ಕನ್ನಡ ಚಿತ್ರರಂಗದಲ್ಲಿ ವಿಭಿನ್ನ ಚಿತ್ರಗಳ ಮೂಲಕ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್. ಮರಿ ಟೈಗರ್ ಎಂದೇ ಜನಪ್ರಿಯ. ತಮ್ಮದೇ ವಿಭಿನ್ನ ಸ್ಟಾರ್ ಡಮ್ ಹೊಂದುವ ಮೂಲಕ ಸ್ಯಾಂಡಲ್ವುಡ್ನಲ್ಲಿ ಬೇಡಿಕೆ ಹೊಂದಿದ್ದಾರೆ ವಿನೋದ್ ಪ್ರಭಾಕರ್. ನಟನ ಮುಂದಿನ ಬಹುನಿರೀಕ್ಷಿತ ಫೈಟರ್ ಸಿನಿಮಾ ಇದೇ ಶುಕ್ರವಾರ ಚಿತ್ರಮಂದಿರಗಳಲ್ಲಿ ತೆರೆಕಾಣಲಿದೆ.
ಫೈಟರ್ ಚಿತ್ರತಂಡಕ್ಕೆ ದರ್ಶನ್ ಸಾಥ್: ಫೈಟರ್ ಸಿನಿಮಾ ಬಿಡುಗಡೆ ಹೊಸ್ತಿಲಲ್ಲಿದ್ದು, ನಾಯಕ ನಟ ವಿನೋದ್ ಪ್ರಭಾಕರ್ ಅವರಿಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಾಥ್ ನೀಡಿದ್ದಾರೆ. ವಿನೋದ್ ಅವರಿಗೆ ಸದಾ ಸಪೋರ್ಟ್ ಮಾಡುತ್ತಾ ಬಂದಿದ್ದಾರೆ ದರ್ಶನ್. ಇದೀಗ ಟ್ರೇಲರ್ ಹಾಗೂ ಹಾಡುಗಳಿಂದಲೇ ಸಖತ್ ಸೌಂಡ್ ಮಾಡುತ್ತಿರುವ ವಿನೋದ್ ಪ್ರಭಾಕರ್ ಅವರ ಫೈಟರ್ ಚಿತ್ರಕ್ಕೆ ಮತ್ತೆ ದರ್ಶನ್ ಬೆಂಬಲ ಕೊಟ್ಟಿದ್ದಾರೆ. ಈ ಸಿನಿಮಾದ ಮುಹೂರ್ತದಂದು ಆಗಮಿಸಿ ಕ್ಲಾಪ್ ಮಾಡುವ ಮೂಲಕ ಫೈಟರ್ ಚಿತ್ರತಂಡಕ್ಕೆ ದರ್ಶನ್ ಸಾಥ್ ನೀಡಿದ್ದರು. ಇದೀಗ ಸಿನಿಮಾ ವೀಕ್ಷಿಸಿ, ವಿನೋದ್ರನ್ನು ಬೆಂಬಲಿಸಿ ಎಂದು ಹೇಳುವ ಮೂಲಕ ಮತ್ತೊಮ್ಮೆ ವಿನೋದ್ ಅವರ ಬೆಂಬಲಕ್ಕೆ ಬಂದಿದ್ದಾರೆ ಚಾಲೆಂಜಿಂಗ್ ಸ್ಟಾರ್ ದರ್ಶನ್.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿದ್ದಿಷ್ಟು: ಫೈಟರ್ ಚಿತ್ರ ಅಕ್ಟೋಬರ್ 6ರಂದು ಪ್ರೇಕ್ಷಕರಿಗೆ ದರ್ಶನ ಕೊಡಲಿದೆ. ಈ ಹಿನ್ನೆಲೆಯಲ್ಲಿ ಮತ್ತೆ ದರ್ಶನ್ ಅವರು ವಿನೋದ್ ಪ್ರಭಾಕರ್ ಜೊತೆ ಕುಳಿತು ಮಾತನಾಡಿರುವ ವಿಡಿಯೋವನ್ನು ಅನಾವರಣಗೊಳಿಸಲಾಗಿದೆ. ಈ ವಾರ ನಮ್ಮ ಮರಿ ಟೈಗರ್ ಅವರ ಚಿತ್ರ ಬಿಡುಗಡೆ ಆಗುತ್ತಿದೆ. ಎಲ್ಲರೂ ಚಿತ್ರಮಂದಿರಗಳಿಗೆ ಬಂದು ಫೈಟರ್ ಚಿತ್ರ ನೋಡಿ. ಮರಿ ಟೈಗರ್ಗೆ ಪ್ರೀತಿ, ಪ್ರೋತ್ಸಾಹ ಕೊಟ್ಟು ಆಶೀರ್ವದಿಸಿ ಎಂದು ಅಭಿಮಾನಿಗಳಲ್ಲಿ ನಟ ದರ್ಶನ್ ಕೇಳಿಕೊಂಡಿದ್ದಾರೆ.
