ರೆಟ್ರೋ ಲುಕ್ ಹಾಗು ಟ್ರೈಲರ್ನಿಂದಲೇ ಕನ್ನಡ ಚಿತ್ರರಂಗದಲ್ಲಿ ಬೇಜಾನ್ ಸೌಂಡ್ ಮಾಡಿದ ಸಿನಿಮಾ ಹೆಡ್ ಬುಷ್. ಬೆಂಗಳೂರು ಡಾನ್ ಆಗಿ ಮೆರೆದ ಜಯರಾಜ್ ಬಯೋಫಿಕ್ ಹೆಡ್ ಬುಷ್ ಸಿನಿಮಾ ನಿನ್ನೆಯಷ್ಟೇ ಮಲ್ಟಿಪ್ಲೆಕ್ಸ್ ಸೇರಿದಂತೆ ಬರೋಬ್ಬರಿ 494 ಚಿತ್ರಮಂದಿಗಳಲ್ಲಿ ಬಿಡುಗಡೆ ಆಗಿದ್ದು, ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ.
ಧನಂಜಯ್ ಜಯರಾಜ್ ಪಾತ್ರಕ್ಕೆ ಜೀವ ತುಂಬಿದ್ದು, ನಟ ರಾಕ್ಷಸ ಡಾಲಿ ಹೊಸ ಅವತಾರಕ್ಕೆ ಸಿನಿಮಾ ಪ್ರೇಮಿಗಳು ಫಿದಾ ಆಗಿದ್ದಾರೆ. ಡಾಲಿ ಜೊತೆಗೆ ಲೂಸ್ ಮಾದ ಯೋಗಿ, ಬಾಲು ನಾಗೇಂದ್ರ, ವಸಿಷ್ಠ ಸಿಂಹ, ದೇವರಾಜ್, ರಘು ಮುಖರ್ಜಿ, ಶೃತಿ ಹರಿಹರನ್ ಕ್ಯಾರೆಕ್ಟರ್ಗಳು ಸಿನಿಮಾ ಪ್ರಿಯರಿಗೆ ಇಷ್ಟವಾಗಿದೆ.
ಹೆಡ್ ಬುಷ್ ಸಿನಿಮಾ ತೆರೆಕಂಡ ಎಲ್ಲಾ ಚಿತ್ರಮಂದಿಗಳಲ್ಲಿ ಹೌಸ್ ಫುಲ್ ಪ್ರದರ್ಶನ ಕಾಣುತ್ತಿದ್ದು, ಬಾಕ್ಸ್ ಆಫೀಸ್ನಲ್ಲಿ ಹೆಡ್ ಬುಷ್ ಸಿನಿಮಾ ಒಳ್ಳೆ ಬೆಳೆ ತೆಗೆದಿದೆ. ಹೆಡ್ ಬುಷ್ ಚಿತ್ರತಂಡ ಹೇಳುವಂತೆ ಮೊದಲ ದಿನ ಬರೋಬ್ಬರಿ 4.23 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ. 494 ಚಿತ್ರಮಂದಿರಗಳಲ್ಲಿ ರಿಲೀಸ್ ಆದ ಹೆಡ್ ಬುಷ್ ಸಿನಿಮಾ ಸಿಂಗಲ್ ಸ್ಕ್ರೀನ್ ಹಾಗು ಮಲ್ಟಿಪ್ಲೆಕ್ಸ್ ಸೇರಿದಂತೆ 1127 ಶೋಗಳು ಪ್ರದರ್ಶನ ಆಗಿವೆ. ಈ ಲೆಕ್ಕಾಚಾರದಂತೆ ಹೆಡ್ ಬುಷ್ ಸಿನಿಮಾ ಫಸ್ಟ್ ಡೇ 4.23 ಕೋಟಿ ಕಲೆಕ್ಷನ್ ಮಾಡಿದೆ. ಸದ್ಯ ಸಾಲು ಸಾಲು ರಜೆ ಇರುವ ನಾಲ್ಕು ದಿನಕ್ಕೆ 15ರಿಂದ 20 ಕೋಟಿ ಕಲೆಕ್ಷನ್ ಮಾಡುವ ಸಾಧ್ಯತೆ ಇದೆ ಎಂದು ಗಾಂಧಿನಗರದಲ್ಲಿ ಹೇಳಲಾಗುತ್ತಿದೆ.
