ಇಡೀ ಭಾರತೀಯ ಸಿನಿ ರಂಗದಲ್ಲಿ ಸ್ಯಾಂಡಲ್ವುಡ್ನ ಐಕಾನ್ ಅಂತಾ ಕರೆಯಿಸಿಕೊಳ್ಳುವ ಏಕೈಕ ನಟ ದಿ.ಡಾ. ರಾಜ್ ಕುಮಾರ್. ಈ ನಟಸಾರ್ವಭೌಮ ರೂಢಿಸಿಕೊಂಡು ಬಂದ ಕೆಲ ಸಿದ್ಧಾಂತಗಳು ಪ್ರತೀ ನಾಗರೀಕರಿಗೂ, ಚಿತ್ರರಂಗದವರಿಗೂ ಮಾದರಿ. ಅವರು ಕೊನೆಯವರೆಗೂ ಪಾಲಿಸಿಕೊಂಡು ಬಂದ ತತ್ವ ಅಂದರೆ ಸರಳತೆ. ಕಿರಿಯರೇ ಇರಲಿ ಅಥವಾ ಹಿರಿಯರೇ ಇರಲಿ ಎಲ್ಲರಿಗೂ ಸರಿ ಸಮಾನವಾಗಿ ಕೊಡುತ್ತಿದ್ದ ಆ ಗೌರವ ಹಾಗೂ ಅಭಿಮಾನಿಗಳನ್ನು ದೇವರಿಗೆ ಹೋಲಿಸಿದ ಭಾರತೀಯ ಚಿತ್ರರಂಗದ ಮೊದಲ ನಟ ಅಂದ್ರೆ ಅದು ಡಾ. ರಾಜ್ ಕುಮಾರ್.
ಈ ಪರಿಪಾಠವನ್ನು ಇವತ್ತಿಗೂ ದೊಡ್ಮನೆ ಮಂದಿ ಪಾಲಿಸುತ್ತಾ ಬರುತ್ತಿದ್ದಾರೆ. ದಿ. ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ತಂದೆಯ ತತ್ವ ಸಿದ್ಧಾಂತಗಳನ್ನು ಹೆಚ್ಚಾಗಿ ಪಾಲಿಸುತ್ತಿದ್ದ ಕಾರಣ ಅವರು ಅಭಿಮಾನಿಗಳ ದೃಷ್ಟಿಯಲ್ಲಿ ಇಂದು ದೇವರಾಗಿದ್ದಾರೆ.
ನಿರ್ದೇಶಕ ಆರ್ ಚಂದ್ರು ಸರಳತೆ: ಇಂತಹ ಮಹಾನ್ ನಟನ ಆದರ್ಶದ ಹಾದಿಯಲ್ಲಿ ರೈತ ಕುಟುಂಬದ ಹಿನ್ನೆಲೆಯಿಂದ ಬಂದಿರುವ ನಿರ್ದೇಶಕ ಹಾಗೂ ನಿರ್ಮಾಪಕ ಆರ್. ಚಂದ್ರು ಕೂಡ ಇದ್ದಾರೆ. ಸದ್ಯ ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಮೂಲಕ ಇಡೀ ಭಾರತೀಯ ಚಿತ್ರರಂಗದಲ್ಲಿ ಗಮನ ಸೆಳೆಯುತ್ತಿರುವ ಆರ್ ಚಂದ್ರು ಅವರು ಶಿವ ರಾಜ್‍ಕುಮಾರ್, ಉಪೇಂದ್ರ, ಅಜಯ್ ರಾವ್, ನೆನಪಿರಲಿ ಪ್ರೇಮ್ ಅಂತಹ ಸ್ಟಾರ್ಗಳ ಸಿನಿಮಾಗಳನ್ನು ಡೈರೆಕ್ಷನ್ ಮಾಡಿ ಸ್ಟಾರ್ ನಿರ್ದೇಶಕ ಅಂತಾ ಕರೆಸಿಕೊಂಡಿದ್ದಾರೆ. ಆದರೂ ಸ್ಟಾರ್ ಡಮ್ ಅನ್ನು ತಲೆಗೆ ಅಂಟಿಸಿಕೊಳ್ಳದೇ ಬಹಳ ಸಿಂಪಲ್ ಆಗಿ ಜೀವನ ನಡೆಸುತ್ತಿದ್ದಾರೆ ನಿರ್ದೇಶಕ ಆರ್. ಚಂದ್ರು.
