ಚೇತರಿಕೆ ಮಾರ್ಗದಲ್ಲಿದ್ದ ಬಾಲಿವುಡ್ಗೆ ಮತ್ತೊಮ್ಮೆ ಬಾಯ್ಕಾಟ್ ಬಿಸಿ ತಾಗಿದೆ. ಕಿಂಗ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಬಹುನಿರೀಕ್ಷಿತ ಪಠಾಣ್ ಸಿನಿಮಾ ಈಗ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೇಶರಂ ಹಾಡು ರಿಲೀಸ್ ಆಗಿದ್ದೇ ತಡ ಅದನ್ನು ಮೆಚ್ಚಿ ಕೊಂಡಾಡಿದವರು ಒಂದಿಷ್ಟು ಮಂದಿಯಾದರೆ, ಹಾಡಿನಲ್ಲಿ ನಟಿಯ ವೇಷಭೂಷಣ ಮತ್ತು ಕೇಸರಿ ಬಣ್ಣದ ಬಿಕಿನಿ ಬಗ್ಗೆ ವಿರೋಧ ವ್ಯಕ್ತಪಡಿಸಿದವರು ಮತ್ತೊಂದಿಷ್ಟು ಮಂದಿ.
ಮಧ್ಯಪ್ರದೇಶದ ಸಚಿವ ನರೋತ್ತಮ್ ಮಿಶ್ರಾ ಎಚ್ಚರಿಕೆ ನಂತರ ಈಗ ಉತ್ತರ ಪ್ರದೇಶದ ಬಿಜೆಪಿ ಕಾರ್ಯಕರ್ತರು ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಅಭಿನಯದ ಈ 'ಪಠಾಣ್' ಚಿತ್ರ 'ಸನಾತನ ಸಂಸ್ಕೃತಿ'ಯನ್ನು ಅವಮಾನಿಸಿದೆ ಎಂದು ಆರೋಪಿಸಿ ಸಿನಿಮಾ ಬಹಿಷ್ಕರಿಸುವಂತೆ ಒತ್ತಾಯಿಸುತ್ತಿದ್ದಾರೆ.
ಬಿಜೆಪಿ ಮುಖಂಡ ರಾಜೇಶ್ ಕೇಸರವಾಣಿ ಮಾತನಾಡಿ, ''ಸಿನಿಮಾದ ಬೇಷರಂ ಹಾಡಿನಲ್ಲಿ ಕೇಸರಿ ಬಣ್ಣವನ್ನು ಅಸಭ್ಯವಾಗಿ ತೋರಿಸಲಾಗಿದ್ದು, ಹಿಂದೂ ಸಮಾಜ ಮತ್ತು ಸನಾತನ ಸಂಸ್ಕೃತಿಗೆ ಅವಮಾನವಾಗಿದೆ. ಹೀಗಾಗಿ ನಾವು ಕಳವಳ ವ್ಯಕ್ತಪಡಿಸಿದ್ದೇವೆ. ರಾಜ್ಯ ಸರ್ಕಾರವು ಉತ್ತರ ಪ್ರದೇಶದಲ್ಲಿ ಚಲನಚಿತ್ರವನ್ನು ನಿಷೇಧಿಸಬೇಕು ಮತ್ತು ನಿರ್ಮಾಪಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು'' ಎಂದು ಉತ್ತರ ಪ್ರದೇಶದ ಕೆಲ ಬಿಜೆಪಿ ನಾಯಕರು ಒತ್ತಾಯಿಸಿದ್ದಾರೆ.
ಇದನ್ನೂ ಓದಿ: ''ಬೇಶರಂ ರಂಗ್'' ವಿವಾದ: ಪಠಾಣ್ ಬಿಡುಗಡೆ ಆಗೋದು ಅನುಮಾನ ಎಂದ ಸಚಿವ
ನಿನ್ನೆ ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ಅವರು ಹಿಂದಿಯಲ್ಲಿ ಟ್ವೀಟ್ ಮಾಡಿದ್ದು, "ಹಾಡಿನ ಮೊದಲ ನೋಟದಲ್ಲಿ ವೇಷಭೂಷಣಗಳು ಆಕ್ಷೇಪಾರ್ಹವಾಗಿವೆ. 'ತುಕ್ಡೆ ತುಕ್ಡೆ ಗ್ಯಾಂಗ್' ಅನ್ನು ಬೆಂಬಲಿಸುವ ನಟಿ ದೀಪಿಕಾ ಪಡುಕೋಣೆ ಪಠಾಣ್ ಚಿತ್ರದ ಹಾಡಿನಲ್ಲಿದ್ದಾರೆ. ಅವರ ವೇಷಭೂಷಣಗಳು ಇಡೀ ಹಾಡಿನಲ್ಲಿ ಆಕ್ಷೇಪಾರ್ಹವಾಗಿದ್ದು, ಕೊಳಕು ಮನಸ್ಥಿತಿಯಲ್ಲಿ ಹಾಡನ್ನು ಚಿತ್ರೀಕರಿಸಲಾಗಿದೆ.
ಹಾಡುಗಳ ದೃಶ್ಯಗಳು ಮತ್ತು ವೇಷಭೂಷಣಗಳನ್ನು ಸರಿಪಡಿಸಬೇಕು. ಇಲ್ಲದಿದ್ದರೆ, ಮಧ್ಯಪ್ರದೇಶದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲು ಅನುಮತಿಸಬೇಕೇ ಅಥವಾ ಬೇಡವೇ ಎಂಬುದರ ಬಗ್ಗೆ ನಾವು ಚರ್ಚೆ ನಡೆಸಬೇಕಾಗುತ್ತದೆ'' ಎಂದು ಹೇಳಿದ್ದರು. ಹೀಗಾಗಿ ಮಧ್ಯಪ್ರದೇಶ ಬಳಿಕ ಉತ್ತರ ಪ್ರದೇಶದಲ್ಲೂ ಪಠಾಣ್ ಸಿನಿಮಾಗೆ ಬಾಯ್ಕಾಟ್ ಬಿಸಿ ತಾಗಿದೆ.