ಕಳೆದ ಒಂದು ತಿಂಗಳಿನಿಂದ ಕುಂಭ ದ್ರೋಣ ಮಳೆಗೆ ಬೆಂಗಳೂರಿನ ಜನತೆ ತತ್ತರಿಸಿ ಹೋಗಿದ್ದಾರೆ. ಮನೆಗಳಿಗೆ ನೀರು ನಿಗ್ಗುವ ಮೂಲಕ ಮಳೆರಾಯನ ರುದ್ರ ನರ್ತನ ಜೋರಾಗಿದೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿ ಬಡಾವಣೆಗಳು ನದಿಯಂತೆ ಆಗಿವೆ. ಪರಿಣಾಮ ಬೆಂಗಳೂರಿನ ಜನತೆ ಮೂಲ ವಸ್ತುಗಳು ಹಾಗೂ ಊಟಕ್ಕೆ ಕಷ್ಟ ಪಡುವಂತೆ ಆಗಿದೆ. ಹೀಗಾಗಿ ಸಂತ್ರಸ್ತರ ಸಹಾಯಕ್ಕೆ ಕಿಚ್ಚ ಸುದೀಪ್ ಬಂದಿದ್ದಾರೆ.
ಹೌದು, ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯಿಂದ ಬೆಂಗಳೂರು ಜೊತೆ ನಾವು ಇದ್ದೇವೆ ಅಂತಾ ಹೇಳಿದ್ದಾರೆ. ಇನ್ಮುಂದೆ ಮಳೆ ಹಾನಿಯಿಂದ ಕಷ್ಟದಲ್ಲಿರುವ ಜನರಿಗೆ ಊಟ ಮತ್ತು ಔಷಧಗಳನ್ನ ಕೊಡುವ ವ್ಯವಸ್ಥೆಯನ್ನ ಮಾಡಲಾಗುತ್ತೆ ಅಂತಾ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ತಿಳಿಸಿದೆ. ಜೊತೆಗೆ ಕಷ್ಟದಲ್ಲಿರುವ ಜನರು ನಮಗೆ ಕರೆ ಮಾಡಿ ಅಂತಲೂ ಕೇಳಿಕೊಂಡಿದೆ.
ಇನ್ನು ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿಯಿಂದ ಸಾಕಷ್ಟು ಸಾಮಾಜಿಕ ಕೆಲಸಗಳನ್ನ ಮಾಡುತ್ತಾ ಬರುತ್ತಿದೆ. ಕೊರೊನಾ ಸಂದರ್ಭದಲ್ಲಿ ಸುದೀಪ್ ಹುಡುಗರ ತಂಡವು ಊಟ ಇಲ್ಲದೇ ಕಷ್ಟಪಡುತ್ತಿದ್ದ ಜನರ ಹಸಿವನ್ನ ನೀಗಿಸಿತ್ತು. ಅಷ್ಟೇ ಅಲ್ಲದೇ ಚಿತ್ರರಂಗದಲ್ಲಿ ಕಷ್ಟಪಡುತ್ತಿದ್ದ ಪೋಷಕ ಕಲಾವಿದರಿಗೂ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದಿದ್ದರು.
ಇವತ್ತಿಗೂ ಕಷ್ಟದಲ್ಲಿರುವ ಜನರು ಹಾಗೂ ಅಭಿಮಾನಿಗಳಿಗೆ ಕಿಚ್ಚ ಸುದೀಪ್ ತಮ್ಮ ಚಾರಿಟಬಲ್ ಸೊಸೈಟಿಯಿಂದ ಜನರು ಮೆಚ್ಚುವಂತಹ ಕೆಲಸ ಮಾಡುತ್ತಿದ್ದಾರೆ. ಸದ್ಯ ಬೆಂಗಳೂರಿನ ಮಳೆ ಅವಾಂತರದಿಂದ ನಲುಗಿರುವ ಜನರ ಕಷ್ಟಕ್ಕೆ ಕಿಚ್ಚ ಸುದೀಪ್ ಚಾರಿಟಬಲ್ ಸೊಸೈಟಿ ಸಹಾಯಕ್ಕೆ ಬಂದಿರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಇದನ್ನೂ ಓದಿ: ಮಳೆ ಹಾನಿ ಪ್ರದೇಶಗಳಿಗೆ ಸಿದ್ದರಾಮಯ್ಯ ಭೇಟಿ; ಬೆಳ್ಳಂದೂರು ಪರಿಸ್ಥಿತಿ ವೀಕ್ಷಣೆ