ಬಹುಕೋಟಿ ವೆಚ್ಚದಲ್ಲಿ ರಿಯಲ್ ಸ್ಟಾರ್ ಉಪೇಂದ್ರ ಹಾಗು ಕಿಚ್ಚ ಸುದೀಪ್ ಮುಖ್ಯಭೂಮಿಕೆಯಲ್ಲಿರೋ ಪ್ಯಾನ್ ಇಂಡಿಯಾ ಚಿತ್ರ ಕಬ್ಜಕ್ಕೆ ಆ್ಯಕ್ಷನ್ ಕಟ್ ಹೇಳಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಸಿನಿಮಾ ಮೇಲಿರುವ ಪ್ರೀತಿ, ಗೌರವವನ್ನು ಮೆಚ್ಚಲೇಬೇಕು. ನಾಲ್ಕು ವಿಭಿನ್ನ ಕಥೆಯ ಸೂಪರ್ ಹಿಟ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ನಿರ್ದೇಶಕ ಆರ್. ಚಂದ್ರು ಬಹಳ ಸಿಂಪಲ್ ಆಗಿ ಕಾಣಿಸಿಕೊಳ್ಳುತ್ತಾರೆ, ಸರಳ ಜೀವನ ನಡೆಸುತ್ತಾರೆ ಅನ್ನೋದು ಚಿತ್ರರಂಗದವರ, ಅಭಿಮಾನಿಗಳ ಮಾತು.
ಕೆಜಿಎಫ್ ಸಿನಿಮಾ ಸ್ಫೂರ್ತಿ ಎಂದ ಚಂದ್ರು: ಆರ್ ಚಂದ್ರು ಯಶಸ್ವಿ ನಿರ್ದೇಶಕ ಆಗಿದ್ದರೂ ಕೂಡ ಯಾವುದೇ ಸಂಕೋಚ ಇಲ್ಲದೇ ನಾನು ಪ್ಯಾನ್ ಇಂಡಿಯಾ ಕಬ್ಜ ಸಿನಿಮಾ ಮಾಡೋದಿಕ್ಕೆ ಸ್ಫೂರ್ತಿ ಕೆಜಿಎಫ್ ಸಿನಿಮಾವೇ ಕಾರಣ ಅಂತಾ ತಿಳಿಸಿದ್ದಾರೆ. ಹೌದು, ನಿರ್ದೇಶಕ ಆರ್. ಚಂದ್ರು ನಾನು ಎಂಬ ಅಹಂ ಅನ್ನು ತಲೆಗೆ ಅಂಟಿಸಿಕೊಳ್ಳದೇ, ಇವತ್ತಿಗೂ ಹೊಸ ನಿರ್ದೇಶಕನಂತೆ ತಮ್ಮ ಕೆಲಸ ಮಾಡುತ್ತಿದ್ದಾರೆ.
ಪುನೀತ್ ಜನ್ಮದಿನಕ್ಕೆ ಕಬ್ಜ ಬಿಡುಗಡೆ: ಇನ್ನು, ನಿರ್ದೇಶಕ ಆರ್ ಚಂದ್ರು ದಿ. ಪುನೀತ್ ರಾಜ್‍ಕುಮಾರ್ ಹುಟ್ಟು ಹಬ್ಬದಂದು ಕಬ್ಜ ಚಿತ್ರವನ್ನು ವಿಶ್ವಾದ್ಯಂತ ಬಿಡುಗಡೆ ಮಾಡಲು ಸಿದ್ಧತೆ ನಡೆಸಿದ್ದು, ಅದಕ್ಕೆ ಒಂದು ಬಲವಾದ ಕಾರಣ ಇದೆ. ಈಗಾಗಲೇ ದೊಡ್ಮನೆ ಮಗ ಶಿವ ರಾಜ್‍ಕುಮಾರ್ ಜೊತೆ ಮಾಡಿರುವ ಮೈಲಾರಿ ಅನ್ನೋ ಸಿನಿಮಾ ಸಕ್ಸಸ್ ಕಂಡಿರುವ ನಿರ್ದೇಶಕ ಆರ್ ಚಂದ್ರು ಅವರಿಗೆ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಮೇಲೆ ಒಂದು ವಿಶೇಷ ಗೌರವ ಇದೆ.
