾ ಅಭಿಯಾನದಲ್ಲಿ ಭಾಗಿಯಾಗಿದ್ದರು. ಪರಿಸರ ಕಾರ್ಯಕರ್ತ ಚಿನು ಕ್ವಾತ್ರಾ ಮತ್ತು ಅವರ ಬೀಚ್ ವಾರಿಯರ್ಸ್ ತಂಡದೊಂದಿಗೆ ಸೇರಿಕೊಂಡು ಸ್ವಚ್ಛತಾ ಕಾರ್ಯ ಕೈಗೊಂಡರು. ಮುಂಬೈನ ದಾದರ್ ಬೀಚ್ನಲ್ಲಿ ಮುಂಜಾನೆ ಕ್ಲೀನ್ ಅಪ್ ಅಭಿಯಾನದಲ್ಲಿ ನಟಿ ಭಾಗವಹಿಸಿದರು.
-
A healthy environment begins with a clean environment..Let’s keep India clean… #SwachhBharat @SwachhBharatGov
— Rajinikanth (@rajinikanth) October 1, 2023 " class="align-text-top noRightClick twitterSection" data="
">A healthy environment begins with a clean environment..Let’s keep India clean… #SwachhBharat @SwachhBharatGov
— Rajinikanth (@rajinikanth) October 1, 2023A healthy environment begins with a clean environment..Let’s keep India clean… #SwachhBharat @SwachhBharatGov
— Rajinikanth (@rajinikanth) October 1, 2023
ಕಾಲಿವುಡ್ ಸೂಪರ್ಸ್ಟಾರ್ ರಜನಿಕಾಂತ್ ಅವರು ಪ್ರಧಾನಿ ಮೋದಿಯವರ 'ಏಕ್ ತಾರೀಖ್, ಏಕ್ ಗಂಟಾ, ಏಕ್ ಸಾಥ್'ಗೆ ಬೆಂಬಲಿಸಿದರು. "ಸ್ವಚ್ಛ ಪರಿಸರದಿಂದ ಆರೋಗ್ಯಕರ ವಾತಾವರಣ ಪ್ರಾರಂಭವಾಗುತ್ತದೆ. ಭಾರತವನ್ನು ಸ್ವಚ್ಛವಾಗಿಡೋಣ" ಎಂದು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸ್ವಚ್ಛತಾ ಹಿ ಸೇವಾ.. ದೇಶಾದ್ಯಂತ ಸ್ವಚ್ಛತಾ ಅಭಿಯಾನಕ್ಕೆ ಉತ್ತಮ ಸ್ಪಂದನೆ