ದೀರ್ಘ ಕಾಲ ಪ್ರಸಾರ ಕಂಡ ಟೆಲಿವಿಶನ್ ಸೀರಿಸ್ 'ಸಿಐಡಿ'ಯಲ್ಲಿ ಫ್ರೆಡ್ರಿಕ್ಸ್ (Fredericks) ಪಾತ್ರ ನಿರ್ವಹಿಸಿದ್ದ ನಟ ದಿನೇಶ್ ಫಡ್ನಿಸ್ (Dinesh Phadnis) ಕೊನೆಯುಸಿರೆಳೆದಿದ್ದಾರೆ. 57ರ ಹರೆಯದ ನಟ ಸೋಮವಾರ ಮಧ್ಯರಾತ್ರಿ ಮುಂಬೈನಲ್ಲಿ ನಿಧನರಾದರು. ಅನಾರೋಗ್ಯದ ಹಿನ್ನೆಲೆ ಈ ಸಾವು ಸಂಭವಿಸಿದೆ.
ಲಿವರ್ ಡ್ಯಾಮೇಜ್: ಮೂರ್ನಾಲ್ಕು ದಿನಗಳಿಂದ ವೆಂಟಿಲೇಟರ್ನಲ್ಲಿದ್ದರು. ತೀವ್ರ ಯಕೃತ್ತು ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಡಿಸೆಂಬರ್ 1ರಂದು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಸೋಮವಾರ ಮಧ್ಯರಾತ್ರಿ ಕೊನೆಯುಸಿರೆಳೆದಿದ್ದು, ಅಭಿಮಾನಿಗಳು ಸೇರಿದಂತೆ ಚಿತ್ರರಂಗದವರು ಸಂತಾಪ ಸೂಚಿಸಿದ್ದಾರೆ.
57ರ ಹರೆಯದ ನಟನನ್ನು ಮುಂಬೈನ ತುಂಗಾ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಈ ಹಿಂದೆ ವರದಿಯಾಗಿತ್ತು. ಅಲ್ಲದೇ, ಅವರು ಹೃದಯಾಘಾತದಿಂದ ಬಳಲುತ್ತಿದ್ದರು ಎಂದು ಊಹಿಸಲಾಗಿತ್ತು. ಆದರೆ, ಅವರ ಸಹ ನಟ ದಯಾನಂದ್ ಶೆಟ್ಟಿ ನಿಖರ ಮಾಹಿತಿ ನೀಡಿ ಊಹಾಪೋಹಗಳಿಗೆ ತೆರೆ ಎಳೆದಿದ್ದರು. ನಟ ದಿನೇಶ್ ಫಡ್ನಿಸ್ ಅವರು ಯಕೃತ್ತಿನ ಸಮಸ್ಯೆಯಿಂದ ನಿಧನರಾಗಿದ್ದಾರೆ ಎಂದು ದಯಾನಂದ್ ಶೆಟ್ಟಿ ಸ್ಪಷ್ಟಪಡಿಸಿದರು. ಸಿಐಡಿಯಲ್ಲಿ ಫಡ್ನಿಸ್ ಮತ್ತು ಶೆಟ್ಟಿ ತೆರೆ ಹಂಚಿಕೊಂಡಿದ್ದರು. ದಯಾನಂದ್ ಅವರು ನಟನ ಸ್ಥಿತಿಯ ಬಗ್ಗೆ ಅಪ್ಡೇಟ್ಸ್ ಕೊಡುತ್ತಿದ್ದರು. 'ಸಿಐಡಿ'ಯ ಇಡೀ ತಂಡ ಸದ್ಯ ಫಡ್ನಿಸ್ ಮನೆಯಲ್ಲಿದೆ. ದೌಲತ್ ನಗರದ ಸ್ಮಶಾನದಲ್ಲಿಂದು ನಟನ ಅಂತಿಮ ವಿಧಿ ವಿಧಾನಗಳು ನಡೆಯಲಿವೆ.
