ಉಡುಪಿ: ಕರ್ನಾಟಕ ವಿದಾನಸಭೆ ಚುನಾಚಣೆ ಹಿನ್ನೆಲೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೇವಸ್ಥಾನಗಳಿಗೆ ಭೇಟಿ ಕೊಡುತ್ತಿದ್ದಾರೆ. ಕರಾವಳಿಯಲ್ಲಿ ಪ್ರವಾಸ ಕೈಗೊಂಡಿರುವ ಸಿಎಂ ಬೊಮ್ಮಾಯಿ, ಇಂದು ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ ಭೇಟಿ ಕೊಟ್ಟಿದ್ದಾರೆ. ಸಿಎಂ ಬೊಮ್ಮಾಯಿ ದಂಪತಿ ಮೂಕಾಂಬಿಕೆ ದೇವಿ ದರ್ಶನ ಪಡೆದದರು. ದೇವಸ್ಥಾನದಲ್ಲಿ ನಟ ರಿಷಬ್ ಶೆಟ್ಟಿ ಸಹ ಉಪಸ್ಥಿತರಿದ್ದರು. ಸಿಎಂ ಕುಟುಂಬದ ಜೊತೆಯೇ ಕಾಂತಾರ ಸ್ಟಾರ್ ದೇವರ ದರ್ಶನ ಪಡೆದರು.
ಕೊಲ್ಲೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ದೇವಸ್ಥಾನದಲ್ಲಿ ರಿಷಬ್ ಶೆಟ್ಟಿ ಅವರು ಸಿಕ್ಕಿದ್ದು ಕೋ ಇನ್ಸಿಡೆಂಟ್. ನಾನು ಬರುವ ಮೊದಲೇ ರಿಷಬ್ ಶೆಟ್ಟಿ ಅವರು ದೇವಸ್ಥಾನದಲ್ಲಿದ್ದರು. ಬಳಿಕ ನಾವು ಜೊತೆಗೆ ಹೋಗಿ ದೇವರಿಗೆ ಪೂಜೆ ಸಲ್ಲಿಸಿದ್ದೇವೆ. ಯಾವುದು ಕೂಡ ಪೂರ್ವ ನಿರ್ಧರಿತ ಅಲ್ಲ. ನಮ್ಮ ಸಿದ್ಧಾಂತಕ್ಕೂ ಅವರ ಸಿದ್ಧಾಂತಕ್ಕೂ ಬಹಳ ಸಾಮ್ಯತೆ ಇದೆ. ಈ ಹಿಂದೆ ಕೂಡ ರಿಷಬ್ ಅವರು ನಮ್ಮ ಸಿದ್ಧಾಂತವನ್ನು ಪ್ರಬಲವಾಗಿ ಪ್ರತಿಪಾದನೆ ಮಾಡಿದ್ದಾರೆ. ಅವರ ವಿಚಾರಗಳು ಹಾಗೆ ಇವೆ. ಅದನ್ನು ಆಗಾಗ್ಗೆ ತೋರಿಸಿದ್ದಾರೆ ಎಂದರು.
ನಟ ರಿಷಬ್ ಶೆಟ್ಟಿ ಅವರು ಕೊಲ್ಲೂರು ಮೂಕಾಂಬಿಕಾ ದೇಗುಲದ ಒಳಗೆ ಇದ್ದದ್ದು ನೋಡಿ ನನಗೆ ಆಶ್ಚರ್ಯ ಆಯ್ತು. ಬಿಜೆಪಿ ನಾಯಕತ್ವದ ಬಗ್ಗೆ ಅವರು ಒಲವಿರುವ ಮಾತುಗಳಾಡಿದರು. ಈವರೆಗೆ ಯಾವುದೇ ಮಾತುಕತೆಗಳು ನಮ್ಮ ನಡುವೆ ನಡೆದಿಲ್ಲ. ಮುಂದೆ ಮೂಕಾಂಬಿಕೆ ಏನು ಆಶೀರ್ವಾದ ಕೊಡುತ್ತಾಳೆ ಅನ್ನೋದನ್ನು ನೋಡೋಣ ಎಂದು ತಿಳಿಸಿದ್ರು.
ಮಂಗಳೂರಿನಿಂದ ಹೆಲಿಕಾಪ್ಟರ್ ಮೂಲಕ ಹೊರಟಿ ಸಿಎಂ ಬೊಮ್ಮಾಯಿ ಉಡುಪಿ ಜಿಲ್ಲೆಯ ಬೈಂದೂರಿನ ಅರಶಿರೂರಿನಲ್ಲಿ ಲ್ಯಾಂಡ್ ಅದರು. ಬೈಂದೂರು ತಾಲೂಕಿನ ಕೊಲ್ಲೂರು ಶ್ರೀ ಮೂಕಾಂಬಿಕಾ ಕ್ಷೇತ್ರಕ್ಕೆ ಬೇಟಿ ಕೊಟ್ಟ ವೇಳೆ ರಿಷಬ್ ಶೆಟ್ಟಿ ಅವರೂ ಉಪಸ್ಥಿತರಿದ್ದರು.
ಕೊಲ್ಲೂರು ಮೂಕಾಂಬಿಕಾ ಸನ್ನಿಧಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿ, ಕೊಲ್ಲೂರು ದೇವಿಯಲ್ಲಿ ಕನ್ನಡ ಜನರ ಸುಭೀಕ್ಷೆ ಬೇಡಿಕೊಂಡೆ. ನವ ನಾಡು ಜನರಿಗೆ ಒಳ್ಳೆಯದಾಗಲೆಂದು ಕೇಳಿಕೊಂಡೆ ಎಂದು ತಿಳಿಸಿದರು.
