ಮುಜಾಫರ್‌ಪುರ: 'ಬೇಷರಂ ರಂಗ್' ಹಾಡಿನಲ್ಲಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಬಾಲಿವುಡ್ ನಟರಾದ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಮತ್ತು ಚಿತ್ರತಂಡದ ಇತರ ಎಂಟು ಜನರ ವಿರುದ್ಧ ಎಫ್‌ಐಆರ್ ದಾಖಲಿಸುವಂತೆ ಕೋರಿ ಬಿಹಾರದ ಮುಜಾಫರ್‌ಪುರ ಜಿಲ್ಲೆಯ ನ್ಯಾಯಾಲಯಕ್ಕೆ ಶುಕ್ರವಾರ ದೂರು ಸಲ್ಲಿಸಲಾಗಿದೆ.
ಮುಜಾಫರ್‌ಪುರ ಮೂಲದ ವಕೀಲ ಸುಧೀರ್ ಓಜಾ ಎನ್ನುವವರು ಸಿಜೆಎಂ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ್ದು, ಜನವರಿ 3 ರಂದು ಈ ದೂರಿನ ವಿಚಾರಣೆ ನಡೆಯಲಿದೆ. ತಮ್ಮ ವಿರುದ್ಧ ಎದ್ದಿರುವ ವಿವಾದದ ಕುರಿತು 'ಏನೇ ಆದರೂ ಸಕಾರಾತ್ಮಕವಾಗಿ ಇರುತ್ತೇನೆ' ಎಂದು ನಟ ಶಾರುಖ್ ಖಾನ್ ಪ್ರತಿಕ್ರಿಯೆ ನೀಡಿರುವ ಬೆನ್ನಲ್ಲೆ ಇಂತಹದೊಂದು ಬೆಳವಣಿಗೆಯಾಗಿದೆ.
ಚಿತ್ರತಂಡದ ವಿರುದ್ಧ ದೂರು ದಾಖಲಾಗಿರುವುದು ಮಾತ್ರವಲ್ಲ ಇದೀಗ ಶಾರುಖ್ ಖಾನ್ ಅಭಿನಯದ ಪಠಾಣ್ ಚಿತ್ರದ ವಿರುದ್ಧದ ಬಾಯ್ಕಾಟ್ ಬಿಸಿ ಮಧ್ಯಪ್ರದೇಶ, ಬಿಹಾರ ಮತ್ತು ಉತ್ತರಾಖಂಡದಲ್ಲಿ ನಡೆಯುತ್ತಿರುವ ಅವರ ಮುಂಬರುವ ಚಿತ್ರ 'ರಿಟರ್ನ್ ಟಿಕೆಟ್' ಚಿತ್ರೀಕರಣದ ಮೇಲೆ ಪರಿಣಾಮ ಬೀರುವಂತೆ ತೋರುತ್ತಿದೆ.
ಯಾಕೆಂದರೆ ಹರಿದ್ವಾರದ ಸಂತರು ಕೂಡ ಸಿನಿಮಾವನ್ನು ಬಹಿಷ್ಕರಿಸುವಂತೆ ಆಗ್ರಹಿಸಿದ್ದು, ಕಾಳಿ ಸೇನೆಯ ಮುಖ್ಯಸ್ಥ ಸ್ವಾಮಿ ಆನಂದ್ ಸ್ವರೂಪ್, ‘ಪಠಾಣ್’ ಸಿನಿಮಾದಲ್ಲಿ ನಮ್ಮ ‘ಕೇಸರಿ’ ಬಣ್ಣಕ್ಕೆ ಅವಮಾನ ಮಾಡಿರುವ ರೀತಿ ಚಿತ್ರೀಕರಿಸಲಾಗಿದೆ. ಅಂತಹ ನಟ ನಟಿಯರು ಮತ್ತು ಚಿತ್ರ ನಿರ್ಮಾಪಕರಿಗೆ ನಾವು ಇಲ್ಲಿ ಚಿತ್ರೀಕರಣ ಮಾಡಲು ಅವಕಾಶ ನೀಡುವುದಿಲ್ಲ. ಭೇದಘಾಟ್‌ನಲ್ಲಿ ನಡೆಯುತ್ತಿರುವ ಚಿತ್ರದ ಚಿತ್ರೀಕರಣವನ್ನು ತಕ್ಷಣವೇ ನಿಲ್ಲಿಸಬೇಕು. ನಮ್ಮ ಸನಾತನ ಧರ್ಮಕ್ಕೆ ಅವಮಾನ ಮಾಡುವ ಶೂಟಿಂಗ್‌ಗೆ ಅನುಮತಿ ನೀಡುವ ಮೊದಲು ಜಿಲ್ಲಾಧಿಕಾರಿ ಯೋಚಿಸಬೇಕು ಎಂದು ಮನವಿ ಮಾಡಿದ್ದಾರೆ.
