ನವದೆಹಲಿ: ಬಾಲಿವುಡ್ ಗಾಯಕ ಮತ್ತು ರ‍್ಯಾಪರ್ ಹನಿ ಸಿಂಗ್ ಮತ್ತು ಪತ್ನಿ ಶಾಲಿನಿ ತಲ್ವಾರ್ ಅವರ ವಿಚ್ಛೇದನವನ್ನು ದೆಹಲಿಯ ಕೌಟುಂಬಿಕ ನ್ಯಾಯಾಲಯ ಮಂಗಳವಾರ ಅಂಗೀಕರಿಸಿತು. ಕೌಟುಂಬಿಕ ನ್ಯಾಯಾಲಯದ ನ್ಯಾಯಾಧೀಶ ಪರಮಜಿತ್ ಸಿಂಗ್ ದಂಪತಿಗೆ ವಿಚ್ಛೇದನ ನೀಡಿ ಆದೇಶ ಹೊರಡಿಸಿದರು.
ಗಾಯಕನ ವಿರುದ್ಧ ಅವರ ಪತ್ನಿ ದಾಖಲಿಸಿದ ಕೌಟುಂಬಿಕ ದೌರ್ಜನ್ಯ ಪ್ರಕರಣವೂ ಸೇರಿದಂತೆ ಎಲ್ಲಾ ವಿವಾದಗಳನ್ನು ಕೊನೆಗೊಳಿಸಲು ನ್ಯಾಯಾಲಯವು ಇಬ್ಬರ ಮಧ್ಯೆ ಒಪ್ಪಂದ ಮಾಡಿದೆ ಎಂದು ಹೇಳಲಾಗುತ್ತಿದೆ. ಇದರ ನಂತರ, ಇದೀಗ ವಿಚ್ಛೇದನ ನೀಡಲಾಗಿದೆ. ಪ್ರಕರಣದ ಇತ್ಯರ್ಥವಾದ ನಂತರ, ಹನಿ ಅವರ ಪತ್ನಿ ಕೌಟುಂಬಿಕ ದೌರ್ಜನ್ಯ ಪ್ರಕರಣವನ್ನು ಹಿಂತೆಗೆದುಕೊಂಡರು. ಸಿಂಗ್ ಮತ್ತವರ ಕುಟುಂಬ ಸದಸ್ಯರು ತನ್ನೊಂದಿಗೆ ಕ್ರೂರ ಮತ್ತು ಹಿಂಸಾತ್ಮಕವಾಗಿ ವರ್ತಿಸಿದ್ದಾರೆ ಎಂದು ಶಾಲಿನಿ ಆರೋಪಿಸಿದ್ದರು.
ಒಟ್ಟಿಗೆ ವಾಸಿಸಲು ನಿರಾಕರಿಸಿದ ಹನಿ ಸಿಂಗ್: ತೀರ್ಪು ನೀಡುವಾಗ, ನ್ಯಾಯಾಧೀಶರು ಗಾಯಕನನ್ನು ನಿಮ್ಮ ಹೆಂಡತಿಯೊಂದಿಗೆ ವಾಸಿಸಲು ಪ್ರಯತ್ನಿಸುತ್ತೀರಾ ಎಂದು ಕೇಳಿದರು. ಅದಕ್ಕವರು, ಈಗ ಆಕೆಯೊಂದಿಗೆ ವಾಸಿಸುವ ಸಾಧ್ಯವಿಲ್ಲ ಎಂದು ಉತ್ತರಿಸಿದರು. ಹನಿ ಸಿಂಗ್ ಪರ ವಕೀಲರಾದ ಇಶಾನ್ ಮುಖರ್ಜಿ, ಅಮೃತಾ ಚಟರ್ಜಿ ಮತ್ತು ಜಸ್ಪಾಲ್ ಸಿಂಗ್ ವಾದ ಮಂಡಿಸಿದರು. ವಕೀಲ ವಿವೇಕ್ ಸಿಂಗ್ ಅವರು ಶಾಲಿನಿ ತಲ್ವಾರ್ ಪರ ವಾದಿಸಿದರು.
