ಕನ್ನಡ ಚಿತ್ರರಂಗದಲ್ಲಿ 'ಜೇಮ್ಸ್' ಹಾಗೂ 'ಕೆಜಿಎಫ್ ಚಾಪ್ಟರ್ 2' ಸಿನಿಮಾಗಳ ಬಳಿಕ ಚಿತ್ರಮಂದಿರಗಳಿಗೆ ಪ್ರೇಕ್ಷಕರು ಬರುತ್ತಿಲ್ಲವೆಂಬ ಮಾತುಗಳು ಗಾಂಧಿನಗರದಲ್ಲಿ ಕೇಳಿ ಬಂದಿದ್ದವು. ಆದರೆ ಒಳ್ಳೆಯ ಕಥೆ, ವಿಭಿನ್ನ ಕಾನ್ಸೆಪ್ಟ್ ಇರುವ ಸಿನಿಮಾ ಬಂದರೆ ಕನ್ನಡ ಸಿನಿಪ್ರಿಯರು ಕೈ ಹಿಡಿಯುತ್ತಾರೆ ಎಂಬ ಮಾತು ಮತ್ತೊಮ್ಮೆ ಸಾಬೀತಾಗಿದೆ. ರಕ್ಷಿತ್ ಶೆಟ್ಟಿ ಅಭಿನಯದ '777 ಚಾರ್ಲಿ' ಚಿತ್ರ ನೋಡುಗರನ್ನು ಚಿತ್ರಮಂದಿರಗಳತ್ತ ಸೆಳೆಯುತ್ತಿದೆ.
ಕಳೆದ ಶುಕ್ರವಾರ, ಜೂನ್ 10ರಂದು ವಿಶ್ವಾದ್ಯಂತ '777 ಚಾರ್ಲಿ' ಬಿಡುಗಡೆಯಾಗಿ ಎಲ್ಲೆಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಒಬ್ಬ ಮನುಷ್ಯನ ಬಾಳಲ್ಲಿ ಚಾರ್ಲಿ ಎಂಬ ನಾಯಿಯ ಆಗಮನದಿಂದ ಏನೆಲ್ಲ ಬದಲಾವಣೆ ಆಗುತ್ತೆ ಎಂಬುದು ಚಿತ್ರದ ಕಥೆ. ಕೆಲಸ, ಮನೆ, ಬಿಯರ್, ಇಡ್ಲಿ ಅಂತಾ ಇರುವ ಧರ್ಮ ಪಾತ್ರಧಾರಿ ರಕ್ಷಿತ್ ಶೆಟ್ಟಿ ಬಾಳಲ್ಲಿ ಚಾರ್ಲಿ ಎಂಬ ಶ್ವಾನ ನಗಿಸುವುದರ ಜೊತೆಗೆ ಸಂಬಂಧಗಳ ಮೌಲ್ಯ ತಿಳಿಸಿದೆ. ಅಷ್ಟೇ ಏಕೆ? ನಟ ರಕ್ಷಿತ್ ಶೆಟ್ಟಿ ಈ ಸಿನಿಮಾಕ್ಕಾಗಿ ಮಾಡಿದ್ದ ಸಾಲವನ್ನೂ ತೀರಿಸಿದ್ದಲ್ಲದೆ, ಕೋಟ್ಯಂತರ ರೂಪಾಯಿ ಲಾಭ ತಂದು ಕೊಟ್ಟಿದೆಯಂತೆ..
ಬಿಡುಗಡೆಗೂ ಮುನ್ನವೇ ಭಾರತದ 21 ನಗರಗಳಲ್ಲಿ ಪೇಯ್ಡ್ ಪ್ರಿ ವಿತರಣೆ ಮೂಲಕ ಚಿತ್ರದ ಬಗ್ಗೆ ದೊಡ್ಡಮಟ್ಟದ ಹೈಪ್ ಶುರುವಾಗಿತ್ತು. ಇದೇ ಉತ್ಸಾಹದಲ್ಲಿ ಚಿತ್ರಮಂದಿರಗಳಿಗೆ ಲಗ್ಗೆ ಇಟ್ಟ ಚಾರ್ಲಿ ಸಿನಿಮಾ ಒಂದೇ ವಾರಕ್ಕೆ ವಿಶ್ವಾದ್ಯಂತ ₹40 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಅಂತಾ ಗಾಂಧಿನಗರದ ಸಿನಿ ಪಂಡಿತರು ಹೇಳುತ್ತಿದ್ದಾರೆ.
