ಲಾಸ್ ಏಂಜಲೀಸ್ (ಅಮೆರಿಕ): ಜನಪ್ರಿಯ 'ಫ್ರೆಂಡ್ಸ್' ಟಿವಿ ಶೋ ಮೂಲಕ ಅಮೆರಿಕದಾದ್ಯಂತ ಮನೆ ಮಾತಾಗಿದ್ದ ಪ್ರಸಿದ್ಧ ಹಾಲಿವುಡ್ ನಟ ಮ್ಯಾಥ್ಯೂ ಪೆರ್ರಿ ಕೊನೆಯುಸಿರೆಳೆದಿದ್ದಾರೆ. ಇವರಿಗೆ 54 ವರ್ಷ ವಯಸ್ಸಾಗಿತ್ತು. ಶನಿವಾರ ಪೆರ್ರಿ, ಲಾಸ್ ಎಂಜಲೀಸ್ನಲ್ಲಿರುವ ತಮ್ಮ ಮನೆಯ ಸ್ನಾನದ ಟಬ್‌ನಲ್ಲಿ(ಹಾಟ್ ಟಬ್) ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಎಂದು ಯುಎಸ್ ಮಾಧ್ಯಮಗಳು ವರದಿ ಮಾಡಿವೆ.
ಸಾವಿನ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಯಾವುದೇ ಅನುಮಾನಾಸ್ಪದ ಕುರುಹುಗಳು ಪತ್ತೆಯಾಗಿಲ್ಲ. ಯಾವುದೇ ಮಾದಕವಸ್ತು ಸೇವನೆಯ ಅಂಶಗಳೂ ಸಿಕ್ಕಿಲ್ಲ ಎಂದು ತಿಳಿದುಬಂದಿದೆ.
'ಫ್ರೆಂಡ್ಸ್'ನ ಚಾಂಡ್ಲರ್ ಬಿಂಗ್ ಪಾತ್ರ ಪೆರ್ರಿಗೆ ಹೆಚ್ಚು ಖ್ಯಾತಿ ತಂದುಕೊಟ್ಟಿತ್ತು. ಈ ಶೋ ಸುಮಾರು ಒಂದು ದಶಕಗಳ ಕಾಲ ನಡೆದು, ಅಮೆರಿಕಾದ್ಯಂತ ಜನಪ್ರಿಯ ಶೋ ಆಗಿ ಹೊರಹೊಮ್ಮಿತ್ತು. 1994ರಲ್ಲಿ ಪ್ರಾರಂಭವಾದ ಶೋ 2004ರ ತನಕ ಒಟ್ಟು ಹತ್ತು ಸೀಸನ್ಗಳನ್ನು ಪೂರೈಸಿತ್ತು. ಫ್ರೆಂಡ್ಸ್ನಲ್ಲಿನ ನಟನೆಗಾಗಿ ಪೆರ್ರಿ 2002ರಲ್ಲಿ ಪ್ರೈಮ್ ಟೈಮ್ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಫ್ರೆಂಡ್ಸ್ ಹೊರತಾಗಿ, ಪೆರ್ರಿ ಅವರು ಸ್ಟುಡಿಯೋ 60 ಆನ್ ದ ಸನ್ಸೆಟ್ ಸ್ಟ್ರಿಪ್, ಗೋ ಆನ್, ದ ಓಡ್ ಕಪಲ್ ಮುಂತಾದ ಟೆಲಿವಿಷನ್ ಸಿರೀಸ್ಗಳಲ್ಲಿ ನಟಿಸಿದ್ದಾರೆ. ಇವರ ಅದ್ಭುತ ನಟನೆಗೆ 2003 ಮತ್ತು 2004ರಲ್ಲಿ ಎರಡು ಬಾರಿ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನವಾಗಿದ್ದರು. ದ ವೆಸ್ಟ್ ವಿಂಗ್ ಸಿರೀಸ್ನ ಜೋ ಕ್ವಿನ್ಸಿ ಪಾತ್ರಕ್ಕೆ ಎಮ್ಮಿ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರು.
