ಮುಂಬೈ(ಮಹಾರಾಷ್ಟ್ರ): ಪ್ರೇಮ ಸಂಬಂಧ ಕಡಿದ 15 ದಿನಗಳ ಬಳಿಕ ಧಾರಾವಾಹಿ ಸೆಟ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ 20 ವರ್ಷದ ಯುವ ನಟಿ ತುನಿಶಾ ಶರ್ಮಾ ಅವರ ಅಂತ್ಯಕ್ರಿಯೆ ಇಂದು ಮುಂಬೈನಲ್ಲಿ 3 ಗಂಟೆಗೆ ನಡೆಯಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ. ಭೀಮಸೇನ ಜೋಶಿ ಆಸ್ಪತ್ರೆಯಲ್ಲಿರುವ ನಟಿಯ ಶವವನ್ನು ಮೀರಾ ರೋಡ್ ಚಿತಾಗಾರದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ.
ದಸ್ತಾನ್ ಎ ಕಾಬೂಲ್ ಧಾರಾವಾಹಿ ಚಿತ್ರೀಕರಣದ ಸೆಟ್ನಲ್ಲೇ ತುನಿಶಾ ಶರ್ಮಾ ಅವರು 2 ದಿನಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡಿದ್ದರು. ಹಲವು ಸಿನಿಮಾಗಳು ಮತ್ತು ಧಾರಾವಾಹಿಗಳಲ್ಲಿ ಮಿಂಚಿದ್ದ ತುನಿಶಾ ಅವರು, ಚಿಕ್ಕವಯಸ್ಸಿನಲ್ಲೇ ಹೆಸರಾಗಿದ್ದರು. 20 ರ ಪ್ರಾಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ.
ಧಾರಾವಾಹಿಯ ಸೆಟ್‌ನಲ್ಲಿ ಆತ್ಮಹತ್ಯೆ: ಶನಿವಾರದಂದು ಬೆಳಗ್ಗೆ ಧಾರಾವಾಹಿಯ ಸೆಟ್‌ನಲ್ಲಿ ತನ್ನ ಭಾಗದ ಮೊದಲ ಹಂತದ ಚಿತ್ರೀಕರಣ ಮುಗಿಸಿದ ತುನಿಶಾ ಬಳಿಕ ಮೇಕಪ್ ರೂಮ್ಗೆ ತೆರಳಿದರು. ಅಲ್ಲಿದ್ದ ಸಿಬ್ಬಂದಿ ಊಟಕ್ಕೆಂದು ಹೊರ ಹೋಗಿದ್ದರು. ಈ ವೇಳೆ ತುನಿಶಾ ಶರ್ಮಾ ಮೇಕಪ್ ರೂಮ್ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದರು. ಸಿಬ್ಬಂದಿ ವಾಪಸ್ ಬಂದಾಗ ನಟಿಯ ಸಾವಿನ ಬಗ್ಗೆ ತಿಳಿದುಬಂದಿತ್ತು.
ಓದಿ: ಶ್ರದ್ದಾ ವಾಕರ್ ಹತ್ಯೆ ಆತಂಕದಿಂದ ತುನಿಶಾಳಿಂದ ಬಲವಂತವಾಗಿ ಬೇರ್ಪಟ್ಟೆ: ಶೀಝಾನ್ ಖಾನ್
ಚಿಕ್ಕ ವಯಸ್ಸಿನಲ್ಲೇ ಖ್ಯಾತಿಯಾಗಿದ್ದ ತುನಿಶಾ ಶರ್ಮಾ ಸಹನಟ ಶೀಝಾನ್ ಖಾನ್ ಎಂಬಾತನ ಜೊತೆಗೆ ಪ್ರೇಮಸಂಬಂಧ ಹೊಂದಿದ್ದರು. ಬಳಿಕ ಇಬ್ಬರೂ 15 ದಿನಗಳ ಹಿಂದಷ್ಟೇ ದೂರವಾಗಿದ್ದರು. ಈ ಕಾರಣಕ್ಕಾಗಿ ಅವರು ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆಯ ಮೇಲೆ ನಟನನ್ನು ಬಂಧಿಸಲಾಗಿದೆ.
