ಸಾಹಿತಿ ಕೆ.ಪಿ.ಪೂರ್ಣಚಂದ್ರ ತೇಜಸ್ವಿ ಅವರ ಸಣ್ಣ ಕಥಾಧರಿತ ಚಿತ್ರ 'ಡೇರ್ ಡೆವಿಲ್ ಮುಸ್ತಾಫಾ' ಕನ್ನಡ ಚಿತ್ರರಂಗದಲ್ಲಿ ಸೌಂಡ್ ಮಾಡುತ್ತಿದೆ. ತೇಜಸ್ವಿ ಕಥೆಗಳನ್ನು ಓದಿದ ತಂಡದವರೇ ಸೇರಿಕೊಂಡು ನಿರ್ಮಾಣ ಮಾಡಿದ ಚಿತ್ರ ಇದಾಗಿದ್ದು ಸಿನಿಮಾ ರಸಿಕರ ಮನಸ್ಸು ಸೆಳೆಯುತ್ತಿದೆ. ಈ ಹಿಂದೆ 'ಫಟಿಂಗ' ಎಂಬ ಜನಪ್ರಿಯ ಕಿರುಚಿತ್ರ ನಿರ್ದೇಶನ ಮಾಡಿದ್ದ ಶಶಾಂಕ್ ಸೋಗಾಲ್ 'ಡೇರ್ ಡೆವಿಲ್ ಮುಸ್ತಾಫಾ' ಮೂಲಕ ಇದೀಗ ಪೂರ್ಣ ಪ್ರಮಾಣವಾಗಿ ನಿರ್ದೇಶಕರಾಗಿ ಹೊರಹೊಮ್ಮಿದ್ದಾರೆ.
ಇಂದು ರಾಜ್ಯಾದ್ಯಂತ 80ಕ್ಕೂ ಚಿತ್ರಮಂದಿರಗಳಲ್ಲಿ ಸಿನಿಮಾ ತೆರೆಕಂಡಿದ್ದು ನಟ, ಡಾಲಿ ಧನಂಜಯ್ ಚಿತ್ರಕ್ಕೆ ಬೆಂಬಲವಾಗಿ ನಿಂತಿದ್ದಾರೆ. ತೇಜಸ್ವಿ ಸಾಹಿತ್ಯ ಪ್ರೇಮಿಯಾಗಿರುವ ಧನಂಜಯ್ ಈ ಚಿತ್ರವನ್ನು ಡಾಲಿ ಪಿಕ್ಚರ್ಸ್ ವತಿಯಿಂದ ಪ್ರೆಸೆಂಟ್ ಮಾಡುತ್ತಿದ್ದು, ಕೆಆರ್ಜಿ ಸ್ಟುಡಿಯೊಸ್ ರಾಜ್ಯದೆಲ್ಲೆಡೆ ವಿತರಿಸುವ ಜವಾಬ್ದಾರಿ ಹೊತ್ತುಕೊಂಡಿದೆ. ಸಿನಿಮಾ ನಿರ್ಮಾಣದಲ್ಲಿ ತೇಜಸ್ವಿ ಅವರ ದೊಡ್ಡ ಅಭಿಮಾನಿ ಬಳಗವೇ ಇರುವುದು ವಿಶೇಷ.
'ಡೇರ್ ಡೆವಿಲ್ ಮುಸ್ತಾಫಾ' ಮಾಗಡಿ ರಸ್ತೆಯಲ್ಲಿರುವ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆ ಆಗಿದ್ದು ಚಿತ್ರಮಂದಿರದ ಮುಂದೆ ತೇಜಸ್ವಿಯವರ ಕಟೌಟ್ ನಿಲ್ಲಿಸಲಾಗಿದೆ. ನಟ-ನಟಿಯರ ಕಟೌಟ್ಗಳು ಮಾತ್ರ ಕಾಣಿಸಿಕೊಳ್ಳುತ್ತಿದ್ದ ಜಾಗದಲ್ಲಿ ಇದೇ ಮೊದಲ ಬಾರಿಗೆ ಸಾಹಿತಿಯೊಬ್ಬರ ಕಟೌಟ್ ರಾರಾಜಿಸುತ್ತಿರುವುದು ವಿಶೇಷವಾಗಿದೆ.
ಈ ಖುಷಿಯಲ್ಲಿರುವ ನಟ ಧನಂಜಯ್ 'ಡೇರ್ ಡೆವಿಲ್ ಮುಸ್ತಾಫಾ' ಚಿತ್ರದಲ್ಲಿ ನಟಿಸಿರುವ ಯುವ ಕಲಾವಿದರಾದ ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್ ಜೊತೆಗೂಡಿ ಡ್ಯಾನ್ಸ್ ಮಾಡಿದ್ದಾರೆ. ಕನ್ನಡ ಚಿತ್ರರಸಿಕರನ್ನು ಪೂಚಂತೇ ಪ್ರಪಂಚಕ್ಕೆ ಕರೆದುಕೊಂಡು ಹೋಗಿರುವ, ಹೊಸ ಉತ್ಸಾಹಿ ಯುವಕರೇ ಕೂಡಿರುವ ಇಡೀ ಚಿತ್ರ ತಂಡ ಅತ್ಯಂತ ಫ್ಯಾಷನೆಟೇಡ್ ಆಗಿ ಕೆಲಸ ಮಾಡಿರುವುದು ಮತ್ತೊಂದು ಗಮನಾರ್ಹ ಸಂಗತಿ.
ರಾಹುಲ್ ರಾಯ್ ಛಾಯಾಗ್ರಹಣ, ಶಶಾಂಕ್ ಸೋಗಾಲ್, ಸಂಪತ್ ಸಿರಿಮನೆ, ಡಾಲಿ ಧನಂಜಯ್ ಸಾಹಿತ್ಯದ ಹಾಡುಗಳಿಗೆ ನವನೀತ್ ಶ್ಯಾಮ್ ಸಂಗೀತವಿದೆ. ಶಿಶಿರ್ ಬೈಕಾಡಿ, ಆದಿತ್ಯ ಅಶ್ರೀ, ಅಭಯ್, ಸುಪ್ರೀತ್ ಭಾರದ್ವಾಜ್, ಆಶಿತ್, ಶ್ರೀವತ್ಸ, ಪ್ರೇರಣಾ, ಎಂ.ಎಸ್. ಉಮೇಶ್, ಮಂಡ್ಯ ರಮೇಶ್, ಮೈಸೂರ್ ಆನಂದ್, ಸುಂದರ್ ವೀಣಾ, ನಾಗಭೂಷಣ್, ಪೂರ್ಣಚಂದ್ರ ಮೈಸೂರು ಸೇರಿ ಅನೇಕ ಕಲಾವಿದರು ಭಾಗವಾಗಿದ್ದಾರೆ. ಟೀಸರ್, ಟ್ರೇಲರ್ ಮೂಲಕ ಚಿತ್ರ ಎಲ್ಲರ ಗಮನವನ್ನು ತನ್ನತ್ತ ಸೆಳೆದಿತ್ತು.
ಇದನ್ನೂ ಓದಿ: ನಿಶ್ಚಿತಾರ್ಥದ ಕಾರ್ಯಕ್ರಮದ ವೇಳೆ ತಂದೆ ಕಣ್ಣೀರು ಒರೆಸಿಕೊಳ್ಳುತ್ತಿರುವ ಚಿತ್ರ ಹಂಚಿಕೊಂಡ ಪರಿಣಿತಿ ಚೋಪ್ರಾ..