ಸಲ್ಮಾನ್ ಖಾನ್ ಅಭಿನಯದ 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಸಿನಿಮಾ ಈದ್ (ಏಪ್ರಿಲ್ 21, 2023) ಸಂದರ್ಭ ತೆರೆಕಂಡು ಉತ್ತಮ ಪ್ರದರ್ಶನ ಕಂಡಿದೆ. ಮಿಶ್ರ ಪ್ರತಿಕ್ರಿಯೆ ಪಡೆದ ಈ ಸಿನಿಮಾ 100 ಕೋಟಿ ಕ್ಲಬ್ ಸೇರುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಚಿತ್ರದ ನಿರೀಕ್ಷೆ ದೊಡ್ಡ ಮಟ್ಟದಲ್ಲಿತ್ತು, ಮಿಶ್ರ ಪ್ರತಿಕ್ರಿಯೆ ಪಡೆದು ಬಾಕ್ಸ್ ಆಫೀಸ್ ಸಂಖ್ಯೆ ಸದ್ಯ ಇಳಿಮುಖವಾಗಿದೆ.
'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಫ್ಯಾಮಿಲಿ ಎಂಟರ್ಟೈನ್ಮೆಂಟ್ ಸಿನಿಮಾ ದೊಡ್ಡ ತಾರಾಬಳಗವನ್ನೇ ಹೊಂದಿತ್ತು. ಸಖತ್ ಫೇಮಸ್ ಡ್ಯಾನ್ಸರ್, ನಟ, ಜನಪ್ರಿಯ ಡ್ಯಾನ್ಸ್ ಶೋನ ನಿರೂಪಕ ರಾಘವ್ ಜುಯಲ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದಾರೆ. ಈ ಚಿತ್ರದಲ್ಲಿ ತಮ್ಮ ಪಾತ್ರಕ್ಕಾಗಿ 1.2 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಹಿಂದಿ ಚಿತ್ರರಂಗದ ರಿಯಾಲಿಟಿ ಶೋ ಡಾನ್ಸ್ ಇಂಡಿಯಾ ಡ್ಯಾನ್ಸ್ 3ನಲ್ಲಿ ಕಾಣಿಸಿಕೊಂಡ ನಂತರ ಇವರ ಜನಪ್ರಿಯತೆ ಹೆಚ್ಚಿದೆ. ಡ್ಯಾನ್ಸ್ ಶೋನ ಹೋಸ್ಟ್ ಆಗಿ ಜನಮನ ಗೆದ್ದಿದ್ದಾರೆ. ಇವರ ನಿರೂಪಣೆ, ಎಂಟರ್ಟೈನ್ಮೆಂಟ್ ಶೈಲಿ ಎಲ್ಲವೂ ಪ್ರೇಕ್ಷಕರಿಗೆ ಬಹಳಾನೇ ಇಷ್ಟವಾಗಿದೆ. ಡ್ಯಾನ್ಸರ್, ನಿರೂಪಕನಾಗಿಯೇ ಸೆಲೆಬ್ರಿಟಿಗಳಂತೆ ದೊಡ್ಡ ಮಟ್ಟದ ಅಭಿಮಾನಿ ಬಳಗವನ್ನು ಸಂಪಾದಿಸಿದ್ದಾರೆ. ಟಿವಿ ಶೋಗಳಲ್ಲಿ ಜನಪ್ರಿಯರಾಗಿರುವ ರಾಘವ್ ಜುಯಲ್ ಈ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರದಲ್ಲಿ ಇಷ್ಕ್ ಪಾತ್ರವನ್ನು ನಿರ್ವಹಿಸಿದ್ದಾರೆ. ಅವರ ಈ ಪಾತ್ರಕ್ಕೆ ಅಭಿಮಾನಿಗಳ ಮೆಚ್ಚುಗೆಯೂ ವ್ಯಕ್ತವಾಗಿದೆ.