ಲವ್ ಜಿಹಾದ್ ಶಂಕೆ: ತುನಿಶಾ ಸಾವಿನ ಹಿಂದೆ ಲವ್ ಜಿಹಾದ್ ಇರಬಹುದಾ ಎಂಬ ಬಗ್ಗೆ ಪೊಲೀಸ್ ತನಿಖೆ ನಡೆಸಬೇಕು ಎಂಬ ಒತ್ತಡ ಕೇಳಿಬಂದಿತ್ತು. ಇದರಂತೆ ಪೊಲೀಸರು ತನಿಖೆ ನಡೆಸುವುದಾಗಿ ತಿಳಿಸಿದ್ದಾರೆ. ಪ್ರಿಯಕರ ಶ್ರೀಝಾನ್ ಖಾನ್ ಅನ್ಯಧರ್ಮಕ್ಕೆ ಸೇರಿದ್ದು, ಈತನ ಕಾರಣಕ್ಕಾಗಿ ನಟಿ ಸಾವನ್ನಪ್ಪಿರಬಹುದು ಎಂದು ಹೇಳಲಾಗಿದೆ. ಶ್ರೀಝಾನ್ನನ್ನು ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಿ ಬಂಧಿಸಲಾಗಿದೆ.
ಯುವ ನಟಿ ಗರ್ಭಿಣಿಯಾಗಿದ್ದ ವದಂತಿ: ಮೂಲಗಳ ಪ್ರಕಾರ ನಟಿ ತುನಿಶಾ ಶರ್ಮಾ ಗರ್ಭಿಣಿಯಾಗಿದ್ದರು. ಆಕೆಯ ಗೆಳೆಯ ಮದುವೆಯಾಗಲು ನಿರಾಕರಿಸಿದ್ದ. ಇದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಮೊದಲು ಹೇಳಲಾಗಿತ್ತು. ಆದರೆ, ಮರಣೋತ್ತರ ಪರೀಕ್ಷೆಯಲ್ಲಿ ನಟಿ ಗರ್ಭಿಣಿ ಆಗಿರಲಿಲ್ಲ. ಅವರು ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ನಟಿಯ ದೇಹದಲ್ಲಿ ಯಾವುದೇ ಗಾಯದ ಗುರುತು ಪತ್ತೆಯಾಗಿಲ್ಲ ಎಂದು ವರದಿ ಬಂದಿದೆ.
ದಾಸ್ತಾನ್ ಇ- ಕಬೂಲ್ ಧಾರಾವಾಹಿಯಲ್ಲಿ ಜೊತೆಯಾಗಿ ನಟಿಸಿದ್ದ ಶ್ರೀಝಾನ್ ಖಾನ್ ವಿರುದ್ಧ ತುನಿಶಾ ಅವರ ತಾಯಿ ದೂರು ದಾಖಲಿಸಿದ್ದು, ನಟನಿಂದ ಮಗಳು ಮಾನಸಿಕ ಒತ್ತಡಕ್ಕೆ ಗುರಿಯಾಗಿದ್ದಳು ಎಂದು ಆರೋಪಿಸಿದ್ದಾರೆ.
ಶೀಝಾನ್ ಖಾನ್ ವಿರುದ್ಧ ಕಠಿಣ ಸ್ವರೂಪದಲ್ಲಿ ವಿಚಾರಣೆ ನಡೆಸಬೇಕು. ಈತ ನನ್ನ ತುನಿಶಾಳನ್ನು ಮದುವೆ ಮಾಡಿಕೊಳ್ಳುವುದಾಗಿ ನಂಬಿಸಿ, ಬಳಸಿಕೊಂಡಿದ್ದಾನೆ. ಅಲ್ಲದೇ ಈ ಮೊದಲು ಆತನಿಗೆ ಬೇರೆ ಹುಡುಗಿಯೊಂದಿಗೆ ಸಂಬಂಧವಿತ್ತು. ಅದಾಗಿಯೂ ತುನಿಶಾಳನ್ನು ನಾಲ್ಕು ತಿಂಗಳು ಕಾಲ ದುರ್ಬಳಕೆ ಮಾಡಿಕೊಂಡಿದ್ದಾನೆ. ಮಗಳ ಸಾವಿಗೆ ಕಾರಣನಾದ ಶೀಝಾನ್ಗೆ ಶಿಕ್ಷೆ ಆಗಲೇಬೇಕು ಎಂದು ಒತ್ತಾಯಿಸಿದ್ದರು.
ಓದಿ: ನಟಿ ತುನಿಶಾ ಶರ್ಮಾ ಆತ್ಮಹತ್ಯೆ: ಸಹನಟ ಶೀಝಾನ್ ಖಾನ್ ಪೊಲೀಸ್ ಕಸ್ಟಡಿಗೆ