ಮೈಸೂರು: ನಟ ಸುದೀಪ್ ನನ್ನ ಸ್ನೇಹಿತ. ಮನೆಗೆ ಬಂದಾಗ ರಾಜ್ಯ ರಾಜಕಾರಣದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ಅವರು ಕೇಳಿದ ಪ್ರಶ್ನೆಗಳಿಗೆ ನನ್ನ ರಾಜಕೀಯ ಅನುಭವದ ಆಧಾರದ ಮೇಲೆ ಉತ್ತರ ನೀಡಿದ್ದೇನೆ. ಅವರನ್ನು ರಾಜಕೀಯಕ್ಕೆ ಬನ್ನಿ ಎಂದು ಬಲವಂತ ಮಾಡುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಮೈಸೂರಿನ ಕಾಂಗ್ರೆಸ್ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ, ಸುದೀಪ್ ಕಾಂಗ್ರೆಸ್ ಸೇರ್ತಾರಾ? ಎಂಬ ಮಾಧ್ಯಮದವರ ಪ್ರಶ್ನೆಗೆ ಅವರು ಹೀಗೆ ಪ್ರತಿಕ್ರಿಯಿಸಿದರು.
ಸರ್ವೀಸ್ ರೋಡ್ ಮಾಡಿ: ಬೆಂಗಳೂರು-ಮೈಸೂರು ಹೈ-ವೇಯನ್ನು ಚುನಾವಣೆಯ ಹಿನ್ನೆಲೆಯಲ್ಲಿ ಆತುರವಾಗಿ ಉದ್ಘಾಟನೆ ಮಾಡಲು ಸಿದ್ಧತೆ ನಡೆಸುತ್ತಿದ್ದಾರೆ. 250 ರೂಪಾಯಿ ಟೋಲ್ ದರ ನಿಗದಿ ಮಾಡಿದ್ದು ಸರಿಯಲ್ಲ. ಟೋಲ್ ನಿಗದಿ ಮಾಡುವ ಮುನ್ನ ಸರ್ವೀಸ್ ರೋಡ್ ಮಾಡಬೇಕು. ಟೋಲ್ ಕಟ್ಟಲು ಆಗದವರು ಸರ್ವೀಸ್ ರೋಡ್ನಲ್ಲಿ ಹೋಗುತ್ತಾರೆ. ಮೊದಲು ಬೆಂಗಳೂರು-ಮೈಸೂರು ಹೈ ವೇ ಪಕ್ಕ ಸರ್ವೀಸ್ ರೋಡ್ ಮಾಡಿ. ಬಳಿಕ ಟೋಲ್ ನಿಗದಿಪಡಿಸಿ. ಇಲ್ಲದಿದ್ದರೆ ಕಾಂಗ್ರೆಸ್ ಹೋರಾಟಕ್ಕಿಳಿಯಲಿದೆ ಎಂದು ಅವರು ಎಚ್ಚರಿಕೆ ನೀಡಿದರು. ಪ್ರಧಾನಿ ಮೋದಿ ಅವರು ಮೈಸೂರಿಗೆ ಆಗಮಿಸಿದ್ದಾಗ ಮೈಸೂರನ್ನು ಪ್ಯಾರಿಸ್ ಮಾದರಿಯಲ್ಲಿ ಮಾಡುತ್ತೇವೆ ಎಂದಿದ್ದರು. ಮೈಸೂರನ್ನು ಪ್ಯಾರಿಸ್ ಮಾಡುವುದು ಬೇಡ, ಪ್ಯಾರಿಸ್ ಮಾದರಿಯ ಒಂದು ರಸ್ತೆಯನ್ನಾದರೂ ಮಾಡಿ ಎಂದು ಡಿಕೆಶಿ ಕುಟುಕಿದರು.
ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯೆ: ಟಿಪ್ಪು ಸುಲ್ತಾನ್ರಂತೆ ಸಿದ್ದರಾಮಯ್ಯನವರನ್ನು ಹೊಡೆದು ಹಾಕಬೇಕೆಂಬ ಸಚಿವ ಅಶ್ವತ್ಥನಾರಾಯಣ್ ಹೇಳಿಕೆಗೆ ಪ್ರತಿಕ್ರಿಯಿಸಿ, ತಲೆ ತೆಗೆಯಲು ಅದೇನು ಟಗರಿನ ತಲೆಯೇ?. ಅಶ್ವತ್ಥನಾರಾಯಣ ಅವರ ಭ್ರಷ್ಟ ಬಾಯಿ ಮಾತಿಗೆ ನಾನು ಉತ್ತರಿಸುವುದಿಲ್ಲ ಎಂದರು.
'ಕೇವಲ ಘೋಷಣೆಯ ಬಜೆಟ್': ಮಾರ್ಚ್ 7 ಅಥವಾ 8ಕ್ಕೆ ನೀತಿ ಸಂಹಿತೆ ಜಾರಿಗೆ ಬರುವ ಸಾಧ್ಯತೆ ಇದೆ. ನಾಳೆ ಮಂಡಿಸಲಿರುವ ಬಜೆಟ್ ಕೇವಲ ಘೋಷಣೆಗಳ ಭಾಷಣದ ಬಜೆಟ್ ಆಗಿರಲಿದೆ. ಈ ಹಿಂದೆ ಮಂಡಿಸಿದ ಬಜೆಟ್ ಅಲ್ಲಿ ಶೇ.90 ರಷ್ಟನ್ನೂ ಅನುಷ್ಟಾನಕ್ಕೆ ತಂದಿಲ್ಲ. ಯಡಿಯೂರಪ್ಪ, ಬೊಮ್ಮಾಯಿ ಕೇವಲ ಸುಳ್ಳು ಹೇಳಿಕೊಂಡು ಬರುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ನಟ ಸುದೀಪ್ ಮನೆಯಲ್ಲಿ ಡಿಕೆಶಿ ಡಿನ್ನರ್: ರಾಜಕೀಯ ವಲಯದಲ್ಲಿ ಗರಿಗೆದರಿದ ಕುತೂಹಲ
ಕಳೆದ ಬಜೆಟ್ನಲ್ಲಿ ಘೋಷಣೆ ಮಾಡಿದ ಭರವಸೆಗಳನ್ನು ಎಷ್ಟರ ಮಟ್ಟಿಗೆ ಈಡೇರಿಸಿದ್ದೀರಿ ಎಂಬುದಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಇಂದು ಸಂಜೆಯೊಳಗೆ ಉತ್ತರ ನೀಡಬೇಕು. ಇಲ್ಲದಿದ್ದರೆ ಕಾಂಗ್ರೆಸ್ ನಾಳೆ ಸಂಜೆ ದಾಖಲೆಸಮೇತ ಸರ್ಕಾರ ಏನು ಮಾಡಿದೆ ಎಂಬುದನ್ನು ಜನರ ಮುಂದಿಡಲಿದೆ ಎಂದು ತಿಳಿಸಿದರು. ಇದೇ ವೇಳೆ, ಕಾಂಗ್ರೆಸ್ನಲ್ಲಿ ಮುಖ್ಯಮಂತ್ರಿ ಆಸೆ ಇರುವವರು ಹತ್ತು ಜನ ಇದ್ದಾರೆ. ಅದರಲ್ಲಿ ನಾನೂ ಒಬ್ಬ ಎಂಬ ಪರಮೇಶ್ವರ್ ಹೇಳಿಕೆಗೆ, ಅದರಲ್ಲಿ ತಪ್ಪೇನಿದೆ? ಎಂದು ಪ್ರತಿಕ್ರಿಯಿಸಿದರು.
ಇದನ್ನೂ ಓದಿ: ಮಹಾತ್ಮ ಗಾಂಧೀಜಿಯವರನ್ನೇ ಕೊಂದವರಿವರು, ಆರ್ಎಸ್ಎಸ್ನವರು ಈ ರೀತಿ ಹೇಳಿಸಿದ್ದಾರೆ: ಸಿದ್ದರಾಮಯ್ಯ ಕಿಡಿ