ಬಾಲಿವುಡ್ ನಟಿ ಕಂಗನಾ ರಣಾವತ್ ಅವರು ತಮ್ಮ ಮುಂದಿನ ಸಿನಿಮಾ 'ತೇಜಸ್' ಪ್ರಚಾರದ ಬ್ಯುಸಿಯಾಗಿದ್ದು, ಮಂಗಳವಾರ ಪ್ರಚಾರಕ್ಕಾಗಿ ಪ್ರಯಾಣಿಸುತ್ತಿದ್ದಾಗ ವಿಮಾನದಲ್ಲಿ ಆಕಸ್ಮಿಕವಾಗಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರನ್ನು ಭೇಟಿಯಾದರು. ವಿಮಾನವೇರಿದಾಗ ತಮ್ಮ ಪಕ್ಕದ ಸೀಟ್ನಲ್ಲಿ ಅಜಿತ್ ದೋವಲ್ ಅವರನ್ನು ಎದುರುಗೊಂಡಿದ್ದಾರೆ. ಈ ಕುರಿತು ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಂ ಖಾತೆಯಲ್ಲಿ ದೋವಲ್ ಜತೆಗೆ ವಿಮಾನದಲ್ಲಿ ತೆಗೆದ ಕೆಲವು ಸೆಲ್ಫಿಫೋಟೋಗಳನ್ನು ಸ್ಟೋರಿ ಹಾಕಿಕೊಂಡಿದ್ದಾರೆ.
ಫೋಟೋಗಳೊಂದಿಗೆ, 'ಎಂತಹಾ ಅದೃಷ್ಟ. ಇಂದು ಬೆಳಿಗ್ಗೆ ವಿಮಾನದಲ್ಲಿ ನನ್ನ ಪಕ್ಕದಲ್ಲಿ ಯಾರು ಕುಳಿತಿದ್ದರೆಂದು ಊಹಿಸಿ? ಸಾರ್ವಕಾಲಿಕ ಶ್ರೇಷ್ಠ ವ್ಯಕ್ತಿ' ಎಂದು ಬರೆದಿದ್ದಾರೆ. ಇನ್ನೊಂದು ಫೋಟೋದಲ್ಲಿ 'ಈ ವಾರ ನನ್ನ ತೇಜಸ್ ಸಿನಿಮಾ ಬಿಡುಗಡೆಯಾಗಲಿದೆ. ನಮ್ಮ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಜೀ ಅವರನ್ನು ಭೇಟಿಯಾಗುವ ಮೂಲಕ ನಮ್ಮ ಎಲ್ಲಾ ಸೈನಿಕರ ಸ್ಪೂರ್ತಿ ನನಗೆ ಸಿಕ್ಕಿದೆ ಎಂದು ಭಾವಿಸುತ್ತೇನೆ. ನಾನು ಇದನ್ನು ಒಳ್ಳೆಯ ಶಕುನವೆಂದು ಪರಿಗಣಿಸುತ್ತೇನೆ ಜೈ ಹಿಂದ್' ಎಂದಿದ್ದಾರೆ.
ಕೆಲವು ದಿನಗಳ ಹಿಂದೆ ದೆಹಲಿಯ ಭಾರತೀಯ ವಾಯುಪಡೆ ಆಡಿಟೋರಿಯಂನಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಹಲವಾರು ಭಾರತೀಯ ವಾಯುಪಡೆ ಅಧಿಕಾರಿಗಳಿಗೆ ತೇಜಸ್ ಸಿನಿಮಾದ ವಿಶೇಷ ಪ್ರದರ್ಶನವನ್ನು ಕಂಗನಾ ಆಯೋಜಿಸಿದ್ದರು. ಸಿನಿಮಾ ಪ್ರದರ್ಶನದ ಕೆಲವು ಚಿತ್ರಗಳನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದರು. "ತೇಜಸ್ ತಂಡವು ಗೌರವಾನ್ವಿತ ರಕ್ಷಣಾ ಸಚಿವ ರಾಜನಾಥ್ ಸಿಂಗ್‌ಜೀ ಮತ್ತು ಭಾರತೀಯ ವಾಯುಪಡೆಯ ಅನೇಕ ಗಣ್ಯರಿಗೆ ಭಾರತೀಯ ವಾಯುಪಡೆಯ ಸಭಾಂಗಣದಲ್ಲಿ ವಿಶೇಷ ಸ್ಕ್ರೀನಿಂಗ್ ನಡೆಸಿತು" ಎಂದು ಕ್ಯಾಪ್ಷನ್ ಹಂಚಿಕೊಂಡಿದ್ದರು.
ಸರ್ವೇಶ್ ಮೇವಾರ ಆ್ಯಕ್ಷನ್ ಕಟ್ ಹೇಳಿರುವ ಕಂಗನಾ ವಾಯುಪಡೆಯ ಪೈಲಟ್ ತೇಜಸ್ ಗಿಲ್ ಪಾತ್ರದಲ್ಲಿ ಅಭಿನಯಿಸಿರುವ ಸಿನಿಮಾ ಅಕ್ಟೋಬರ್ 27 ರಂದು ಬೆಳ್ಳಿಪರದೆಯ ಮೇಲೆ ಮೂಡಿ ಬರಲಿದೆ.
ಇದನ್ನೂ ಓದಿ: ಕೆಂಪು ಕೋಟೆಯಲ್ಲಿ ರಾವಣ ದಹನ ಮಾಡಿ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ ನಟಿ ಕಂಗನಾ ರಣಾವತ್