ಟಾಲಿವುಡ್ ಸ್ಟಾರ್ ಅಲ್ಲು ಅರ್ಜುನ್ ಅವರು ಇಂದು 41 ವರ್ಷಕ್ಕೆ ಕಾಲಿಡುತ್ತಿದ್ದು, ಸ್ಟೈಲಿಶ್ ಸ್ಟಾರ್ ಬರ್ತ್ಡೇ ಗಿಫ್ಟ್ ಆಗಿ ಪುಷ್ಪ ಚಿತ್ರತಂಡ ನಿನ್ನೆ ಪುಷ್ಪ-2 ಸಿನಿಮಾದ ಮೊದಲ ಟೀಸರ್ ಬಿಡುಗಡೆ ಮಾಡಿದೆ. ಸಿನಿಮಾ ನಿರ್ಮಾಣ ಸಂಸ್ಥೆ ಮೈತ್ರಿ ಮೂವಿ ಮೇಕರ್ಸ್ ಯೂಟ್ಯೂಬ್ ಚಾನಲ್ನಲ್ಲಿ ಟೀಸರ್ ಬಿಡುಗಡೆ ಮಾಡುವ ಮೂಲಕ ಅಲ್ಲು ಹುಟ್ಟುಹಬ್ಬಕ್ಕೆ ಇನ್ನಷ್ಟು ಕಳೆ ತಂದಿದೆ. ಟೀಸರ್ ಬಿಡುಗಡೆ ಮಾಡಿದ ಕೆಲವೇ ಹೊತ್ತಲ್ಲಿ ಮೈತ್ರಿ ಮೂವಿ ಮೇಕರ್ಸ್ ಟ್ವಿಟರ್ನಲ್ಲಿ ಪುಷ್ಪ-2 ಚಿತ್ರದಲ್ಲಿ ಅಲ್ಲು ಅರ್ಜುನ್ ಅವರ ಫಸ್ಟ್ ಲುಕ್ ಕೂಡ ರಿಲೀಸ್ ಮಾಡಿದೆ.
ಇದೇ ಪೋಸ್ಟರ್ ಅನ್ನು ನಟ ಅಲ್ಲು ಅರ್ಜುನ್ ಕೂಡ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, "#Pushpa2TheRule Begins!!!" ಎಂದು ಕ್ಯಾಪ್ಷನ್ ಬರೆದುಕೊಂಡಿದ್ದಾರೆ. ತಮ್ಮ ಫೇವರಿಟ್ ನಟ ಹುಟ್ಟುಹಬ್ಬದ ಖುಷಿಯಲ್ಲಿರುವ ಅಭಿಮಾನಿಗಳಿಗೆ ಟೀಸರ್ ಒಂದೆಡೆಯಾದರೆ, ಇನ್ನೊಂದೆಡೆ ಈ ಫಸ್ಟ್ ಲುಕ್ ರಿಲೀಸ್ ಮಾಡಿರುವುದು ಇನ್ನಷ್ಟು ಖುಷಿ ತಂದಿದೆ. ಖುಷಿಯ ಜೊತೆಗೆ ಸಿನಿಪ್ರಿಯರಲ್ಲಿ ಟೀಸರ್ ಹಾಗೂ ಪೋಸ್ಟರ್ ಸಿನಿಮಾದ ಕುರಿತು ತೀವ್ರ ಕುತೂಹಲ ಹಾಗೂ ಸಿನಿಮಾದ ಬಗ್ಗೆ ಇನ್ನಷ್ಟು ನಿರೀಕ್ಷೆಯನ್ನು ಹೆಚ್ಚಿಸಿದೆ.
#WhereIsPushpa? ಎನ್ನುವ ದಾಟಿಯಲ್ಲೇ ನಿನ್ನೆ ಬಿಡುಗಡೆಯಾದ ಟೀಸರ್ ಸಾಗಿದ್ದು, ಟೀಸರ್ ಕೊನೆವರೆಗೂ ಪುಷ್ಪನ ಹುಡುಕಾಟವೇ ನಡೆಯುತ್ತಿದೆ. ತಿರುಪತಿ ಜೈಲಿನಿಂದ ತಪ್ಪಿಸಿಕೊಂಡಿರುವ ಪುಷ್ಪನನ್ನು ಕಾಡಿನ ತುಂಬ ಪೊಲೀಸ್ ಪಡೆ ಹುಡುಕಾಡುತ್ತಿದೆ. ಸ್ಪೆಷಲ್ ಸ್ಕಾಡ್ಗೆ ಎಂಟು ಬುಲೆಟ್ಗಳ ಮಾರ್ಕ್ಗಳಿರುವ ಪುಷ್ಪನ ಬಟ್ಟೆ ಮಾತ್ರ ದೊರೆತಿದೆ. ಎಲ್ಲರ ಪ್ರಶ್ನೆ ಪುಷ್ಪ ಎಲ್ಲಿ? ಪುಷ್ಪ ಭಾಗ ಒಂದರಲ್ಲಿ ಕಾಡುಗಳ್ಳನಾಗಿದ್ದ ಪುಷ್ಪನನ್ನು ಭಾಗ ಎರಡರಲ್ಲಿ ಒಳ್ಳೆಯ ವ್ಯಕ್ತಿಯನ್ನಾಗಿ ತೋರಿಸಲಾಗಿದೆ. ಪುಷ್ಪನ ಒಳ್ಳೆಯತನಕ್ಕೆ ಸಾಕ್ಷಿ ಎಂಬಂತೆ ಟೀಸರ್ನಲ್ಲಿ ಡೈಲಾಗ್ಗಳ ಜೊತೆಗೆ ಸನ್ನಿವೇಶಗಳನ್ನು ಕಟ್ಟಿಕೊಡಲಾಗಿದೆ.
