ಛಾಪ್ರಾ(ಬಿಹಾರ): ಭೋಜ್‌ಪುರಿಯ ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ ಅವರು ಪಾಲ್ಗೊಂಡಿದ್ದ ಸಂಗೀತ ಕಾರ್ಯಕ್ರಮವೊಂದರಲ್ಲಿ ವ್ಯಕ್ತಿಯೊಬ್ಬ ಹಠಾತ್ ಗುಂಡು ಹಾರಿಸಿದ ಘಟನೆ ನಡೆದಿದೆ. ಘಟನೆಯಲ್ಲಿ ನಿಶಾ ಉಪಾಧ್ಯಾಯ ಅವರಿಗೆ ಗುಂಡು ತಗುಲಿದ್ದು, ಅವರನ್ನು ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಸೇಡೂರ್ ಗ್ರಾಮದ ವೀರೇಂದ್ರ ಸಿಂಗ್ ಅವರ ಮನೆಯಲ್ಲಿ ಸಂಗೀತ ಕಾರ್ಯಕ್ರಮ ಆಯೋಜಿಸಲಾಗಿತ್ತು. ಬಿಹಾರದ ಸರನ್ ಜಿಲ್ಲೆಯ ಗರ್ಖಾ ಬ್ಲಾಕ್‌ನ ಗೌಹರ್ ಬಸಂತ್ ನಿವಾಸಿ ನಿಶಾ ಉಪಾಧ್ಯಾಯ ಅವರು ಸಂಗೀತ ಕಾರ್ಯಕ್ರಮ ಕೊಡುತ್ತಿದ್ದರು. ಈ ವೇಳೆ, ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಿದ್ದಾರೆ. ಆ ಗುಂಡು ಗಡಿಬಿಡಿಯಲ್ಲಿ ಗಾಯಕಿ ನಿಶಾ ಉಪಾಧ್ಯಾಯ ಅವರ ಕಾಲಿಗೆ ತಾಗಿದ್ದು, ಪಾಟ್ನಾದ ಮ್ಯಾಕ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ತಿಂದ ಗಾಯಕಿ ಸ್ಥಳದಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದರು. ಸದ್ಯ ಅವರ ಸ್ಥಿತಿ ಚಿಂತಾಜನಕವಾಗಿದ್ದು ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ ಎಂಬ ಮಾಹಿತಿ ಇದೆ. ಘಟನೆ ಮಂಗಳವಾರ ತಡರಾತ್ರಿ ನಡೆದಿದ್ದು ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
![ಭೋಜ್‌ಪುರಿಯ ಖ್ಯಾತ ಗಾಯಕಿ ನಿಶಾ ಉಪಾಧ್ಯಾಯ](https://etvbharatimages.akamaized.net/etvbharat/prod-images/18648107_shoot.jpg)
ಇದನ್ನೂ ಓದಿ: ಧೂಮಪಾನ ಮಾಡದ ಸೆಲೆಬ್ರಿಟಿಗಳು: ಮೊದಲು ಧೂಮಪಾನಕ್ಕೆ ದಾಸರಾಗಿದ್ದ ಈ ಸ್ಟಾರ್ಗಳು ಯಾವ ಕಾರಣಕ್ಕೆ ಬಿಟ್ಟರು ಗೊತ್ತಾ?
ಘಟನೆ ನಡೆದ ತಕ್ಷಣ ಗಾಯಕಿಯ ಕುಟುಂಬದ ಸದಸ್ಯರಿಗೆ ಮಾಹಿತಿ ನೀಡಲಾಗಿತ್ತು. ಸದ್ಯ ಅವರ ಕುಟುಂಬಸ್ಥರು ಆಸ್ಪತ್ರೆಗೆ ಧಾವಿಸಿದ್ದು ವೈದ್ಯರಿಂದ ಮಾಹಿತಿ ಪಡೆಯುತ್ತಿದ್ದಾರೆ. ಆದರೆ, ಪುತ್ರಿಯ ಬಗ್ಗೆ ಸ್ಪಷ್ಟನೆ ನೀಡದ್ದರಿಂದ ಗಾಬರಿಯಲ್ಲಿದ್ದಾರೆ. ಯಾರೋ ಕಿಡಿಗೇಡಿಗಳು ಹಾಡು ಕೇಳುವ ಜೋಶ್ನಲ್ಲಿ ಈ ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುತ್ತಿದೆ.
