ಮೊರಾದಾಬಾದ್: ಉತ್ತರ ಪ್ರದೇಶದ ಮೊರಾದಾಬಾದ್‌ನ ಎಸಿಜೆಎಂ 5ನೇ ನ್ಯಾಯಾಲಯವು ನಟಿ ಅಮೀಷಾ ಪಟೇಲ್, ಅಹ್ಮದ್ ಷರೀಫ್, ಸುರೇಶ್ ಪರ್ಮಾರ್ ಮತ್ತು ರಾಜ್‌ಕುಮಾರ್ ಗೋಸ್ವಾಮಿ ವಿರುದ್ಧ ಬಂಧನ ವಾರಂಟ್ ಹೊರಡಿಸಿದೆ. ನ್ಯಾಯಾಲಯದಲ್ಲಿ ಅಮೀಷಾ ಪಟೇಲ್ ಮತ್ತು ಅವರ ಸಹಚರರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಮದುವೆ ಸಮಾರಂಭವೊಂದರಲ್ಲಿ ಅಮೀಷಾ ಪಟೇಲ್ ನೃತ್ಯ ಮಾಡಬೇಕಿತ್ತು. ಆದ್ರೆ ಮಾಡಿಲ್ಲ ಎಂದು ಈವೆಂಟ್ ಕಂಪನಿ ಡ್ರೀಮ್ ವಿಷನ್ ಮಾಲೀಕ ಪವನ್ ಕುಮಾರ್ ಆರೋಪಿಸಿದ್ದರು.
ಮೊರಾದಾಬಾದ್‌ನ ಎಸಿಜೆಎಂ-5 ನ್ಯಾಯಾಲಯವು ಈ ಪ್ರಕರಣದಲ್ಲಿ ಅಮೀಷಾ ಪಟೇಲ್ ಮತ್ತು ಇತರ ಆರೋಪಿಗಳಿಗೆ ಸಮನ್ಸ್ ನೀಡಿತ್ತು. ಆದರೆ ಅವರು ನ್ಯಾಯಾಲಯಕ್ಕೆ ಹಾಜರಾಗಿರಲಿಲ್ಲ. ನವೆಂಬರ್ 2017 ರಲ್ಲಿ ಅಮೀಷಾ ಪಟೇಲ್ ಕಾರ್ಯಕ್ರಮವನ್ನು ಅಂತಿಮಗೊಳಿಸಿದ್ದರು. ಹಾಗಾಗಿ ಅವರು 16 ನವೆಂಬರ್ 2017 ರಂದು ಮೊರಾದಾಬಾದ್‌ನ ಹಾಲಿಡೇ ರೀಜೆನ್ಸಿ ಹೋಟೆಲ್‌ನಲ್ಲಿ ನಡೆದ ವಿವಾಹ ಸಮಾರಂಭಕ್ಕೆ ಬಂದು ನೃತ್ಯ ಕಾರ್ಯಕ್ರಮವನ್ನು ನೀಡಬೇಕಿತ್ತು ಎಂದು ಈವೆಂಟ್ ಕಂಪನಿಯ ಮಾಲೀಕ ಪವನ್ ಕುಮಾರ್ ವರ್ಮಾ ಹೇಳಿದರು.
ಇದನ್ನೂ ಓದಿ: ನಿರ್ಮಾಪಕನಿಗೆ 2.5 ಕೋಟಿ ರೂ. ಪಂಗನಾಮ...ಸಂಕಷ್ಟದಲ್ಲಿ ನಟಿ ಅಮೀಶಾ ಪಟೇಲ್
ಈ ಕಾರ್ಯಕ್ರಮಕ್ಕಾಗಿ ನಟಿ ಅಮೀಷಾ ಪಟೇಲ್ 11 ಲಕ್ಷ ರೂಪಾಯಿ ಹಣವನ್ನು ಮುಂಗಡವಾಗಿ ಪಡೆದುಕೊಂಡಿದ್ದರು. ನಿಗದಿತ ದಿನಾಂಕದಂದು, ಅವರು ದೆಹಲಿಯಿಂದಲೇ ಮುಂಬೈಗೆ ಹೋಗಿದ್ದಾರೆ. ಮೊರಾದಾಬಾದ್‌ಗೆ ಬರಲು ನಟಿ ಅಮೀಷಾ ಪಟೇಲ್ ಮನವಿ ಮಾಡಿದರೂ ಬರಲಿಲ್ಲ ಎಂದು ಪವನ್ ಕುಮಾರ್ ಆರೋಪಿಸಿದ್ದಾರೆ.