ಕಡಿಮೆ ಅವಧಿಯಲ್ಲೇ ಕನ್ನಡಿಗರ ಮನಸ್ಸು ಗೆದ್ದ ನಟ ಚಿರಂಜೀವಿ ಸರ್ಜಾ. ಚಿತ್ರರಂಗದಲ್ಲಿ ಮಾಸ್ ಇಮೇಜ್ ಕ್ರಿಯೇಟ್ ಮಾಡಿಕೊಂಡಿದ್ದ ಇವರ ಅಕಾಲಿಕ ನಿಧನ ಕರುನಾಡ ಜನರಿಗೆ ಕಣ್ಣೀರು ತರಿಸಿತ್ತು. ಚಿರು ತಮ್ಮ ನಿಧನಕ್ಕೂ ಮುನ್ನ 'ರಾಜಮಾರ್ತಾಂಡ' ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದರು. ಈ ಸಿನಿಮಾ ಇದೇ ಅಕ್ಟೋಬರ್ 6ರಂದು ಚಿರು ಸಹೋದರ, ನಟ ಧ್ರುವ ಸರ್ಜಾ ಹುಟ್ಟುಹಬ್ಬದಂದೇ ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಕಳೆದ ಮೂರು ವರ್ಷಗಳಿಂದ ಧ್ರುವ ಸರ್ಜಾ ಅಣ್ಣನ ಅಗಲಿಕೆಯಿಂದ ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡಿರಲಿಲ್ಲ. ಆದರೆ ಈ ಬಾರಿ ಅಣ್ಣನ ಸಿನಿಮಾವನ್ನು ಅದೇ ದಿನ ತೆರೆಗೆ ತರಲು ನಿರ್ಧರಿಸಿದ್ದಾರೆ. ಜೊತೆಗೆ 'ರಾಜಮಾರ್ತಾಂಡ' ಫಸ್ಟ್ ಶೋವನ್ನು ಅವರು ತಮ್ಮ ಅಭಿಮಾನಿಗಳೊಂದಿಗೆ ವೀಕ್ಷಿಸಲಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಹಂಚಿಕೊಂಡಿರುವ ನಟ, "ನನ್ನ ಜೊತೆ 'ರಾಜಮಾರ್ತಾಂಡ' ಚಿತ್ರ ನೋಡಲು ಬನ್ನಿ. ಇದೇ ನನ್ನ ಹುಟ್ಟುಹಬ್ಬಕ್ಕೆ ನಿಮಗೆ ಉಡುಗೊರೆ" ಎಂದು ಹೇಳಿದ್ದಾರೆ.
'ರಾಜಮಾರ್ತಾಂಡ' ಸಿನಿಮಾದ ಚಿತ್ರೀಕರಣ ಚಿರು ನಿಧನಕ್ಕೂ ಮುನ್ನವೇ ಪೂರ್ಣಗೊಂಡಿತ್ತು. ಆದರೆ ಡಬ್ಬಿಂಗ್ ಮಾತ್ರ ಬಾಕಿಯಿತ್ತು. ಚಿರಂಜೀವಿ ಪಾತ್ರಕ್ಕೆ ಸಹೋದರ ಧ್ರುವ ಸರ್ಜಾ ಡಬ್ಬಿಂಗ್ ಮಾಡಿದ್ದಾರೆ. ಇದರ ಜೊತೆಗೆ ರಾಜಮಾರ್ತಾಂಡದಲ್ಲಿ ನಟ ದರ್ಶನ್ ಅವರ ಧ್ವನಿ ಸಹ ಕೇಳಬಹುದು. ಇದು ಈ ಚಿತ್ರಕ್ಕೆ ದೊಡ್ಡ ಮಟ್ಟದ ಪ್ಲಸ್ ಪಾಯಿಂಟ್ ಅಂತಲೇ ಹೇಳಬಹುದು. ಚಿತ್ರದ ಟೀಸರ್ ಈಗಾಗಲೇ ರಿಲೀಸ್ ಆಗಿದ್ದು, ಇದು ರಾಜಮನೆತನದ ಕಥೆ ಅನ್ನೋದು ಗೊತ್ತಾಗುತ್ತೆ.
ಇದನ್ನೂ ಓದಿ: ಗಣೇಶ ಹಬ್ಬದ ದಿನದಂದೇ ಧ್ರುವ ಸರ್ಜಾ ಮನೆಗೆ ಬಂದ 'ಅಣ್ಣ'
ಚಿತ್ರದಲ್ಲಿ ಬಣ್ಣ ಹಚ್ಚಿದವರು: ನಾಯಕಿಯರಾಗಿ ದೀಪ್ತಿ ಸಾತಿ, ಮೇಘಶ್ರೀ, ತ್ರಿವೇಣಿ (ಟಗರು) ಅಭಿನಯಿಸಿದ್ದಾರೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ (ಬಾಂಬೆ) ಮುಂತಾದವರು ತಾರಾಬಳಗದಲ್ಲಿದ್ದಾರೆ. ಗೀತರಚನೆಕಾರರಾಗಿ ಜನಪ್ರಿಯರಾಗಿರುವ ಜೆ.ಕೆ.ರಾಮನಾರಾಯಣ್ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿದ್ದಾರೆ.
ಶ್ರೀ ಮಾದೇಶ್ವರ ಪ್ರೊಡಕ್ಷನ್ಸ್ ಮೂಲಕ ಪ್ರಣವ್ ಗೌಡ.ಎನ್, ನಿವೇದಿತಾ ಹಾಗೂ ಶಿವಕುಮಾರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಿಸಿದ್ದಾರೆ. ಸುಮಧುರವಾದ ನಾಲ್ಕು ಹಾಡುಗಳಿದ್ದು, ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ. ಧರ್ಮವಿಶ್ ಹಿನ್ನೆಲೆ ಸಂಗೀತ 'ರಾಜಮಾರ್ತಾಂಡ'ನ ವೈಭವ ಹೆಚ್ಚಿಸಿದೆ. ಜೆ.ಕೆ.ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು ಡಿ ವಿ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಚಿತ್ರಕ್ಕಿದೆ.
ಇದನ್ನೂ ಓದಿ: ಅಣ್ಣ ಚಿರು ಸಮಾಧಿ ಬಳಿ ಪತ್ನಿ ಸೀಮಂತ ಶಾಸ್ತ್ರ ನೆರವೇರಿಸಿದ ಧ್ರುವ ಸರ್ಜಾ