ಆದರೆ, ಗುಂಡು ಹಾರಿಸಿದವರು ಅಲ್ಲಿಂದ ಪರಾರಿಯಾಗಿದ್ದು ಪೊಲೀಸರು ಅವರಿಗಾಗಿ ಶೋಧನೆ ನಡೆಸಿದ್ದಾರೆ. ಗುಂಡು ಹಾರಿಸಿದವರು ಯಾರೆಂದು ಸದ್ಯಕ್ಕೆ ತಿಳಿದು ಬಂದಿಲ್ಲ. ಈ ಬಗ್ಗೆ ಎಲ್ಲರನ್ನು ತನಿಖೆಗೆ ಒಳಪಡಿಸಲಾಗುತ್ತದೆ. ಸಂಗೀತ ಕಾರ್ಯಕ್ರಮದ ಆಯೋಜನೆ ಬಗ್ಗೆಯೂ ಮಾಹಿತಿ ಕಲೆ ಹಾಕಲಾಗುವುದು ಎಂದು ಗರ್ಖಾ ಠಾಣಾ ಪೊಲೀಸರು ಮಾಹಿತಿ ನೀಡಿದ್ದಾರೆ.
"ಮಂಗಳವಾರ ತಡರಾತ್ರಿ ಉಪನಯನ ಕಾರ್ಯಕ್ರಮ ವೇಳೆ ಜಂತಾ ಬಜಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಸೆಂಡುವಾರ್ ಗ್ರಾಮದಲ್ಲಿ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನಡೆಯುತ್ತಿತ್ತು. ಅಲ್ಲಿ ಭೋಜ್‌ಪುರಿ ಗಾಯಕಿ ನಿಶಾ ಉಪಾಧ್ಯಾಯ ಅವರು ಕಾರ್ಯಕ್ರಮ ನೀಡುತ್ತಿದ್ದರು. ಈ ವೇಳೆ ಹಾಡು ಕೇಳುತ್ತಲೇ ಯಾರೋ ಗುಂಡಿ ಹಾರಿಸಿದ್ದಾರೆ. ಈ ಗುಂಡು ಗಾಯಕಿಯ ಕಾಲಿಗೆ ತಾಕಿದೆ ಎಂಬ ವರದಿಯಾಗಿದೆ. ಆದರೆ, ಇದುವರೆಗೆ ಈ ಬಗ್ಗೆ ಲಿಖಿತ ದೂರು ಬಂದಿಲ್ಲ. ಈ ಬಗ್ಗೆ ಪರಿಶೀಲಿಸುತ್ತಿದ್ದೇವೆ." - ನಾಸಿರುದ್ದೀನ್, ಗರ್ಖಾ ಪೊಲೀಸ್ ಠಾಣೆಯ ಉಸ್ತುವಾರಿ
ಖ್ಯಾತ ಭೋಜ್‌ಪುರಿ ಗಾಯಕಿ ನಿಶಾ ಉಪಾಧ್ಯಾಯ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಸಾಕಷ್ಟು ಖ್ಯಾತಿ ಮತ್ತು ಹೆಸರನ್ನು ಗಳಿಸಿದವರು. ಜಾನಪದ ಗೀತೆಗಳಿಗೆ ನಿಶಾ ಉಪಾಧ್ಯಾಯ ಹೆಸರುವಾಸಿಯಾಗಿದ್ದು, ಅವರ ಹಾಡು ಕೇಳಲೆಂದೇ ಅದೆಷ್ಟೋ ಜನ ಇಂತಹ ಸಂಗೀತ ಕಾರ್ಯಕ್ರಮಗಳನ್ನು ಆಯೋಜನೆ ಮಾಡುತ್ತಿರುತ್ತಾರೆ.
ಇದನ್ನೂ ಓದಿ: Gucci ರಾಯಭಾರಿಯಾಗಿ ಆಲಿಯಾ ಭಟ್: ಖ್ಯಾತ ಹಾಲಿವುಡ್ ಸೆಲೆಬ್ರಿಟಿಗಳ ಜೊತೆ ಭಾರತೀಯ ತಾರೆ