ಮುಂಬೈ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ಒಂದರ ಹಿಂದೆ ಒಂದರಂತೆ ಸಾವಿನ ಸುದ್ದಿಗಳು ವರದಿಯಾಗುತ್ತಿದ್ದು, ಇಡೀ ಚಿತ್ರರಂಗವೇ ಶೋಕಸಾಗರದಲ್ಲಿದೆ. ಇಂದು ಬೆಳಗ್ಗೆ ಯಕೃತ್ತ್ಗೆ ಸಂಬಂಧಿಸಿದ ಕಾಯಿಲೆಯಿಂದ ಬಳಲುತ್ತಿದ್ದ, ಹಲವು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ, ಮಲಯಾಳಂ ಚಿತ್ರರಂಗದ ಖ್ಯಾತ ನಟಿ ಸುಬಿ ಸುರೇಶ್ ಇಹಲೋಕ ತ್ಯಜಿಸಿದ್ದರು. ಆ ದುಃಖ ಮಾಸುವ ಮುನ್ನವೇ ಇದೀಗ ಮತ್ತೊಂದು ಸಾವಿನ ಸುದ್ದಿ ಅಭಿಮಾನಿಗಳಿಗೆ ದೊಡ್ಡ ಹೊಡೆತ ನೀಡಿದೆ.
- " class="align-text-top noRightClick twitterSection" data="
">
ಖ್ಯಾತ ಹಿರಿಯ ಶಾಸ್ತ್ರೀಯ ನೃತ್ಯ ಕಲಾವಿದೆ ಕನಕ್ ರೆಲೆ ಇಂದು ಮುಂಬೈನಲ್ಲಿ ನಿಧನರಾಗಿದ್ದಾರೆ. ಹಿರಿಯ ನಟಿ ಹೇಮಾ ಮಾಲಿನಿ ತಮ್ಮ ಇನ್ಸ್ಟಾಗ್ರಾಂ ಖಾತೆಯಲ್ಲಿ ಈ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಕನಕ್ ರೆಲೆ ಅವರೊಂದಿಗಿನ ಎರಡು ಚಿತ್ರಗಳನ್ನು ಹಂಚಿಕೊಂಡಿರುವ ನಟಿ ಹೇಮಾ ಮಾಲಿನಿ ಅವರು ನೃತ್ಯಗಾರ್ತಿ ಅಗಲಿಕೆಗೆ ಸಂತಾಪ ಸೂಚಿಸಿದ್ದಾರೆ.
ದುಃಖ ವ್ಯಕ್ತಪಡಿಸಿರುವ ಹೇಮಾ ಮಾಲಿನಿ: ನಟಿ ಹೇಮಾ ಮಾಲಿನಿ ಅವರು ತಮ್ಮ ಇನ್‌ಸ್ಟಾಗ್ರಾಮ್ ಪೋಸ್ಟ್‌ನಲ್ಲಿ ಕನಕ್ ಅವರೊಂದಿಗಿನ ಎರಡು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಫೋಟೋಗಳ ಜೊತೆಗೆ, ’’ಇಂದು ದುಃಖದ ದಿನ ಮತ್ತು ನಮಗೆಲ್ಲರಿಗೂ ದೊಡ್ಡ ನಷ್ಟ, ವಿಶೇಷವಾಗಿ ನನಗೆ, ನಾವು ಪ್ರೀತಿ ಮತ್ತು ಪರಸ್ಪರ ಗೌರವವನ್ನು ಹೊಂದಿದ್ದ ಮೋಹಿನಿ ಅಟ್ಟಂ ನೃತ್ಯಗಾರ್ತಿ, ನೃತ್ಯ ಸಂಯೋಜಕಿ ಮತ್ತು ನಳಂದಾ ನೃತ್ಯ ಸಂಶೋಧನಾ ಕೇಂದ್ರದ ಸಂಸ್ಥಾಪಕರು, ಪದ್ಮವಿಭೂಷಣ ಡಾ. ಕನಕ್ ರೇಲೆ ಇಂದು ನಮ್ಮನ್ನಗಲಿದ್ದಾರೆ. ಶಾಸ್ತ್ರೀಯ ನೃತ್ಯದ ಜಗತ್ತಿನ ಒಂದು ಮಹಾನ್ ಯುಗ ಅಂತ್ಯವಾಗಿದೆ. ಈ ಜಗತ್ತಿಗೆ ಅವರ ಕೊಡುಗೆ ಅಪಾರವಾಗಿದೆ. ಕನಕ್ ಜಿಯವರ ಸೌಂದರ್ಯ ಮತ್ತು ವ್ಯಕ್ತಿತ್ವ ಶಾಶ್ವತವಾಗಿದೆ. ಅವರ ಆತ್ಮಕ್ಕೆ ಶಾಂತಿ ಕೋರುತ್ತಾ ಅವರ ಕುಟುಂಬದ ಸದಸ್ಯರಿಗೆ ಅವರ ಅಗಲಿಕೆಯ ನೋವನ್ನು ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ನಮ್ಮ ಸ್ನೇಹವನ್ನು ನಾನು ಯಾವಾಗಲೂ ಗೌರವಿಸುತ್ತೇನೆ‘‘ ಎಂದು ಬರೆದುಕೊಂಡಿದ್ದಾರೆ.
