ಇತ್ತೀಚೆಗೆ ತೆರೆಕಂಡ ರಮೇಶ್ ಅರವಿಂದ್ ನಟನೆಯ '100' ಚಿತ್ರದಲ್ಲಿ ಕಾಣಿಸಿಕೊಂಡಿದ್ದ ನಟಿ ಪೂರ್ಣಾ ಅಲಿಯಾಸ್ ಶಮ್ನಾ ಕಾಸಿಮ್ ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ದುಬೈ ಮೂಲದ ಉದ್ಯಮಿ ಶನಿದ್ ಆಸಿಫ್ ಅಲಿ ಅವರನ್ನು ನಟಿ ವರಿಸಿದ್ದಾರೆ. ನವ ದಂಪತಿಗಳಿಗೆ ಅಭಿಮಾನಿಗಳು ಶುಭ ಹಾರೈಸಿದ್ದಾರೆ.
ಕುಟುಂಬಸ್ಥರು ಮತ್ತು ಸಂಬಂಧಿಕರ ಸಮ್ಮುಖದಲ್ಲಿ ಮದುವೆ ಕಾರ್ಯಕ್ರಮ ನಡೆದಿದೆ. ದುಬೈಯಲ್ಲಿ ಇವರ ವಿವಾಹ ನೆರವೇರಿದ್ದು, ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಪೂರ್ಣಾ, ದಕ್ಷಿಣ ಭಾರತದ ಟಾಪ್ ನಟಿಯರಲ್ಲಿ ಒಬ್ಬರು. ಕನ್ನಡದ ಜೋಶ್, ರಾಧಾನ ಗಂಡ, 100 ಚಿತ್ರಗಳಲ್ಲಿ ನಟಿಸಿದ್ದಾರೆ. ಸ್ಯಾಂಡಲ್ವುಡ್ನಲ್ಲಿಯೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಮೂಲತಃ ಕೇರಳದ ಕಣ್ಣೂರಿನವರಾಗಿದ್ದು ಕನ್ನಡ ಸೇರಿದಂತೆ ಮಲಯಾಳಂ, ತೆಲುಗು, ತೆಲುಗು ಮತ್ತು ಹಿಂದಿಯ ಹಲವು ಚಿತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.
ಬಿಡುಗಡೆಗೆ ಸಿದ್ಧಗೊಂಡಿರುವ ಟಾಲಿವುಡ್ ನಟ ನಾನಿ ನಟನೆಯ ದಸಾರಾ ಚಿತ್ರದಲ್ಲಿಯೂ ನಟಿಸಿದ್ದಾರೆ. ಸಿನಿಮಾಗಳ ಜೊತೆಗೆ ಶ್ರೀದೇವಿ ಡ್ರಾಮಾ ಕಂಪನಿಯಂತಹ ರಿಯಾಲಿಟಿ ಶೋಗಳಿಂದಲೂ ಗಮನ ಸೆಳೆದಿದ್ದಾರೆ. ಜಬರ್ದಸ್ತ್ ಎಂಬ ತೆಲುಗು ಕಾಮಿಡಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಗಮನ ಸೆಳೆದಿದ್ದರು.
ಇತ್ತೀಚೆಗಷ್ಟೇ ತಾವು ಮದುವೆ ಆಗುತ್ತಿರುವ ವಿಚಾರವನ್ನು ಸಾಮಾಜಿಕ ಜಾಲತಾಣದ ಮೂಲಕ ಹಂಚಿಕೊಂಡಿದ್ದರು. ಆದರೆ, ಯಾರನ್ನು ಮದುವೆ ಆಗುತ್ತಿದ್ದಾರೆ ಎನ್ನುವ ವಿಚಾರವನ್ನು ಮಾತ್ರ ಗುಟ್ಟಾಗಿಟ್ಟಿದ್ದರು.
ಇದನ್ನೂ ಓದಿ: 'ಕೆಜಿಎಫ್' ಹಿಂದಿಕ್ಕಿ ಎರಡನೇ ಅತಿದೊಡ್ಡ ಕನ್ನಡ ಚಿತ್ರವಾಗಿ ಹೊರಹೊಮ್ಮಿದ 'ಕಾಂತಾರ'