ಕರ್ನಾಟಕದಲ್ಲಿ 350ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆದ 777 ಚಾರ್ಲಿ, ಒಂದು ವಾರಕ್ಕೆ ₹25 ಕೋಟಿ ಬಾಚಿಕೊಂಡಿದೆಯಂತೆ. ತೆಲುಗು, ತಮಿಳು, ಮಲಯಾಳಂ ಹಾಗೂ ಹಿಂದಿ ಭಾಷೆಯಲ್ಲಿ ಒಟ್ಟು 12 ಕೋಟಿ ರೂಪಾಯಿ ಕಲೆಕ್ಷನ್ ಆಗಿದೆ. ಜೊತೆಗೆ ಅಮೆರಿಕ ಹಾಗೂ ಆಸ್ಟ್ರೇಲಿಯಾ ಸೇರಿ ವಿದೇಶಗಳಲ್ಲಿ ಬರೋಬ್ಬರಿ 3 ಕೋಟಿ ರೂಪಾಯಿ ಕೊಳ್ಳೆ ಹೊಡೆದಿದೆ ಎನ್ನಲಾಗಿದೆ.
ರಕ್ಷಿತ್ ಶೆಟ್ಟಿ ಈ ಸಿನಿಮಾ ಚಿತ್ರೀಕರಣ ಸಂದರ್ಭದಲ್ಲಿ ಹಣದ ಮುಗ್ಗಟ್ಟು ಉಂಟಾದಾಗ 20 ಕೋಟಿ ರೂ.ಗೂ ಹೆಚ್ಚು ಸಾಲ ಮಾಡಿದ್ದರಂತೆ. ಆದರೆ ಸಿನಿಮಾ ಮೇಲೆ ರಕ್ಷಿತ್ಗೆ ನಂಬಿಕೆ ಇತ್ತು. ಅದರಂತೆ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ಕೋಟ್ಯಂತರ ರೂ. ಗಳಿಸಿ, ರಕ್ಷಿತ್ ಶೆಟ್ಟಿ ಸಾಲ ತೀರಿಸಿದೆಯಂತೆ.
ಈ ಸಿನಿಮಾದ ಟಿವಿ ಹಾಗೂ ಡಿಜಿಟಲ್ ಹಕ್ಕುಗಳು 20 ಕೋಟಿ ರೂ.ಗೆ ಮಾರಾಟವಾಗಿವೆ. ಥಿಯೇಟರ್ನಿಂದ ಬಂದ 40 ಕೋಟಿ ರೂ ಹಾಗೂ ಟಿವಿ ಮತ್ತು ಡಿಜಿಟಲ್ ರೈಟ್ಸ್ 20 ಕೋಟಿ ರೂ ಸೇರಿ ಒಟ್ಟು ಆದಾಯ 60 ಕೋಟಿ ರೂಪಾಯಿ ಎನ್ನಲಾಗುತ್ತಿದೆ. ಈ ಎಲ್ಲ ಲೆಕ್ಕಾಚಾರದ ಮೇಲೆ ರಕ್ಷಿತ್, ಥಿಯೇಟರ್ ಬಾಡಿಗೆ ಹಾಗೂ ಪ್ರಮೋಷನ್ ಖರ್ಚೆಲ್ಲವನ್ನೂ ಲೆಕ್ಕಹಾಕಿದರೂ 20ರಿಂದ 25 ಕೋಟಿ ಲಾಭವಾಗಿದೆ. ಸದ್ಯ ಚಿತ್ರದ ಕ್ರೇಜ್ ಮುಂದುವರೆದಿದ್ದು, ಇನ್ನಷ್ಟು ಗಳಿಸಲಿದೆ ಎಂಬುದು ಸಿನಿ ಪಂಡಿತರ ಮಾತು.
ಇದನ್ನೂ ಓದಿ: ಧರಣಿ ಮಂಡಲ ಮಧ್ಯದೊಳಗೆ ಸಿನಿಮಾ ಟೀಸರ್ ರಿಲೀಸ್.. ಬೋಲ್ಡ್ ಲುಕ್ನಲ್ಲಿ ಐಶಾನಿ ಶೆಟ್ಟಿ