ಟಿಕೆಟ್ ವಂಚಿತರಿಗೆ ಕರೆಮಾಡದ ಸಿಎಂ?: ಶಾಸಕ ರಘುಪತಿ ಭಟ್, ಸುಕುಮಾರ ಶೆಟ್ಟಿ, ಲಾಲಾಜಿ ಆರ್ ಮೆಂಡನ್ ಟಿಕೆಟ್ ವಂಚಿತ ಉಡುಪಿಯ ಶಾಸಕರು. ಶಾಸಕ ರಘುಪತಿ ಭಟ್ ಬೊಮ್ಮಾಯಿ ಅವರ ಆತ್ಮೀಯರಾಗಿ ಗುರುತಿಸಿಕೊಂಡಿದ್ದರು. ಉಡುಪಿಗೆ ಬಂದ ಸಂದರ್ಭಗಳಲ್ಲಿ ಶಾಸಕರ ಹೋಟೆಲ್ನಲ್ಲಿ ತಂಗುತ್ತಿದ್ದರು. ಈ ಬಾರಿ ಉಡುಪಿಗೆ ಶಾಸಕರಿಗೆ ಸಿಎಂ ಕರೆ ಮಾಡಿಲ್ಲ. ಶಾಸಕ ಭಟ್ ಅವರು ಪಕ್ಷ ತಮ್ಮನ್ನು ನಡೆಸಿಕೊಂಡ ಬಗ್ಗೆ ಬೇಸರ ವ್ಯಕ್ತಪಡಿಸಿದ್ದರು. ಯಾರೂ ಕೂಡ ನನಗೆ ಕರೆ ಮಾಡಿಲ್ಲ ಎಂದು ತಿಳಿಸಿದ್ದರು. ಇದೇ ಮೊದಲ ಬಾರಿಗೆ ಸಿಎಂ ಉಡುಪಿಗೆ ಬಂದಾಗ ಎಲ್ಲಾ ಶಾಸಕರು ಗೈರಾಗಿದ್ದಾರೆ. ಶಾಸಕ ಸುನಿಲ್ ಕುಮಾರ್ ಚುನಾವಣೆ ಚಟುವಟಿಕೆಯಲ್ಲಿ ನಿರತರಾಗಿದ್ದು, ಸಿಎಂಗೆ ಕೋಟ ಶ್ರೀನಿವಾಸ ಪೂಜಾರಿ, ಪ್ರಮೋದ್ ಮಧ್ವರಾಜ್ ಸಾಥ್ ನೀಡಿದರು.
ಇನ್ನೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ಕ್ಷೇತ್ರದ ಶಾಸಕ ಎಂಪಿ ಕುಮಾರಸ್ವಾಮಿ ರಾಜೀನಾಮೆ ವಿಚಾರವಾಗಿ ಪ್ರತಿಕ್ರಿಯಿಸಿ, ಈಗಾಗಲೇ ಈ ಬಗ್ಗೆ ಚರ್ಚೆ ಮಾಡಿ ತೀರ್ಮಾನ ಕೈಗೊಂಡದ್ದು. ಸರ್ವೇ ರಿಪೋರ್ಟ್ ಆಧಾರದಲ್ಲಿ ಹೀಗೆ ಆಗಿದೆ. ಅವರೊಂದಿಗೆ ಮಾತನಾಡಿ ಉಳಿಸಿಕೊಳ್ಳುವ ಪ್ರಯತ್ನ ಮಾಡುತ್ತೇನೆ. ಮೂರು ಬಾರಿ ಶಾಸಕರಾಗಿದ್ದವರು, ಸಂಯಮದಿಂದ ತೀರ್ಮಾನ ಮಾಡೋದು ಒಳ್ಳೆಯದು ಎಂದರು.
ಇದನ್ನೂ ಓದಿ: ಶಾಕುಂತಲಂ ಬಿಡುಗಡೆಗೆ ಕ್ಷಣಗಣನೆ: ವ್ಯಾಪಕ ಪ್ರಚಾರ ಬೆನ್ನಲ್ಲೇ ನಟಿ ಸಮಂತಾ ಅಸ್ವಸ್ಥ
ನಂತರ ಹೆಲಿಕಾಪ್ಟರ್ ಟೇಕ್ ಆಫ್ ಆಗುವಾಗ ಹೆಲಿಪ್ಯಾಡ್ ಬಳಿ ಬೆಂಕಿ ಕಾಣಿಸಿಕೊಂಡಿತ್ತು. ಅದೃಷ್ಟವಶಾತ್ ಭಾರಿ ಅವಘಡ ತಪ್ಪಿದೆ. ಬೈಂದೂರು ಅಗ್ನಿಶಾಮಕ ದಳದವರಿಂದ ಕ್ಷೀಪ್ರ ಕಾರ್ಯಾಚರಣೆ ನಡೆಯಿತು.
ಇದನ್ನೂ ಓದಿ: ಸಿನಿಪ್ರಿಯರಿಗೆ ಗುಡ್ನ್ಯೂಸ್: ಪ್ರಶಾಂತ್ ನೀಲ್ - ಪ್ರಭಾಸ್ ಕಾಂಬೋದಲ್ಲಿ ಮತ್ತೊಂದು ಸಿನಿಮಾ