₹1 ಕೋಟಿ ಜೀವನಾಂಶ: ಶಾಲಿನಿ ತಮ್ಮ ಜೀವನಾಂಶಕ್ಕಾಗಿ ಹನಿ ಸಿಂಗ್ ಅವರಿಂದ 10 ಕೋಟಿ ರೂ.ಗೆ ಬೇಡಿಕೆ ಇಟ್ಟಿದ್ದರು. ಆದರೆ, 1 ಕೋಟಿ ರೂಪಾಯಿ ಜೀವನಾಂಶ ನೀಡಲು ಒಪ್ಪಿಗೆಯಾಗಿತ್ತು. ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಹನಿ ಸಿಂಗ್ ಒಂದು ಕೋಟಿ ರೂಪಾಯಿಯ ಚೆಕ್ ನೀಡಿದ್ದರು. ಶಾಲಿನಿ ತಮ್ಮ ಹೇಳಿಕೆಯಲ್ಲಿ, ''ಹನಿ ಸಿಂಗ್ ತಮಗೆ ಮೋಸ ಮಾಡಿದ್ದಾರೆ. ಇತರ ಮಹಿಳೆಯರೊಂದಿಗೆ ದೈಹಿಕ ಸಂಬಂಧ ಹೊಂದಿದ್ದಾರೆ. ಅವರು ತನ್ನನ್ನು ಮಾನಸಿಕ ಮತ್ತು ದೈಹಿಕವಾಗಿ ನಿಂದಿಸಿದ್ದಾನೆ" ಎಂದು ಗಂಭೀರ ಆರೋಪ ಮಾಡಿದ್ದರು.
2011ರಲ್ಲಿ ವಿವಾಹ: ಮದುವೆಗೆ ಮೊದಲು, ಹನಿ ಸಿಂಗ್ ಮತ್ತು ಶಾಲಿನಿ ತಲ್ವಾರ್ ಪರಸ್ಪರ ಡೇಟಿಂಗ್ ಮಾಡಿದ್ದರು. ರಿಯಾಲಿಟಿ ಶೋವೊಂದರಲ್ಲಿ ಹನಿ ಸಿಂಗ್ ಈ ವಿಷಯವನ್ನು ಬಹಿರಂಗಪಡಿಸಿದ್ದರು. ನಂತರ ಇಬ್ಬರೂ 2011ರಲ್ಲಿ ಗುರುದ್ವಾರದಲ್ಲಿ ಸಿಖ್ ಸಂಪ್ರದಾಯದಂತೆ ವಿವಾಹವಾಗಿದ್ದರು. ಇಬ್ಬರ ಮದುವೆ ಕಾರ್ಯಕ್ರಮ ಗೌಪ್ಯವಾಗಿತ್ತು. ಎರಡು ಕುಟುಂಬದ ಸದಸ್ಯರು ಮಾತ್ರ ಭಾಗವಹಿಸಿದ್ದರು.
ಆರೋಪದ ಬಗ್ಗೆ ಹನಿ ಸಿಂಗ್ ಹೇಳಿಕೆ: ಈ ಹಿಂದೆ, ಆರೋಪಗಳಿಗೆ ಪ್ರತಿಕ್ರಿಯಿಸಿದ್ದ ಗಾಯಕ-ರ‍್ಯಾಪರ್ ಹನಿ ಸಿಂಗ್, ಶಾಲಿನಿ ತಲ್ವಾರ್ ಮಾಡಿದ ಆರೋಪಗಳು ಸುಳ್ಳು ಮತ್ತು ದುರುದ್ದೇಶಪೂರಿತ ಎಂದಿದ್ದರು.''ನನ್ನ ಪತ್ನಿ ಶಾಲಿನಿ ಸಿಂಗ್ ಅವರ ಎಲ್ಲಾ ಆರೋಪಗಳು ಆಧಾರ ರಹಿತ ಹಾಗೂ ಮಾನಹಾನಿಕರವಾಗಿದೆ. ಇದರಿಂದ ನನಗೆ ಹಾಗೂ ನನ್ನ ಕುಟುಂಬಕ್ಕೆ ತುಂಬಾ ನೋವಾಗಿದೆ'' ಎಂದು ಹೇಳಿದ್ದರು.
ಇದನ್ನೂ ಓದಿ: ಕಮಲ್ ಹಾಸನ್ ಬರ್ತ್ಡೇ ಪಾರ್ಟಿ: ಒಂದೇ ಫ್ರೇಮ್ನಲ್ಲಿ ಸೆರೆಯಾದ ಸೂರ್ಯ- ಅಮೀರ್ ಖಾನ್