ಹೈದರಾಬಾದ್: ದಕ್ಷಿಣ ಭಾರತದ ಖ್ಯಾತ ನಟಿ ಹಾಗೂ ಜೋಶ್ ಸಿನಿಮಾ ಮೂಲಕ ಕನ್ನಡದಲ್ಲೂ ಕಾಣಿಸಿಕೊಂಡಿದ್ದ ಪೂರ್ಣ ಇದೀಗ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಮಲಯಾಳಂ, ತೆಲುಗು, ತಮಿಳು ಮತ್ತು ಕನ್ನಡ ಸಿನಿಮಾಗಳಲ್ಲಿ ನಟಿಸಿರುವ ತಾರೆ ಪೂರ್ಣಾ ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಅವರ ನಿಜವಾದ ಹೆಸರು ಶಮ್ನಾ ಕಾಸಿಮ್ ಆಗಿದ್ದು, ಸಿನಿಮಾದಲ್ಲಿ ಪೂರ್ಣ ಎಂದೇ ಚಿರಪರಿಚಿತರು. ಇತ್ತೀಚೆಗೆ ನಿಶ್ಚಿತಾರ್ಥ ಮಾಡಿಕೊಂಡಿದ್ದು ಅವರ ಫೋಟೋಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.
![ACTRESS POORNA ENGAGEMENT SHAMNA KASIM MARRIAGE](https://etvbharatimages.akamaized.net/etvbharat/prod-images/15444286_2_0106newsroom_1654083119_415.jpg)
2004ರಲ್ಲಿ ಮಂಜು ಪೋಲೂರು ಪೆಂಕುಟ್ಟಿ ಎಂಬ ಮಲಯಾಳಿ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅವರು ಕನ್ನಡ ಸೇರಿದಂತೆ ಹಲವು ಭಾಷೆಯ ಸಿನಿಮಾದಲ್ಲಿ ನಾಯಕಿ ನಟಿಯಾಗಿ ಗುರುತಿಸಿಕೊಂಡಿದ್ದಾರೆ. 'ತಲೈವಿ', '100' (ಕನ್ನಡ), 'ದೃಶ್ಯಂ 2', 'ಅಖಂಡ' ಇವು ಅವರ ನಟನೆಯ ಇತ್ತೀಚೆಗೆ ತೆರೆಕಂಡ ಸಿನಿಮಾಗಳಾಗಿವೆ. ಕೇವಲ ಸಿನಿಮಾ ಅಷ್ಟೇ ಅಲ್ಲದೇ, ಜನಪ್ರಿಯ ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರರಾಗಿಯೂ ಅವರು ಪ್ರೇಕ್ಷಕರನ್ನು ರಂಜಿಸುವ ಕೆಲಸ ಮಾಡುತ್ತಿದ್ದಾರೆ.
![ACTRESS POORNA ENGAGEMENT SHAMNA KASIM MARRIAGE](https://etvbharatimages.akamaized.net/etvbharat/prod-images/15444286_1_0106newsroom_1654083119_20.jpg)
ಯುಎಇ ಮೂಲದ ಉದ್ಯಮಿ ಶನೀದ್ ಆಸಿಫ್ ಅಲಿ ಅವರನ್ನು ಶೀಘ್ರದಲ್ಲೇ ಮದುವೆಯಾಗುವುದಾಗಿ ಪೂರ್ಣಾ ಹೇಳಿದ್ದಾರೆ. ಕುಟುಂಬ ಸದಸ್ಯರ ಆಶೀರ್ವಾದದೊಂದಿಗೆ ನಾವು ನಮ್ಮ ಜೀವನದಲ್ಲಿ ಹೊಸ ಹಂತವನ್ನು ಪ್ರಾರಂಭಿಸುತ್ತಿದ್ದೇವೆ. ಈಗ ನಮ್ಮ ಬಂಧವು ಔಪಚಾರಿಕವಾಗಿದೆ ಎಂದು ಅವರು ಶೀರ್ಷಿಕೆ ಬರೆದಿದ್ದಾರೆ. ಅವರು ಹಂಚಿಕೊಂಡ ಪೋಸ್ಟ್ ನೋಡಿದ ಸಿನಿ ಸೆಲೆಬ್ರಿಟಿಗಳು ಮತ್ತು ನೆಟಿಜನ್‌ಗಳು ಈ ಜೋಡಿಗೆ ಅಭಿನಂದನೆ ಸಲ್ಲಿಸುತ್ತಿದ್ದಾರೆ. ಅವರ ನಟನೆಯ ಹಲವು ಚಿತ್ರಗಳು ಇದೀಗ ಶೂಟಿಂಗ್ ಹಂತದಲ್ಲಿವೆ.
![ACTRESS POORNA ENGAGEMENT SHAMNA KASIM MARRIAGE](https://etvbharatimages.akamaized.net/etvbharat/prod-images/15444286_3_0106newsroom_1654083119_292.jpg)