ಟೀಸರ್ ಕೊನೆಗೆ ಕಾಡಿನಲ್ಲಿ ಹುಲಿ ಜೊತೆ ಕಾಣಿಸಿಕೊಳ್ಳುವ ಪುಷ್ಪ. ಪುಷ್ಪ ಎಂಟ್ರಿಯಾಗೋ ಮುಂಚೆ ಬರೋ ಪಂಚಿಂಗ್ ಡೈಲಾಗ್ ಅಲ್ಲು ಅಭಿಮಾನಿಗಳು ಶಿಳ್ಳೆ ಹೊಡೆಯುವಂತೆ ಮಾಡಿದೆ. ಒಟ್ಟಿನಲ್ಲಿ ಪುಷ್ಪ- 2 ತಂಡ ಸ್ಟೈಲಿಶ್ ಸ್ಟಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳಿಗೆ ಒಳ್ಳೆಯ ಉಡುಗೊರೆ ನೀಡಿದೆ. ಭರದಿಂದ ಚಿತ್ರೀಕರಣ ಸಾಗುತ್ತಿದ್ದರೂ ಇದುವರೆಗೂ ಸಿನಿಮಾದ ಕುರಿತು ಯಾವುದೇ ಸಣ್ಣ ಸುದ್ದಿಯನ್ನೂ ಹೊರಬಿಡದೇ ಕಾಪಾಡಿಕೊಂಡಿದ್ದ ಚಿತ್ರತಂಡ, ಇದೀಗ ಭರ್ಜರಿಯಾದ ಪುಷ್ಪನ ಹುಡುಕಾಟದ ಟೀಸರ್ ಅನ್ನೇ ರಿಲೀಸ್ ಮಾಡಿದೆ. "The #HuntForPushpa ends and PUSHPA'S Rule BEGINS ಎಂದು ಮೈತ್ರಿ ಮೂವಿ ಮೇಕರ್ಸ್ ಟೀಸರ್ ಹಂಚಿಕೊಂಡಿದೆ.
ಟೀಸರ್ನಲ್ಲಿ ಒಂದು ಪರಿಯಾದರೆ ಫಸ್ಟ್ ಲುಕ್ ಪೋಸ್ಟರ್ ಇನ್ನೊಂದು ರೀತಿಯಲ್ಲಿ ಕುತೂಹಲ ಕೆರಳಿಸಿದೆ. ಪೋಸ್ಟರ್ನಲ್ಲಿ ಅಲ್ಲು ಅರ್ಜುನ್ ಸಂಪೂರ್ಣವಾಗಿ ಹೊಸ ಅವತಾರದಲ್ಲೇ ಕಾಣಿಸಿಕೊಂಡಿದ್ದಾರೆ. ಸೀರೆ ಉಟ್ಟು, ಚಿನ್ನಾಭರಣಗಳನ್ನು ಧರಿಸಿಕೊಂಡು, ನಿಂಬೆ ಹಣ್ಣಿನ ಮಾಲೆ, ಹೂಮಾಲೆ ಹಾಕಿಕೊಂಡು, ಮುಖಕ್ಕೆ ವಿಚಿತ್ರವಾದ ಬಣ್ಣ ಬಳಿದು, ಒಂದು ಕೈಯಲ್ಲಿ ಗನ್ ಹಿಡಿದು, ವಿಚಿತ್ರ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸಿನಿಮಾದಲ್ಲಿ ಈ ಅವತಾರದ ಗುಟ್ಟೇನು ಎನ್ನುವ ಪ್ರಶ್ನೆಯೂ ಹುಟ್ಟಿಕೊಂಡಿದೆ.
