ಸ್ಯಾಂಡಲ್ವುಡ್ ಭಾರತೀಯ ಚಿತ್ರರಂಗ ಗಮನ ಸೆಳೆಯೋ ಕೆಲಸವನ್ನು ಮುಂದುವರೆಸಿದೆ. ಕೆಜಿಎಫ್, ಕಾಂತಾರ ಸಿನಿಮಾಗಳ ಬಳಿಕ ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ 'ಸಲಾರ್' ಸಖತ್ ಸದ್ದು ಮಾಡುತ್ತಿದೆ. ಇದರ ಜೊತೆಗೆ ರಾಜ್ಯಾದ್ಯಂತ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 'ಕಾಟೇರ' ಸಿನಿಮಾದ ಕ್ರೇಜ್ ಜೋರಾಗಿದೆ.
ಬಹುಭಾಷಾ ಚಿತ್ರಗಳ ನಡುವೆ ಸಖತ್ ಸದ್ದು ಮಾಡುತ್ತಿರೋ 'ಕಾಟೇರ' ಬಿಡುಗಡೆಗೆ ಇನ್ನೇನು ಕೆಲ ದಿನಗಳಷ್ಟೇ ಬಾಕಿ ಉಳಿದಿದೆ. ಚಿತ್ರತಂಡ ವಿಭಿನ್ನ ಪ್ರಚಾರದಲ್ಲಿ ಮಗ್ನವಾಗಿದೆ. ಇದೇ ಹೊತ್ತಿನಲ್ಲಿ ಹೈದರಾಬಾದ್ ಕರ್ನಾಟಕ ಭಾಗದ 'ಕಾಟೇರ' ವಿತರಣಾ ಹಕ್ಕನ್ನು ನಿರ್ದೇಶಕ, ನಿರ್ಮಾಪಕ ಗುರು ದೇಶಪಾಂಡೆ ಪಡೆದುಕೊಂಡಿದ್ದಾರೆ.
ಈ ಸುದ್ದಿ ಕೇಳಿದಾಕ್ಷಣ ಹಲವರಿಗೆ ಅಚ್ಚರಿಯಾದೀತೇನೋ. ಗುರು ದೇಶಪಾಂಡೆ ನಿರ್ದೇಶಕರಾಗಿ ಫೇಮಸ್ ಆಗಿರುವರು. ಇತ್ತೀಚಿನ ದಿನಗಳಲ್ಲಿ ನಿರ್ಮಾಪಕರಾಗಿಯೂ ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಸದ್ಯ ಏಕಾಏಕಿ ಸಿನಿಮಾ ವಿತರಣಾ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಿದರೆಂದರೆ, ಅಚ್ಚರಿಯಾಗೋದು ಸಹಜವೇ. ಅಸಲಿ ವಿಚಾರವೆಂದರೆ, ಅವರು ಸಿನಿಮಾ ವಿತರಣಾ ಕ್ಷೇತ್ರಕ್ಕೆ ಸೀನಿಯರ್. ದಶಕಗಳ ಹಿಂದೆ ಹಲವಾರು ಹಿಟ್ ಸಿನಿಮಾಗಳನ್ನು ವಿತರಿಸಿ ಸೈ ಅನ್ನಿಸಿಕೊಂಡಿದ್ದ ಗುರು ದೇಶಪಾಂಡೆ ಕಾಟೇರ ಮೂಲಕ ಈ ಕ್ಷೇತ್ರಕ್ಕೆ ರೀ ಎಂಟ್ರಿ ಕೊಡುತ್ತಿದ್ದಾರೆ.
ದರ್ಶನ್ ಸಿನಿಮಾಗಳೆಂದರೆ ಎಲ್ಲೆಡೆ ಕ್ರೇಜ್ ಸೃಷ್ಟಿಯಾಗೋದು ಸಹಜವೇ. ಕಾಟೇರ ವಿಚಾರದಲ್ಲಿ ಈ ಹಿಂದಿನ ಸಿನಿಮಾಗಳಿಗಿಂತಲೂ ತುಸು ಹೆಚ್ಚೇ ನಿರೀಕ್ಷೆಗಳಿವೆ. ಅದರಲ್ಲೂ ವಿಶೇಷವಾಗಿ ಹೈದರಾಬಾದ್ ಕರ್ನಾಟಕ ಮಂದಿಯ ಸಿನಿಮಾ ವ್ಯಾಮೋಹ ಅತೀವವಾದದ್ದು. ಈ ಭಾಗದ ಕಾಟೇರ ವಿತರಣಾ ಹಕ್ಕನ್ನು ಗುರು ಖರೀದಿಸಿದ್ದಾರೆ. ಇದರೊಂದಿಗೆ ಸಿನಿಮಾ ವಿತರಕರಾಗಿ ಅವರು ಸೆಕೆಂಡ್ ಇನ್ನಿಂಗ್ಸ್ ಶುರು ಮಾಡಿದ್ದಾರೆ. ದರ್ಶನ್ ಮತ್ತು ಗುರು ಅವರಿಗೆ ಭರ್ಜರಿ ಯಶಸ್ಸು ಸಿಗುವ ಸೂಚನೆಗಳಿವೆ. ಆದ್ರೆ ಎಷ್ಟು ಕೋಟಿಗೆ ವ್ಯವಹಾರ ಆಗಿದೆ ಅನ್ನೋದರ ಸುಳಿವನ್ನು ಬಿಟ್ಟುಕೊಟ್ಟಿಲ್ಲ.