ಸಿಐಡಿ 1998 ರಿಂದ 2018ರ ವರೆಗೆ ಅದ್ಭುತ ಪ್ರಸಾರ ಕಂಡಿದೆ. ಸುದೀರ್ಘ ಅವಧಿ ಪ್ರಸಾರ ಕಂಡ ಭಾರತೀಯ ದೂರದರ್ಶನ ಕಾರ್ಯಕ್ರಮಗಳಲ್ಲೊಂದು. ಪ್ರೇಕ್ಷಕರು ಫ್ರೆಡ್ರಿಕ್ಸ್ ಪಾತ್ರದ ಕಾಮಿಡಿ ಮತ್ತು ಇತರ ಪಾತ್ರವರ್ಗಗಳೊಂದಿಗೆ, ಅದರಲ್ಲೂ ವಿಶೇಷವಾಗಿ ಎಸಿಪಿ ಪ್ರದ್ಯುಮನ್‌ರೊಂದಿಗಿನ ಸಂಭಾಷಣಾ ಶೈಲಿ ಹಿನ್ನೆಲೆ ಬಹಳ ಮೆಚ್ಚುಗೆ ಸೂಚಿಸಿದ್ದರು.
ಇದನ್ನೂ ಓದಿ: ಡಂಕಿ ಟ್ರೇಲರ್: 'ಎಸ್ಆರ್ಕೆಯ 3rd ಬ್ಲಾಕ್ಬಸ್ಟರ್' ಅಂತಿದ್ದಾರೆ ಫ್ಯಾನ್ಸ್
ಕಳೆದ ವಾರ ನಟ ದಿನೇಶ್ ಫಡ್ನಿಸ್ ಅವರಿಗೆ ಹೃದಯಾಘಾತವಾಗಿದೆ ಎಂಬ ವದಂತಿಗಳು ಹಬ್ಬಿದ್ದವು. ಈ ಊಹಾಪೋಹಗಳನ್ನು ನಿರಾಕರಿಸಿದ್ದ ದಯಾನಂದ್ ಶೆಟ್ಟಿ, ದಿನೇಶ್ ಅವರ ಲಿವರ್ ಡ್ಯಾಮೇಜ್ ಆಗಿದೆ ಎಂದು ಸ್ಪಷ್ಟ ಮಾಹಿತಿ ಹಂಚಿಕೊಂಡಿದ್ದರು. ಸಿಐಡಿಯಲ್ಲಿ ದಯಾ ಪಾತ್ರವನ್ನು ನಿರ್ವಹಿಸಿದ್ದ ದಯಾನಂದ್ ಶೆಟ್ಟಿ, ''ಹೃದಯಾಘಾತವಲ್ಲ, ಅವರು ಯಕೃತ್ತಿನ ಹಾನಿಯಿಂದ ಬಳಲುತ್ತಿದ್ದಾರೆ, ಅವರನ್ನು ಮಲಾಡ್‌ನ ತುಂಗಾ ಆಸ್ಪತ್ರೆಗೆ ಕರೆದೊಯ್ಯಲಾಗಿದೆ" ಎಂದು ತಿಳಿಸಿದ್ದರು.
ಇದನ್ನೂ ಓದಿ: ಸೋಮವಾರವೂ ಭರ್ಜರಿ ಕಲೆಕ್ಷನ್: ಅನಿಮಲ್ ಬಾಕ್ಸ್ ಆಫೀಸ್ ಪ್ರಯಾಣ ಅತ್ಯುತ್ತಮ
ಮತ್ತಷ್ಟು ಮಾಹಿತಿ ಕೊಟ್ಟಿದ್ದ ದಯಾನಂದ್ ಶೆಟ್ಟಿ, ''ದಿನೇಶ್ ಅವರು ಮತ್ತೊಂದು ಅನಾರೋಗ್ಯ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು, ಔಷಧಗಳು ಅವರ ಯಕೃತ್ತಿನ ಮೇಲೆ ಪರಿಣಾಮ ಬೀರಿತು, ಹಾಗಾಗಿಯೇ ಯಾವಾಗಲೂ ಔಷಧಗಳನ್ನು ಅತ್ಯಂತ ಎಚ್ಚರಿಕೆಯಿಂದ ತೆಗೆದುಕೊಳ್ಳುವಂತೆ ಸಲಹೆ ನೀಡಲಾಗುತ್ತದೆ. ಒಂದು ಕಾಯಿಲೆಗೆ ಔಷಧ ತೆಗೆದುಕೊಳ್ಳುವಾಗ ಮತ್ತೊಂದು ಗಂಭೀರ ಕಾಯಿಲೆ ಎದುರಾಗಬಹುದು ಎಂದು ಯಾರೂ ಅಂದುಕೊಂಡಿರುವುದಿಲ್ಲ. ಹಾಗಾಗಿ ಎಚ್ಚರಿಕೆ ವಹಿಸಬೇಕು" ಎಂದು ತಿಳಿಸಿದ್ದರು.