ಶಾಸ್ತ್ರೀಯ ನೃತ್ಯಗಾರ್ತಿ ಕನಕ್ ರೆಲೆ ನೃತ್ಯ ಪಯಣ: ಡಾ. ಕನಕ್ ರೆಲೆ ಅವರು ಕೇರಳದ ಪ್ರಸಿದ್ಧ ನೃತ್ಯ ಪ್ರಕಾರವಾದ ಮೋಹಿನಿಯಾಟ್ಟಂನಲ್ಲಿ ಪಾರಂಗತರಾಗಿದ್ದರು. ಮೋಹಿನಿಯಾಟ್ಟಂ ನೃತ್ಯದಿಂದ ದೇಶ ಮಾತ್ರವಲ್ಲದೆ ವಿಶ್ವದಲ್ಲಿ ಮನ್ನಣೆ ಗಳಿಸಿದ ಇವರು ತಮ್ಮ ನೃತ್ಯದಿಂದಲೇ ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಹೊಸ ಜೀವಕಳೆ ತುಂಬಿದರು. ಶಾಸ್ತ್ರೀಯ ನೃತ್ಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಕೀರ್ತಿ ಇವರದು. ಅವರು ಶಾಸ್ತ್ರೀಯ ನೃತ್ಯ ಕಲಾವಿದೆ ಮಾತ್ರವಲ್ಲದೇ ಅತ್ಯುತ್ತಮ ನೃತ್ಯ ನಿರ್ದೇಶಕಿಯೂ ಆಗಿದ್ದರು.
ಹಿರಿಯ ನೃತ್ಯ ಕಲಾವಿದೆ ಕನಕ್ ರೆಲೆ ಅವರು ನೃತ್ಯದ ಜೊತೆಗೆ ತಮ್ಮ ಮುಖಭಾವದಿಂದಲೇ ಪ್ರೇಕ್ಷಕರ ಮನ ಗೆಲ್ಲುತ್ತಿದ್ದರು. ಈ ಕಾರಣಕ್ಕಾಗಿಯೇ ಅವರು ಮೋಹಿನಿಯಾಟ್ಟಂ ನೃತ್ಯದಲ್ಲಿ ದೇಶದ ನಂಬರ್ ಒನ್ ನರ್ತಕಿಯಾಗಿದ್ದರು. ಕನಕ್ ಅವರಿಗೆ ಭಾರತ ಸರ್ಕಾರದಿಂದ ಪದ್ಮಶ್ರೀ ಮತ್ತು ಪದ್ಮಭೂಷಣದಂತಹ ಅತ್ಯುನ್ನತ ನಾಗರಿಕ ಪುರಸ್ಕಾರಗಳನ್ನು ನೀಡಿ ಗೌರವಿಸಲಾಗಿದೆ.
ಇದನ್ನೂ ಓದಿ: ಫಲಿಸದ ಚಿಕಿತ್ಸೆ - ಅನಾರೋಗ್ಯದಿಂದ ಬಳಲುತ್ತಿದ್ದ ಮಲಯಾಳಂ ನಟಿ ಸುಬಿ ಸುರೇಶ್ ವಿಧಿವಶ