ಇದನ್ನೂ ಓದಿ: ಇಳಿಕೆ ಕಂಡ 'ಡಂಕಿ' ಗಳಿಕೆ: 'ಸಲಾರ್' ಅಬ್ಬರದೆದುರು ಮಂಕಾಯ್ತಾ ಶಾರುಖ್ ಸಿನಿಮಾ?
ಗುರು ದೇಶಪಾಂಡೆ ಸಿನಿಮಾ ರಂಗದ ನಾನಾ ವಿಭಾಗಗಳಲ್ಲಿ ಸಕ್ರಿಯರಾಗಿದ್ದರೂ ಕೂಡ, ಪ್ರಧಾನವಾಗಿ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. 2010ರ ಸಂದರ್ಭ ಸಿನಿಮಾ ವಿತರಕರಾಗಿ ಅವರು ಸಕ್ರಿಯರಾಗಿದ್ದರು. ಆ ಕಾಲದಲ್ಲಿ ಸೂಪರ್ ಸ್ಟಾರ್ ಧನುಶ್ ನಟಿಸಿದ್ದ ಅಡುಗಳಂ, ದೈವ ತಿರುಮಗಳ್, ದಳಪತಿ ವಿಜಯ್ ನಟಿಸಿದ್ದ ವೇಲಾಯುಧನ್, ಯಶ್ ಅಭಿನಯದ ಕಿರಾತಕ, ಸಂಜು ವೆಡ್ಸ್ ಗೀತಾ ಅಂತಹ ಹಿಟ್ ಸಿನಿಮಾಗಳನ್ನು ವಿತರಿಸುವ ಮೂಲಕ ಗೆದ್ದಿದ್ದರು. ಆ ನಂತರದಲ್ಲಿ ನಿರ್ದೇಶನದತ್ತ ಹೊರಳಿಕೊಂಡಿದ್ದ ದೇಶಪಾಂಡೆ, ವಿತರಣಾ ಕ್ಷೇತ್ರದಿಂದ ಹಿಂದೆ ಸರಿದ್ದರು. ಇದೀಗ ದಶಕದ ನಂತರ, ಕಾಟೇರ ಸಿನಿಮಾವನ್ನು ವಿತರಣೆ ಮಾಡುವ ಮೂಲಕ ಮತ್ತದೇ ಹಾದಿಯಲ್ಲಿ ಹೊಸ ಹುರುಪಿನೊಂದಿಗೆ ಮುನ್ನಡೆಯಲು ಸಜ್ಜಾಗಿದ್ದಾರೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಇದೇ ಡಿಸೆಂಬರ್ 29ರಂದು ತೆರೆಕಾಣಲಿದೆ.
ಇದನ್ನೂ ಓದಿ: 'ಸಲಾರ್' ಸಿನಿಮಾದಲ್ಲಿ ಕನ್ನಡಿಗರ ದರ್ಬಾರ್; ಹೊಂಬಾಳೆ ಫಿಲ್ಮ್ಸ್ಗೆ ದೊಡ್ಡ ಗೆಲುವು
ದರ್ಶನ್ ಪೋಸ್ಟ್: ಇಂದು ಚಿತ್ರದ ಹಾಡೊಂದು ಅನಾವರಣಗೊಳ್ಳಲಿದೆ. ಈ ಬಗ್ಗೆ ಪೋಸ್ಟ್ ಶೇರ್ ಮಾಡಿರುವ ನಟ, ''ನಾಡಿನ ಸಮಸ್ತ ರೈತ ಬಂಧುಗಳಿಗೆ ರೈತರ ದಿನದ ಹಾರ್ದಿಕ ಶುಭಾಶಯಗಳು. ಈ ವಿಶೇಷ ದಿನದಂದು ನಮ್ಮ ಚಿತ್ರದ ವಿಶೇಷ ಹಾಡನ್ನು ಸಕ್ಕರೆ ನಾಡು ಮಂಡ್ಯದಲ್ಲಿ ಇಂದು ಸಂಜೆ 8:16 ಕ್ಕೆ ಸೆಲೆಬ್ರಿಟಿಗಳ ಸಮ್ಮುಖದಲ್ಲಿ ಬಿಡುಗಡೆ ಮಾಡಲಿದ್ದೇವೆ'' ಎಂದು ಬರೆದುಕೊಂಡಿದ್ದಾರೆ.