ಕಾಮಿಡಿ ಮ್ಯಾನರಿಸಂನಿಂದಲೇ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡಿರುವ ನಟ ತಬಲ ನಾಣಿ. ನಟ, ಪೋಷಕ ಪಾತ್ರಗಳನ್ನು ಮಾಡುತ್ತಾ ಕನ್ನಡಿಗರ ಮನಗೆದ್ದಿರುವ ತಬಲ ನಾಣಿ ಈಗ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಹೌದು, ಹೊಸ ಪ್ರತಿಭೆಗಳಾದ ಸಂಜಯ್ ಹಾಗೂ ಜೀವಿತ ವಸಿಷ್ಠ ಅಭಿನಯದ ಹೆಸರಿಡದ ಚಿತ್ರಕ್ಕೆ ತಬಲ ನಾಣಿ ಬಂಡವಾಳ ಹೂಡುತ್ತಿದ್ದಾರೆ.
ಚಿತ್ರದ ಮುಹೂರ್ತ ಸಮಾರಂಭ: ಕೆಆರ್ಎಸ್ ಪ್ರೊಡಕ್ಷನ್ಸ್ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ಚೊಚ್ಚಲ ಚಿತ್ರದ ಮುಹೂರ್ತ ಸಮಾರಂಭ ಇಂದು ನೆರವೇರಿದೆ. ಈಗಾಗಲೇ ಜೂಟಾಟ, ಗುಬ್ಬಚ್ಚಿ ಸಿನಿಮಾ ನಿರ್ದೇಶಿಸಿರುವ ಅಥರ್ವ ಆರ್ಯ ನಿರ್ದೇಶನದಲ್ಲಿ ಮೂಡಿ ಬರಲಿರುವ ಮೂರನೇ ಚಿತ್ರ ಇದಾಗಿದೆ. ಸಿನಿಮಾದಲ್ಲಿ ಸಂಜಯ್ ಹಾಗೂ ಜೀವಿತ ವಸಿಷ್ಠ ಅವರು ನಾಯಕ ನಾಯಕಿಯಾಗಿ ಮುಖ್ಯ ಭೂಮಿಕೆಯಲ್ಲಿದ್ದು, ನೆನಪಿರಲಿ ಖ್ಯಾತಿಯ ಪ್ರೇಮ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಲಿದ್ದಾರೆ.
ಚಿತ್ರದಲ್ಲಿ ನಟ ಪ್ರೇಮ್: ನಟ ತಬಲ ನಾಣಿ ಮಾತನಾಡಿ, ಮೊದಲ ಬಾರಿ ಸಿನಿಮಾ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಸಮಾನ ಮನಸ್ಕ ಸ್ನೇಹಿತರೆಲ್ಲರೂ ಸೇರಿ ಕೆಆರ್ಎಸ್ ಪ್ರೊಡಕ್ಷನ್ಸ್ ಎಂಬ ಬ್ಯಾನರ್ ಅಡಿ ಈ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದೇವೆ. ನೆನಪಿರಲಿ ಪ್ರೇಮ್ ಚಿತ್ರದಲ್ಲಿ ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ, ಜೊತೆಗೆ ಇಡೀ ತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ. ಈ ಚಿತ್ರದ ಕಥೆ ಮತ್ತು ನಿರ್ದೇಶನವನ್ನು ಅಥರ್ವ ಆರ್ಯ ಮಾಡುತ್ತಿದ್ದು, ಸಂಭಾಷಣೆಯನ್ನು ನಾನು ಹಾಗೂ ಅಥರ್ವ ಆರ್ಯ ಬರೆದಿದ್ದೇವೆ. ಜೊತೆಗೆ ಈ ಚಿತ್ರದಲ್ಲಿ ನಾನು ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದೇನೆ ಎಂದು ತಿಳಿಸಿದರು.
