ವಾಷಿಂಗ್ಟನ್: ಭಾರತದಲ್ಲಿ ಮಾತ್ರವಲ್ಲದೇ ವಿದೇಶದಲ್ಲೂ ಸಾಕಷ್ಟು ಅಭಿಮಾನಿ ಬಳಗವನ್ನು ಅಮಿತಾಭ್ ಬಚ್ಚನ್ ಹೊಂದಿದ್ದಾರೆ. ಇಲ್ಲೊಬ್ಬ ಭಾರತ ಮೂಲದ ಅಮೆರಿಕದ ಟೆಕ್ಕಿಯೊಬ್ಬರು 75,000 ಡಾಲರ್ ಖರ್ಚು ಮಾಡಿ ನ್ಯೂಜೆರ್ಸಿಯ ತಮ್ಮ ಮನೆಯ ಮುಂದೆ ಅಮಿತಾಬ್ ಬಚ್ಚನ್ ಪ್ರತಿಮೆಯನ್ನು ಸ್ಥಾಪಿಸುವ ಮೂಲಕ ಬಿಗ್ ಬಿ ಮೇಲಿರುವ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.
ನ್ಯೂಜೆರ್ಸಿಯ ನಿವಾಸಿ ಟೆಕ್ಕಿ ಗೋಪಿ ಶೇಥ್ ಕುಟುಂಬ ಶನಿವಾರ ಪ್ರತಿಮೆಯನ್ನು ಅನಾವರಣಗೊಳಿಸಿದ್ದು, ಸಾಕಷ್ಟು ಸಂಖ್ಯೆಯಲ್ಲಿ ಅಮಿತಾಭ್ ಬಚ್ಚನ್ ಅಭಿಮಾನಿಗಳಿಗೆಲ್ಲ ಉದ್ಘಾಟನಾ ಸಮಾರಂಭದಲ್ಲಿ ಜಮಾಯಿಸಿದ್ದಾರೆ. ಪಟಾಕಿ ಸಿಡಿಸಿ, ಅಮಿತಾಭ್ ಬಚ್ಚನ್ ಹಾಡುಗಳಿಗೆ ನೃತ್ಯ ಮಾಡಿ ಸಂಭ್ರಮಿಸಿದ್ದಾರೆ. ಗಾಜಿನ ಆವರಣದೊಳಗೆ ಅಮಿತಾಭ್ ಬಚ್ಚನ್ ಅವರು ಕೌನ್ ಬನೇಗಾ ಕರೋಡ್ಪತಿಯಲ್ಲಿ ಕುಳಿತುಕೊಳ್ಳುವ ಭಂಗಿಯಲ್ಲಿ ಪ್ರತಿಮೆಯನ್ನು ತಯಾರಿಸಿ ಇಡಲಾಗಿದೆ.
ಈ ಬಗ್ಗೆ ಟೆಕ್ಕಿ ಟ್ವೀಟ್ ಮಾಡಿದ್ದು, ತಮ್ಮ ಕುಟುಂಬ ಅಮಿತಾಭ್ ಬಚ್ಚನ್ ಅವರ ಪ್ರತಿಮೆಯ ಮುಂದೆ ತೆಗೆಸಿಕೊಂಡ ಫೋಟೋವನ್ನು ಕೂಡ ಹಂಚಿಕೊಂಡಿದ್ದಾರೆ. ಶೇಥ್ ಅವರು ಇಂಟರ್ನೆಟ್ ಸೆಕ್ಯುರಿಟಿ ಇಂಜಿನಿಯರ್ ಆಗಿದ್ದು, 1990ರ ದಶಕದಲ್ಲಿ ಗುಜರಾತ್‌ನಿಂದ ಅಮೆರಿಕಕ್ಕೆ ಬಂದಿದ್ದ ಅವರು ಎಡಿಸನ್‌ನಲ್ಲಿ ವಾಸವಾಗಿದ್ದಾರೆ. ಶೇಥ್ ಅವರು ಈ ಪ್ರತಿಮೆಯನ್ನು ರಾಜಸ್ಥಾನದಲ್ಲಿ ವಿನ್ಯಾಸಗೊಳಿಸಿ, ನ್ಯೂಜೆರ್ಸಿಯ ತಮ್ಮ ಮನೆಯ ಮುಂದೆ ಸ್ಥಾಪಿಸಿದ್ದಾರೆ.
ಶೇಥ್ ಅವರು ಅಮಿತಾಭ್ ಬಚ್ಚನ್ ಅವರ ದೊಡ್ಡ ಅಭಿಮಾನಿ. ನಟ ಅಮಿತಾಭ್ ಅವರಿಗೆ ದೇವರಂತೆ ಎಂದು ಹೇಳಿಕೊಂಡಿದ್ದಾರೆ. ಅವರ ರೀಲ್ ಜೀವನ ಮಾತ್ರವಲ್ಲ ಸಾರ್ವಜನಿಕವಾಗಿ ಹೇಗೆ ನಿರ್ವಹಿಸುತ್ತಾರೆ ಎಂಬ ಅವರ ರಿಯಲ್ ಜೀವನವೂ ಕೂಡ ನನಗೆ ಸ್ಫೂರ್ತಿ. ತುಂಬಾ ಡೌನ್ ಟು ಅರ್ಥ್ ಆಗಿರುವ ಬಿಗ್ ಬಿ ತಮ್ಮ ಅಭಿಮಾನಿಗಳ ಬಗ್ಗೆಯೂ ಕಾಳಜಿ ವಹಿಸುತ್ತಾರೆ. ಅವರು ಉಳಿದ ಸ್ಟಾರ್ಗಳಂತಲ್ಲ, ಹಾಗಾಗಿ ಅವರ ಆ ವ್ಯಕ್ತಿತ್ವವನ್ನು ನನ್ನ ಮನೆಯ ಮುಂದೆ ಸ್ಥಾಪಿಸಬೇಕು ಎಂದುಕೊಂಡೆ ಎಂದಿದ್ದಾರೆ.
ಇದನ್ನೂ ಓದಿ : ಬಾತ್ ರೂಂ, ಕೊಠಡಿ ನಾನೇ ಸ್ವಚ್ಛಗೊಳಿಸುತ್ತಿದ್ದೇನೆ: ಅಮಿತಾಬ್ ಬಚ್ಚನ್