ಫಸ್ಟ್ ಲುಕ್ ಪೋಸ್ಟರ್ ನೋಡಿದ ಅಭಿಮಾನಿಗಳು ಫುಲ್ ಖುಷಿಯಾಗಿ ಇನ್ಸ್ಟಾಗ್ರಾಂ ಕಾಮೆಂಟ್ ಬಾಕ್ಸ್ನಲ್ಲಿ ಕಾಮೆಂಟ್ಸ್ ಸುರಿಮಳೆಯನ್ನೇ ಸುರಿಸಿದ್ದಾರೆ. ಬಾಲಿವುಡ್ ನಟಿ ಹುಮಾ ಕುರೇಷಿ ಕೂಡ ಕಾಮೆಂಟ್ ಮಾಡಿದ್ದು, ಫೈರ್ ಇಮೋಜಿ ಹಾಕಿದ್ದಾರೆ. ಒಬ್ಬ ಅಭಿಮಾನಿಯಂತೂ ಅಲ್ಲು ಅರ್ಜುನ್ ವೇಷಕ್ಕೆ "ಇದು ಅದ್ಭುತವಾಗಿದೆ. ಈ ಬಾರಿಯೂ ಯಾವ ಕಾರಣಕ್ಕೂ ತಗ್ಗುವುದೇ ಇಲ್ಲ" ಎಂದು ಕಮೆಂಟ್ ಮಾಡಿದ್ದಾರೆ.
2021ರಲ್ಲಿ ಬಿಡುಗಡೆಯಾಗಿದ್ದ ಪುಷ್ಪ: ದ ರೈಸ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಚಿಂದಿ ಉಡಾಯಿಸಿತ್ತು. ಸಿನಿಮಾ ಮಾತ್ರವಲ್ಲದೆ ಸಿನಿಮಾದ ಡೈಲಾಗ್ಗಳು ಹಾಗೂ ಹಾಡುಗಳು ಸಖತ್ ಟ್ರೆಂಡಿಂಗ್ ಕ್ರಿಯೆಟ್ ಮಾಡಿದ್ದವು. ಸಿನಿಮಾ ತೆರೆಗೆ ಬಂದು ತಿಂಗಳುಗಳೇ ಕಳೆದಿದ್ದರೂ ಸಿನಿಮಾದ ಡೈಲಾಗ್ಗಳು ಮಾತ್ರ ರೀಲ್ಸ್ಗಳಲ್ಲಿ ಸದ್ದು ಮಾಡುತ್ತಲೇ ಇದ್ದವು. ಇದೀಗ ಮತ್ತೆ ಪಂಚಿಂಗ್ ಡೈಲಾಗ್ಗಳ ಮೂಲಕ ಅಲ್ಲು ಅರ್ಜುನ್ ಅಭಿಮಾನಿಗಳು ನಿರೀಕ್ಷಿಸಿದ್ದಕ್ಕಿಂತ ಶೀಘ್ರದಲ್ಲೇ ಸಿನಿಪ್ರಿಯರನ್ನು ರಂಜಿಸಲು ಬರುತ್ತಿದ್ದಾರೆ. ಪುಷ್ಪ 2 ದ ರೂಲ್ ಸಿನಿಮಾ ಪ್ಯಾನ್ ಇಂಡಿಯಾ ರಿಲೀಸ್ ಆಗಲು ರೆಡಿಯಾಗಿದೆ.
ಭಾಗ ಎರಡರಲ್ಲೂ ಡೈಲಾಗ್ಗಳು ಕಮಾಲ್ ಮಾಡಲಿವೆ ಎನ್ನುವುದಕ್ಕೆ ಟೀಸರ್ನಲ್ಲಿ, "ಪ್ರಾಣಿಗಳು ಎರಡು ಹೆಜ್ಜೆ ಹಿಂದೆ ಇಟ್ಟಿವೆ ಎಂದರೆ ಹುಲಿ ಬಂದಿದೆ ಎಂದರ್ಥ, ಅದೇ ಹುಲೀನೆ ಎರಡು ಹೆಜ್ಜೆ ಹಿಂದೆ ಇಟ್ಟಿದೆ ಎಂದರೆ ಪುಷ್ಪ ಬಂದಿದ್ದಾನೆ ಎಂದರ್ಥ" ಎನ್ನುವ ಡೈಲಾಗ್ ಸಾಕ್ಷಿಯಾಗಿದೆ. ಸುಕುಮಾರ್ ಆ್ಯಕ್ಷನ್ ಕಟ್ ಹೇಳಿರುವ ಸಿನಿಮಾವನ್ನು ಮೈತ್ರಿ ಮೂವಿ ಮೇಕರ್ಸ್ ಅದ್ಧೂರಿಯಾಗಿ ನಿರ್ಮಾಣ ಮಾಡಿದೆ. ನಟ ಅಲ್ಲು ಅರ್ಜುನ್ಗೆ ಜೋಡಿಯಾಗಿ ರಶ್ಮಿಕಾ ಮಂದಣ್ಣ, ಉಳಿದಂತೆ ಫಹಾದ್ ಪಾಜಿಲ್, ಕನ್ನಡದ ನಟ ರಾಕ್ಷಸ ಡಾಲಿ ಧನಂಜಯ್ ಸಿನಿಮಾದಲ್ಲಿ ಅಭಿನಯಿಸಿದ್ದಾರೆ.
ಇದನ್ನೂ ಓದಿ: 'ಪುಷ್ಪ - ದಿ ರೂಲ್' ಟೀಸರ್ ರಿಲೀಸ್: ಭಾರಿ ಕುತೂಹಲ