ಹೊಸಬರಿಗೆ ಅವಕಾಶ: ನಟ ಪ್ರೇಮ್ ಮಾತನಾಡಿ ತಬಲ ನಾಣಿ ಮತ್ತು ಸ್ನೇಹಿತರು ಕೆಆರ್ಎಸ್ ಪ್ರೊಡಕ್ಷನ್ಸ್ ಮೂಲಕ ಮೊದಲ ಬಾರಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ. ಪ್ರೊಡಕ್ಷನ್ ಮೊದಲ ಸಿನಿಮಾದಲ್ಲಿ ಹೊಸಬರಿಗೆ ಅವಕಾಶ ಕೊಡಬೇಕು ಎನ್ನೋದು ಅವರ ಆಸೆ. ಅದರಂತೆ ಹೊಸ ನಿರ್ದೇಶಕ, ನಟ, ನಟಿಗೆ ಅವಕಾಶ ನೀಡಿದ್ದಾರೆ. ನಾನೂ ಕೂಡ ಈ ಚಿತ್ರದಲ್ಲಿ ಒಂದು ಪಾತ್ರ ಮಾಡುತ್ತಿದ್ದೇನೆ. ಚಿತ್ರದ ಕಥೆ ಕೇಳಿ ತುಂಬಾ ಇಷ್ಟ ಆಯ್ತು. ಸಿನಿಮಾದಲ್ಲಿ ತುಂಬಾ ಚೆನ್ನಾಗಿರೋ ಟ್ವಿಸ್ಟ್ ಇದೆ. ನನ್ನ ಪಾತ್ರ ತುಂಬಾ ಇಂಟ್ರಸ್ಟಿಂಗ್ ಆಗಿದೆ. ಯಾರಿಗೂ ಈ ಪಾತ್ರ ಬಿಟ್ಟುಕೊಡಬಾರದು, ನಾನೇ ಮಾಡಬೇಕು ಎಂದು ಇಷ್ಟಪಟ್ಟು ಮಾಡುತ್ತಿರುವ ಪಾತ್ರವಿದು. ಹೊಸ ಕಲಾವಿದರು, ನಿರ್ದೇಶಕರಿಗೆ ಪ್ರೋತ್ಸಾಹ ನೀಡಿ ಎಂದು ಕೇಳಿಕೊಂಡರು.
ತಂದೆಯ ಮಹತ್ವ ಸಾರುವ ಸಿನಿಮಾ: ನಿರ್ದೇಶಕ ಅಥರ್ವ ಆರ್ಯ ಮಾತನಾಡಿ, ತಬಲ ನಾಣಿ ಸರ್ ಜೊತೆ 12 ವರ್ಷದಿಂದ ಕೆಲಸ ಮಾಡುತ್ತಿದ್ದೇನೆ. ತುಂಬಾ ದಿನಗಳಿಂದ ಸಿನಿಮಾ ಮಾಡಬೇಕು ಎಂದು ಇಬ್ಬರು ಪ್ಲ್ಯಾನ್ ಮಾಡುತ್ತಿದ್ದೆವು. ಈಗ ಕಾಲ ಕೂಡಿ ಬಂದಿದೆ. ಇದು ಕಂಟೆಂಟ್ ಬೇಸ್ಡ್ ಸಿನಿಮಾ. ತಂದೆಯ ಮಹತ್ವ ಸಾರುವ ಚಿತ್ರ. ಕುಟುಂಬದಲ್ಲಿ ಅಥವಾ ಸಮಾಜದಲ್ಲಿ ತಂದೆಗೆ ಬೆಲೆ ಸಿಗದೇ ಇದ್ದಾಗ, ಕಡೆಗಣನೆಗೆ ಒಳಗಾದಾಗ ಅವರು ಯಾವ ರೀತಿ ಸಫರ್ ಆಗುತ್ತಾರೆ ಅನ್ನೋದು ಚಿತ್ರದ ಒನ್ ಲೈನ್ ಕಹಾನಿ.
ತಬಲ ನಾಣಿ ತಂದೆ ಪಾತ್ರವನ್ನು ನಿರ್ವಹಿಸುತ್ತಿದ್ದು, ಈ ಚಿತ್ರದ ಮೂಲಕ ರಂಗಭೂಮಿ ಕಲಾವಿದರಾದ ಸಂಜಯ್ ಹಾಗೂ ಡಾನ್ಸರ್ ಆಗಿರುವ ಜೀವಿತ ವಸಿಷ್ಠ ಚಿತ್ರರಂಗಕ್ಕೆ ಪರಿಚಿತರಾಗುತ್ತಿದ್ದಾರೆ. ನೆನಪಿರಲಿ ಪ್ರೇಮ್ ಕೂಡ ಚಿತ್ರದ ಪ್ರಮುಖ ಪಾತ್ರವೊಂದನ್ನು ನಿಭಾಯಿಸುತ್ತಿದ್ದಾರೆ. ಸಿನಿಮಾದ ಟೈಟಲ್ ಬಗ್ಗೆ ಸದ್ಯದಲ್ಲೇ ಅಪ್ಡೇಟ್ ನೀಡಲಾಗುವುದು ಎಂದು ಚಿತ್ರದ ಬಗ್ಗೆ ಮಾಹಿತಿ ಹಂಚಿಕೊಂಡ್ರು.
