ಕನ್ನಡ ಚಿತ್ರರಂಗದ ಹಿರಿಯ ನಟ ಡಿಂಗ್ರಿ ನಾಗರಾಜ್ ಅವರು ನಟಿಯರಿಗೆ ಅಶ್ಲೀಲ ಮೆಸೇಜ್ ಕಳುಹಿಸುತ್ತಾರೆ. ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಹಣವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ನಟಿ ಮತ್ತು ಈ ಸಂಘದ ಉಪಾಧ್ಯಕ್ಷೆ ರಾಣಿ ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪವನ್ನು ನಟ ಡಿಂಗ್ರಿ ನಾಗರಾಜ್ ತಳ್ಳಿಹಾಕಿದ್ದಾರೆ.
ಕರ್ನಾಟಕ ಚಲನಚಿತ್ರ ಪೋಷಕ ಕಲಾವಿದರ ಸಂಘದ ಅಧ್ಯಕ್ಷರಾಗಿರುವ ಡಿಂಗ್ರಿ ನಾಗರಾಜ್ ಮತ್ತು ಪ್ರಧಾನ ಕಾರ್ಯದರ್ಶಿ ಆಡುಗೋಡಿ ಶ್ರೀನಿವಾಸ್ ಅವರು ಮಹಿಳಾ ಕಲಾವಿದರ ಜೊತೆಗೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ಅಲ್ಲದೆ, ಪೋಷಕ ನಟಿಯರಿಗೆ ಅವಾಚ್ಯ ಶಬ್ದಗಳಿಂದ ಅವಮಾನಿಸುತ್ತಾರೆ. ಜೊತೆಗೆ ಮಹಿಳೆಯರಿಗೆ ಅಶ್ಲೀಲ ವಿಡಿಯೋ ಕಳುಹಿಸುತ್ತಾರೆ ಎಂದು ಪೋಷಕ ನಟಿ ರಾಣಿ ಮಾಧ್ಯಮದವರ ಮುಂದೆ ಬಂದು ಪೋಷಕ ಕಲಾವಿದರ ಸಂಘದಲ್ಲಿ ದೌರ್ಜನ್ಯ ನಡೆಯುತ್ತಿದೆ ಎಂದು ವಿವರಿಸಿದ್ದಾರೆ.
ಅಶ್ಲೀಲ ವಿಡಿಯೋಗಳನ್ನು ಕಳಿಸಬೇಡಿ ಎಂದು ಡಿಂಗ್ರಿ ನಾಗರಾಜ್ ಅವರಿಗೆ ಹಿಂದೆಯೇ ಹೇಳಿದ್ದೆವು. ಆದರೂ ಅದನ್ನು ಮುಂದುವರೆಸಿದ್ದಲ್ಲದೆ, ಅವರು ನಮ್ಮನ್ನು ಏಕವಚನದಲ್ಲೇ ಮಾತನಾಡಿಸುತ್ತಾರೆ. ಈ ಬಗ್ಗೆ ಪ್ರಶ್ನಿಸಿದರೆ ಅಸಭ್ಯ ಪದ ಬಳಸಿ ತಾವು ಹೇಳಿದ್ದನ್ನು ಕೇಳುವುದಿದ್ದರೆ ಕೇಳಿ, ಇಲ್ಲವಾದರೆ ಮನೆಗೆ ಹೋಗಿ ಅನ್ನುತ್ತಾರೆ. ಯಾವುದೇ ವಿಷಯದ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಾಗ ನಮ್ಮ ಬಳಿ ಚರ್ಚೆ ಮಾಡುವುದಿಲ್ಲ. ಏನೇ ಹೇಳಿದರೂ ನೀವು ರಾಜೀನಾಮೆ ಕೊಟ್ಟು ಹೋಗಿ ಎನ್ನುತ್ತಾರೆ ಎಂದು ನಟಿ ರಾಣಿ ಆರೋಪವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಡಿಂಗ್ರಿ ನಾಗರಾಜ್, 'ಕಳೆದ ಹತ್ತು ವರ್ಷಗಳಿಂದ ನನ್ನ ಹತ್ತಿರ ಇರೋದು ಬೇಸಿಕ್ ಮೊಬೈಲ್. ಈ ಮೊಬೈಲ್ನಲ್ಲಿ ಯಾವುದೇ ವಾಟ್ಸ್ ಆ್ಯಪ್, ಯೂಟ್ಯೂಬ್ ಕೂಡ ಇಲ್ಲ. ಹೀಗಿರುವಾಗ ನಾನು ರಾಣಿಯವರಿಗೆ ಅಶ್ಲೀಲ ವಿಡಿಯೋ ಕಳಿಸಲು ಹೇಗೆ ಸಾಧ್ಯ' ಅಂತಾ ಪ್ರಶ್ನೆ ಮಾಡಿದರು.
'ರಾಣಿ ಮತ್ತು ಕೆಲ ಪೋಷಕ ಕಲಾವಿದರು ಸೇರಿಕೊಂಡು ನಮ್ಮ ಪೋಷಕ ಕಲಾವಿದರ ಸಂಘದಲ್ಲಿ ಮನಸ್ತಾಪ ಆಗುವ ಕೆಲಸ ಮಾಡುತ್ತಿದ್ದಾರೆ. ಈ ಕಾರಣಕ್ಕೆ ರಾಣಿ ಹಾಗೂ ಕೆಲ ಪೋಷಕ ಕಲಾವಿದರು ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. 70 ವರ್ಷದಿಂದ ನಾಟಕಗಳಲ್ಲಿ ಅಭಿನಯಿಸುತ್ತಿದ್ದೇನೆ. ಯಾರಾದರೂ ನಾನು ಇಂತಹ ವ್ಯಕ್ತಿ ಅಂತಾ ಹೇಳಿಸಿ ನೋಡೋಣ. ರಾಣಿ ಹಾಗೂ ಕೆಲ ಪೋಷಕ ಕಲಾವಿದರ ವಿರುದ್ಧ ಕಾನೂನು ಹೋರಾಟದ ಮೂಲಕ ತಕ್ಕ ಉತ್ತರ ನೀಡುತ್ತೇನೆ' ಎಂದು ಡಿಂಗ್ರಿ ನಾಗರಾಜ್ ಪ್ರತಿಕ್ರಿಯೆ ನೀಡಿದರು.
ಇದನ್ನೂ ಓದಿ: 'ಟಿಪ್ಪು ಸುಲ್ತಾನ್ ಆಧುನಿಕ ಕರ್ನಾಟಕದ ಐಕಾನ್'.. ಸಿ ಎಂ ಇಬ್ರಾಹಿಂ ವಿರುದ್ಧ ಚೇತನ್ ಟ್ವೀಟ್