ಏಕೆಂದರೆ ಅಪ್ಪು ಬದುಕಿದ್ದಾಗ ಕಬ್ಜ ಸಿನಿಮಾದ ಮೇಕಿಂಗ್ ಸ್ಟೈಲ್ ನೋಡಿ ಫಿದಾ ಆಗಿದ್ದರು. ಕಬ್ಜ ಚಿತ್ರದ ಏನೇ ಇವೆಂಟ್ ಇರಲಿ ನಾನು ಬಂತು ಸಪೋರ್ಟ್ ಮಾಡುತ್ತೇನೆಂದು ಪುನೀತ್ ಅವರು ನಿರ್ದೇಶಕ ಚಂದ್ರು ಅವರಿಗೆ ಹೇಳಿದ್ದರು. ಆದ್ರಿಂದು ಪವರ್ ಸ್ಟಾರ್ ನಮ್ಮ ಜೊತೆ ಇಲ್ಲ. ಈ ಕಾರಣಕ್ಕೆ ನಾನು ಕಬ್ಜ ಚಿತ್ರವನ್ನು ಅವರ ಹುಟ್ಟುಹಬ್ಬದಂದು ಬಿಡುಗಡೆ ಮಾಡುವ ಮೂಲಕ ಅವರಿಗೆ ಅರ್ಪಿಸುತ್ತಿದ್ದೇನೆಂದು ತಿಳಿಸಿದ್ದಾರೆ.
ಕಬ್ಜ ಸಿನಿಮಾ ಸಾಂಗ್: ಇದೇ ಫೆಬ್ರವರಿ 4ರಂದು ಹೈದರಾಬಾದ್ನಲ್ಲಿ ಕಬ್ಜ ಸಿನಿಮಾದ ಮೊದಲ ಮಾಸ್ ಸಾಂಗ್ ಬಿಡುಗಡೆ ಆಗಲಿದ್ದು, ಈ ಕಾರ್ಯಕ್ರಮಕ್ಕೆ ನಿರ್ದೇಶಕ ಎಸ್.ಎಸ್ ರಾಜಮೌಳಿ ಬರುವ ಸಾಧ್ಯತೆ ಇದೆ. ತೆಲುಗಿನಲ್ಲಿ ಕಬ್ಜ ಚಿತ್ರದ ವಿತರಣೆ ಹಕ್ಕನ್ನು ತೆಲುಗು ನಟ ನಿತಿನ್ ತಂದೆ ಸುಧಾಕರ್ ರೆಡ್ಡಿ ಪಡೆದಿದ್ದಾರೆ.
ಇದನ್ನೂ ಓದಿ: ಕೇಂದ್ರ ಬಜೆಟ್: ಸರ್ಕಾರದಿಂದ ಮನೋರಂಜನಾ ಉದ್ಯಮಗಳ ನಿರ್ಲಕ್ಷ್ಯ : ಅಶೋಕ್ ಪಂಡಿತ್
ಇನ್ನು, ಕೆಜಿಎಫ್, 777 ಚಾರ್ಲಿ, ಜೇಮ್ಸ್, ವಿಕ್ರಾಂತ್ ರೋಣ, ಕಾಂತಾರ ಚಿತ್ರಗಳು ಭಾರತ ಅಲ್ಲದೇ ವಿಶ್ವಾದ್ಯಂತ ತೆರೆಕಂಡು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರ ಆಗುವ ಮೂಲಕ ಬಾಕ್ಸ್ ಆಫೀಸ್‌ನಲ್ಲಿ ತಮ್ಮದೇ ದಾಖಲೆಗಳನ್ನು ಬರೆದಿವೆ. ಅದೇ ರೀತಿ ಕಬ್ಜ ಸಿನಿಮಾ ಬಹುದೊಡ್ಡ ಮಟ್ಟದಲ್ಲಿ ಸಕ್ಸಸ್ ಆಗಬೇಕು ಅಂತಾ ನಿರ್ದೇಶಕ ಆರ್. ಚಂದ್ರು ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಅಣ್ಣಾವ್ರ ಆದರ್ಶದ ಹಾದಿಯಲ್ಲಿ ಚಂದ್ರು ಸಾಗುತ್ತಿದ್ದಾರೆ ಅನ್ನೋದಿಕ್ಕೆ ಈ ಬೆಳವಣಿಗೆ ಸಾಕ್ಷಿ.