ಇದನ್ನೂ ಓದಿ: ನಾನು ಓಡಿಹೋಗಿ ಮದುವೆಯಾಗಲ್ಲ: ನಟಿ ಪ್ರೇಮಾ ಗರಂ
ನಾಯಕ ನಟ ಸಂಜಯ್ ಮಾತನಾಡಿ, ಈ ಚಿತ್ರದ ಪಾತ್ರ ಸಿಕ್ಕಿರೋದು ಲವ್ಲಿ ಸ್ಟಾರ್ ಪ್ರೇಮ್ ಅವರಿಂದ. ಅವರಿಗೂ ಹಾಗೂ ತಬಲ ನಾಣಿ ಸರ್ಗೂ ಧ್ಯನ್ಯವಾದಗಳು. ಒಂದು ಅದ್ಭುತ ಸಿನಿಮಾ ಇದು. ಚಿತ್ರದಲ್ಲಿ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಹೊಸಬರಿಗೆ ಸಹಕಾರ ನೀಡಿ ಪ್ರೋತ್ಸಾಹಿಸಿ ಎಂದರು. ಚಿತ್ರದ ನಾಯಕಿ ಜೀವಿತ ವಸಿಷ್ಠ ಮಾತನಾಡಿ, ಕೆಆರ್ಎಸ್ ಪ್ರೊಡಕ್ಷನ್ಸ್ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಿದೆ. ಒಂದೊಳ್ಳೆ ಕಾನ್ಸೆಪ್ಟ್ ಈ ಚಿತ್ರದಲ್ಲಿದೆ.
ನನ್ನ ಪಾತ್ರ ತುಂಬಾ ಚೆನ್ನಾಗಿದೆ. ನಟನೆಗೆ ತುಂಬಾ ಅವಕಾಶವಿದೆ. ಅವಕಾಶ ನೀಡಿದ್ದಕ್ಕಾಗಿ ನಿರ್ದೇಶಕರು ಹಾಗೂ ನಿರ್ಮಾಪಕರಿಗೆ ಧನ್ಯವಾದಗಳು ಅಂದರು. ಇವರ ಜೊತೆಗೆ ಬಾಲ ರಾಜ್ವಾಡಿ, ಗಿರೀಶ್ ಜತ್ತಿ, ಮಿತ್ರ ಸೇರಿದಂತೆ ಸಾಕಷ್ಟು ಕಲಾವಿದರು ಈ ಸಿನಿಮಾದಲ್ಲಿ ಅಭಿನಯಿಸಲಿದ್ದಾರೆ.
ಇದನ್ನೂ ಓದಿ: ಪಠಾಣ್ ಚಿತ್ರಕ್ಕೆ ಯಾವುದೇ ಅಡಚಣೆ ಆಗುವುದಿಲ್ಲ : ಸಿಎಂ ಶರ್ಮಾ ಅಭಯ
ಕೆಆರ್ಎಸ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಾಗಾರ್ಜುನ ಆರ್.ಡಿ ಕ್ಯಾಮರಾ ವರ್ಕ್, ಆಕಾಶ್ ಪರ್ವ ಸಂಗೀತ ನಿರ್ದೇಶನ, ವೇದಿಕ್ ವೀರ ಸಂಕಲನವಿರಲಿದೆ. ಬೆಂಗಳೂರು, ಮೈಸೂರು, ಚಿಕ್ಕಮಗಳೂರಿನಲ್ಲಿ 45 ರಿಂದ 60 ದಿನಗಳ ಕಾಲ ಚಿತ್ರೀಕರಣ ಮಾಡಲು ಚಿತ್ರತಂಡ ಪ್ಲ್ಯಾನ್ ಮಾಡಿಕೊಂಡಿದೆ.