ಸೋಮವಾರ ಬಿಡುಗಡೆ ಆದ ಪಠಾಣ್ ಚಿತ್ರದ 'ಬೇಷರಂ ರಂಗ್' ಹಾಡಿನಲ್ಲಿ ದೀಪಿಕಾ ಪಡುಕೋಣೆ ಕೇಸರಿ ಬಣ್ಣದ ಬಿಕಿನಿಯಲ್ಲಿ ಕಾಣಿಸಿಕೊಂಡಿರುವ ಕುರಿತು ವಿವಾದ ಭುಗಿಲೆದ್ದಿದೆ. ಹಾಡಿನ ಮೂಲಕ ಅಶ್ಲೀಲತೆಯನ್ನು ಪ್ರಚಾರ ಮಾಡಲಾಗುತ್ತಿದೆ ಮತ್ತು ಇದು ಹಿಂದೂ ಭಾವನೆಗಳಿಗೆ ನೋವುಂಟು ಮಾಡುತ್ತದೆ ಎಂದು ಪ್ರತಿಭಟನಾಕಾರರು ಚಿತ್ರದ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಭಟನೆ ಎದ್ದಿದ್ದಾರೆ. ಒಂದಷ್ಟು ಜನ ಚಿತ್ರದ ವಿರುದ್ಧ ಮಾತನಾಡಿದರೆ, ಇನ್ನೊಂದಷ್ಟು ಜನ ಶಾರುಖ್ ಖಾನ್, ದೀಪಿಕಾ ಪಡುಕೋಣೆ ಹಾಗೂ ಚಿತ್ರದ ಪರವಾಗಿ ಮಾತನಾಡುತ್ತಿದ್ದಾರೆ.
ಟ್ವಿಟರ್ನಲ್ಲಿ ಸದ್ಯ ಟ್ರೆಂಡ್ನಲ್ಲಿರುವ ಬೇಷರಂ ರಂಗ್ ಸಾಂಗ್ ವಿವಾದದ ಪರವಾಗಿ ಕೆಲ ನೆಟ್ಟಿಗರು ಈ ಹಿಂದೆ ಅಕ್ಷಯ್ ಕುಮಾರ್ ಚಿತ್ರಗಳಲ್ಲೂ ಕೇಸರಿ ಬಣ್ಣವನ್ನು ಅಶ್ಲೀಲವಾಗಿ ಬಳಸಿಕೊಳ್ಳಲಾಗಿದೆ. ಆದರೆ ಆಗ ಕೇಸರಿ ಬಣ್ಣ, ಹಿಂದೂ ಭಾವನೆಗಳಿಗೆ ನೋವುಂಟು ಮಾಡಿರುವುದರ ಕುರಿತು ಯಾಕೆ ಯಾರೂ ಮಾತನಾಡಿಲ್ಲ ಎಂದು ಅಕ್ಷಯ್ ಕುಮಾರ್ ಸಿನಿಮಾದ ಚಿತ್ರ ಹಾಗೂ ವಿಡಿಯೋಗಳ ಸಾಕ್ಷಿ ಸಮೇತ ಟ್ವೀಟ್ ಪ್ರಹಾರ ಮಾಡುತ್ತಿದ್ದಾರೆ.
ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ದೀಪಿಕಾ ಅವರ ಡ್ರೆಸ್ ಅನ್ನು ಫಿಕ್ಸ್ ಮಾಡುವಂತೆ ಚಿತ್ರ ನಿರ್ಮಾಪಕರಿಗೆ ಕೇಳಿಕೊಂಡಿದ್ದಾರೆ. ಇಲ್ಲದಿದ್ದರೆ ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎನ್ನುವ ಎಚ್ಚರಿಕೆಯನ್ನೂ ನೀಡಿದ್ದರು.
ಇದನ್ನೂ ಓದಿ: ಬೇಷರಮ್ ರಂಗ್ ವಿವಾದ: 'ಪಠಾಣ್' ಬಾಯ್ಕಾಟ್ಗೆ ದನಿಗೂಡಿಸಿದ ಸಾಧು ಸಂತರು