ಫೈಟರ್ ಚಿತ್ರದಲ್ಲಿ ಅನ್ಯಾಯದ ವಿರುದ್ಧ ಹಾಗೂ ರೈತರ ಪರವಾಗಿ ಹೋರಾಡುವ ಪಾತ್ರದಲ್ಲಿ ವಿನೋದ್ ಪ್ರಭಾಕರ್ ಅಭಿನಯಿಸಿದ್ದಾರೆ. ವಿನೋದ್ ಜೋಡಿಯಾಗಿ ಲೇಖಾ ಚಂದ್ರ ನಟಿಸಿದ್ದಾರೆ. ಈ ಚಿತ್ರವನ್ನು ನೂತನ್ ಉಮೇಶ್ ನಿರ್ದೇಶಿಸಿದ್ದಾರೆ. ಈ ಚಿತ್ರಕ್ಕೆ ಗುರುಕಿರಣ್ ಅವರ ಸಂಗೀತವಿದ್ದು, ಗೀತರಚನೆಕಾರ ಕವಿರಾಜ್ ಅವರ ಸಾಹಿತ್ಯವಿದೆ. ಸಿನಿಮಾಗೆ ಶೇಖರ್ ಚಂದ್ರ ಛಾಯಾಗ್ರಹಣವಿದ್ದು, ಸಾಹಸ ನಿರ್ದೇಶಕ ಥ್ರಿಲ್ಲರ್ ಮಂಜು ಅವರು ಐದು ಭರ್ಜರಿ ಆ್ಯಕ್ಷನ್ ಸಿಕ್ವೇನ್ಸ್ ಮಾಡಿದ್ದಾರೆ.
ಇದನ್ನೂ ಓದಿ: 'ಟೈಗರ್ 3' ಟ್ರೇಲರ್ ರಿಲೀಸ್ ಡೇಟ್ ಫಿಕ್ಸ್; ದೀಪಾವಳಿಗೆ ತೆರೆಗೆ
ವಿನೋದ್ ಪ್ರಭಾಕರ್ ಹಾಗೂ ಲೇಖಾ ಚಂದ್ರ ಅಲ್ಲದೇ ಹಿರಿಯ ನಟ ಶರತ್ ಲೋಹಿತಾಶ್ವ, ಪವನ್ ಗೌಡ, ನಿರೋಶ್ ರಾಧಾ, ರಾಜೇಶ್ ನಟರಂಗ, ದೀಪಕ್ ಶೆಟ್ಟಿ, ಗಿರಿಜಾ ಲೋಕೇಶ್, ಕುರಿ ಪ್ರತಾಪ್ ಸೇರಿದಂತೆ ಹಲವರು ನಟಿಸಿದ್ದಾರೆ. ನಿರ್ಮಾಪಕ ಸೋಮಶೇಖರ್ ಅವರು ಚಿತ್ರತಂಡಕ್ಕೆ ಯಾವುದೇ ಕೊರತೆ ಬಾರದ ಹಾಗೆ ಸಿನಿಮಾ ನಿರ್ಮಾಣ ಮಾಡಿದ್ದಾರೆ. ನಿರ್ದೇಶಕ ನೂತನ್ ಉಮೇಶ್ ಅವರು ಅಷ್ಟೇ ಚೆನ್ನಾಗಿ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಸದ್ಯ ಟ್ರೇಲರ್ ಹಾಗೂ ಹಾಡುಗಳಿಂದ ಸದ್ದು ಮಾಡುತ್ತಿರುವ ಫೈಟರ್ ಚಿತ್ರ ಪ್ರೇಕ್ಷಕರ ಮನ ಗೆಲ್ಲುವ ಲಕ್ಷಣಗಳು ಕಾಣುತ್ತಿವೆ. ಈ ಚಿತ್ರ ಮರಿ ಟೈಗರ್ ಜನಪ್ರಿಯತೆ ಹೆಚ್ಚಿಸಲಿದೆ ಎಂಬುದು ಚಿತ್ರತಂಡ, ಅಭಿಮಾನಿಗಳ ವಿಶ್ವಾಸ.
ಇದನ್ನೂ ಓದಿ: ಮುಂಬೈ ಸಿದ್ಧಿ ವಿನಾಯಕ ದೇಗುಲಕ್ಕೆ ಆರ್ಆರ್ಆರ್ ಸ್ಟಾರ್ ರಾಮ್ಚರಣ್ ಭೇಟಿಯ ಕ್ಷಣಗಳು Photos