ಮ್ಯಾಥ್ಯೂ ಪೆರ್ರಿ, ಜೆನ್ನಿಫರ್ ಅನಿಸ್ಟನ್, ಲಿಸಾ ಕುಡ್ರೋ, ಡೇವಿಡ್ ಶ್ವಿಮ್ಮರ್, ಕೋರ್ಟೆನಿ ಕಾಕ್ಸ್ ಮತ್ತು ಮ್ಯಾಟ್ ಲೆಬ್ಲಾಂಕ್ ಜೊತೆಗೆ ಫ್ರೆಂಡ್ಸ್‌ನಲ್ಲಿ ನಟಿಸಿದ್ದರು. ಇದಕ್ಕೂ ಮೊದಲು ಹೂ ಇಸ್ ದ ಬಾಸ್, ಬೆವರ್ಲಿ ಹಿಲ್, ಹೋಮ್ ಫ್ರೀ ಮುಂತಾದ ಟಿವಿ ಸೀರೀಸ್ನಲ್ಲಿ ಅಭಿನಯಿಸಿದ್ದಾರೆ. ಆದರೆ ಫ್ರೆಂಡ್ಸ್ನಲ್ಲಿನ ಚಾಂಡ್ಲರ್ ಬಿಂಗ್ ಪಾತ್ರ ಹೆಚ್ಚು ಪ್ರಸಿದ್ಧಿ ತಂದುಕೊಟ್ಟಿತು.
ಫ್ರೆಂಡ್ಸ್ ಟಿವಿ ಶೋ, ಅಮೆರಿಕದ ನ್ಯೂಯಾರ್ಕ್ ಸಿಟಿಯಲ್ಲಿ ವಾಸಿಸುವ 20 ಮತ್ತು 30ರ ಹರೆಯದ ಆರು ಜನ ಗೆಳೆಯರ ಕಥೆ. ಸುಮಾರು 25 ಮಿಲಿಯನ್ ಅಧಿಕ ವೀಕ್ಷಕರನ್ನು ಈ ಟಿವಿ ಶೋ ಗಳಿಸಿತ್ತು. ಅಂತಿಮ ಎಪಿಸೋಡ್ನ್ನು 52.5 ಮಿಲಿಯನ್ ಜನರು ವೀಕ್ಷಣೆ ಮಾಡಿದ್ದರು. ಈ ಮೂಲಕ 2000 ಇಸವಿಯಲ್ಲಿ ಅತಿ ಹೆಚ್ಚು ವೀಕ್ಷಣೆ ಪಡೆದ ಟಿವಿ ಶೋಗಳಲ್ಲಿ ಐದನೇ ಸ್ಥಾನ ಪಡೆದಿತ್ತು.
ಫ್ರೆಂಡ್ಸ್‌ನಲ್ಲಿ ಮ್ಯಾಥ್ಯೂ ಪೆರ್ರಿ ಪಾತ್ರ ವಿಭಿನ್ನವಾಗಿತ್ತು. ಇವರ ಹಾಸ್ಯ ಮತ್ತು ಅದ್ಬುತ ನಟನೆ ನೋಡುಗರನ್ನು ನಗೆಗಡಲಲ್ಲಿ ತೇಲಿಸುವಂತಿತ್ತು. ಈ ಟಿವಿ ಶೋ ಮೂಲಕ ಎಲ್ಲರನ್ನೂ ನಕ್ಕು ನಗಿಸುವ ಕೆಲಸ ಮಾಡುತ್ತಿದ್ದರು. ಈ ಮೂಲಕವೇ ಸಾವಿರಾರು ಪ್ರೇಕ್ಷಕರನ್ನು ಹಿಡಿದಿಟ್ಟಿದ್ದರು. ಇವರ ಸಾವಿಗೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.
ಇದನ್ನೂ ಓದಿ: ಅಪ್ಪು ಮರೆಯಾಗಿ ಇಂದಿಗೆ 2 ವರ್ಷ: ಸಾಮಾಜಿಕ ಕಳಕಳಿಯ ಸಿನಿಮಾಗಳಲ್ಲಿ 'ಗಂಧದ ಗುಡಿ'ಯ 'ರಾಜಕುಮಾರ' ಅಮರ