ನರ್ತಕ, ನೃತ್ಯ ಸಂಯೋಜಕ, ಸದ್ಯ ನಟನಾಗಿ ಗುರುತಿಸಿಕೊಂಡಿರುವ ರಾಘವ್ ಅವರು ಸ್ಲೋ ಮೋಷನ್ ಡ್ಯಾನ್ಸ್ ಮೂವ್ಸ್ಗೆ ಹೆಸರುವಾಸಿಯಾಗಿದ್ದಾರೆ. ಅವರನ್ನು ಕಿಂಗ್ ಆಫ್ ಸ್ಲೋ ಮೋಷನ್ ಎಂದೇ ಗುರುತಿಸಲಾಗುತ್ತದೆ. 'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ಚಿತ್ರದಲ್ಲಿ ರಾಘವ್ ಅವರು ಸಲ್ಮಾನ್ ಅವರ ಕಿರಿಯ ಸಹೋದರನ ಪಾತ್ರದಲ್ಲಿ ನಟಿಸಿದ್ದಾರೆ. ಈ ಚಿತ್ರ ಅಲ್ಲದೇ ಸದ್ಯ ನಿರ್ಮಾಣ ಹಂತದಲ್ಲಿರುವ ಎರಡು ಚಿತ್ರಗಳಲ್ಲಿಯೂ ರಾಘವ್ ಕಾಣಿಸಿಕೊಳ್ಳಲಿದ್ದಾರೆ. ಈ ಸಿನಿಮಾಗಳ ಬಗ್ಗೆ ಚಿತ್ರತಂಡ ಶೀಘ್ರದಲ್ಲೇ ಮಾಹಿತಿ ನೀಡಲಿದೆ.
ಇದನ್ನೂ ಓದಿ: ಮುಂಬೈನಲ್ಲಿ ಅಮೆರಿಕನ್ ಬ್ಯಾಕ್‌ಸ್ಟ್ರೀಟ್ ಬಾಯ್ಸ್ ಶೋ: ಬಾಲಿವುಡ್ ಸಿನಿಗಣ್ಯರು ಭಾಗಿ
'ಕಿಸಿ ಕಿ ಭಾಯ್ ಕಿಸಿ ಕಿ ಜಾನ್' ರಾಘವ್ ಅವರ ಚೊಚ್ಚಲ ಚಿತ್ರವಲ್ಲ. ಈ ಹಿಂದೆ ಎಬಿಸಿಡಿ 2 ಮತ್ತು ಸ್ಟ್ರೀಟ್ ಡ್ಯಾನ್ಸರ್‌ನಲ್ಲಿ ಕೂಡ ನಟಿಸಿದ್ದರು. ಕಪಿಲ್ ಶರ್ಮಾ ಶೋನಲ್ಲಿ, ವಿಶೇಷ ಪಾತ್ರದಲ್ಲಿ ನಟಿಸುವ ಬಗ್ಗೆ ಮಾತನಾಡಿದ್ದರು. ಸಲ್ಮಾನ್ ತನಗೆ ಪಾತ್ರ ನೀಡಲು ಕರೆ ಮಾಡಿದ್ದರು. ಸೂಪರ್ ಸ್ಟಾರ್ ಸಲ್ಮಾನ್ ಖಾನ್ ಪಾತ್ರ ಕೊಡಲು ನೇರವಾಗಿ ನನಗೆ ಕರೆ ಮಾಡುತ್ತಾರೆ ಎಂದು ನಾನು ಊಹಿಸಿಯೂ ಇರಲಿಲ್ಲ, ಅಂದು ನಾನು ದಿಗ್ಭ್ರಮೆಗೊಂಡಿದ್ದೆ ಎಂದು ಅವರು ವಿವರಿಸಿದರು.
ಇದನ್ನೂ ಓದಿ: ಶಾರುಖ್ 'ಪಠಾಣ್' ದಾಖಲೆ: 1971ರ ನಂತರ ಬಾಂಗ್ಲಾದೇಶದಲ್ಲಿ ತೆರೆಕಾಣಲಿರುವ ಮೊದಲ ಹಿಂದಿ ಚಿತ್ರ
ಫರ್ಹಾದ್ ಸಾಮ್ಜಿ ನಿರ್ದೇಶನದ ಆ್ಯಕ್ಷನ್ ಫ್ಯಾಮಿಲಿ ಎಂಟರ್ಟೈನ್ಮೆಂಟ್ ಚಿತ್ರದಲ್ಲಿ ಪೂಜಾ ಹೆಗ್ಡೆ, ದಗ್ಗುಬಾಟಿ ವೆಂಕಟೇಶ್, ಜಗಪತಿ ಬಾಬು, ಭೂಮಿಕಾ ಚಾವ್ಲಾ, ಸಿದ್ಧಾರ್ಥ್ ನಿಗಮ್, ಜಸ್ಸಿ ಗಿಲ್, ವಿನಾಲಿ ಭಟ್ನಾಗರ್, ಶೆಹನಾಜ್ ಗಿಲ್ ಮತ್ತು ಪಲಕ್ ತಿವಾರಿ ನಟಿಸಿದ್ದಾರೆ. ಏಪ್ರಿಲ್ 21 ರಂದು ಸಿನಿಮಾ ಬಿಡುಗಡೆಯಾಯಿತು.