ಬಡವ ರಾಸ್ಕಲ್ ಸಿನಿಮಾದಿಂದ ನಟನೆ ಜೊತೆಗೆ ನಿರ್ಮಾಪಕನಾದ ಡಾಲಿ ಧನಂಜಯ್ಗೆ, ಹೆಡ್ ಬುಷ್ ಸಿನಿಮಾ ಕೂಡ ದೊಡ್ಡ ಮಟ್ಟದ ಸಕ್ಸಸ್ ತಂದು ಕೊಟ್ಟಿದೆ. ಡಾಲಿ ಧನಂಜಯ ವೃತ್ತಿ ಬದುಕಿನಲ್ಲೇ, ಮೊದಲ ದಿನ ಕಲೆಕ್ಷನ್ಸ್ನಲ್ಲಿ ದಾಖಲೆ ಬರೆದ ಮೊದಲ ಸಿನಿಮಾ ಹೆಡ್ ಬುಷ್ ಆಗಿದೆ. ಈ ಮೂಲಕ ಹೆಡ್ ಬುಷ್ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಹೊಸ ದಾಖಲೆ ಬರೆದಿದೆ.
ಬರಹಗಾರ ಅಗ್ನಿ ಶ್ರೀಧರ್ ಕಥೆ, ಚಿತ್ರಕಥೆ ಮತ್ತು ಸಂಭಾಷಣೆಯನ್ನು ಬರೆದಿದ್ದು, ಇವರ ಶಿಷ್ಯ ಶೂನ್ಯ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚರಣ್ ರಾಜ್ ಸಂಗೀತ ಈ ಚಿತ್ರಕ್ಕೆ ದೊಡ್ಡ ಪ್ಲಸ್ ಪಾಯಿಂಟ್ ಆಗಿದೆ. ಇನ್ನು ಈ ಚಿತ್ರದಲ್ಲಿ ಧನಂಜಯ್ ಅಲ್ಲದೇ ಕ್ರೇಜಿಸ್ಟಾರ್ ರವಿಚಂದ್ರನ್, ಪಾಯಲ್ ರಜಪೂತ್, ಲೂಸ್ ಮಾದ ಯೋಗಿ, ದೇವರಾಜ್, ವಸಿಷ್ಠ ಸಿಂಹ, ಶೃತಿ ಹರಿಹರನ್, ರಘು ಮುಖರ್ಜಿ, ಬಾಲು ನಾಗೇಂದ್ರ ಸೇರಿದಂತೆ ಸಾಕಷ್ಟು ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ. ಸದ್ಯ ಹೆಡ್ ಬುಷ್ ಸಿನಿಮಾ ಬಿಡುಗಡೆ ಆದ ಎಲ್ಲಾ ಚಿತ್ರಮಂದಿರಗಳಲ್ಲಿ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ಡಾಲಿ ಸ್ಟಾರ್ಡಮ್ ಅನ್ನು ಈ ಸಿನಿಮಾ ಮತ್ತಷ್ಟು ದುಪ್ಪಟ್ಟು ಮಾಡಲಿದೆ.
ಇದನ್ನೂ ಓದಿ: ಡಾಲಿ ಸಿನಿಮಾದ ಪೇಯ್ಡ್ ಪ್ರೀಮಿಯರ್ ಬುಕ್ಕಿಂಗ್ ಜೋರು.. ದೀಪಾವಳಿಗೆ ಹೆಡ್ ಬುಷ್ ಪಟಾಕಿ ಸೇಲ್